ಚಾಮರಾಜನಗರ: ತಾಲೂಕಿನ ಹೊನ್ನಳ್ಳಿ ಗ್ರಾಮದ ವ್ಯಾಪ್ತಿಯ ಎಲಚಿಕೆರೆಯಲ್ಲಿ ಕಾಡಾನೆಗಳ ಹಿಂಡು ಕಾಣಿಸಿಕೊಂಡು ಆತಂಕ ಮೂಡಿಸಿದ್ದು, ಅರಣ್ಯ ಇಲಾಖೆ ಕಾರ್ಯಾಚರಣೆಗಿಳಿದು ಕಾಡಿಗಟ್ಟುವ ಪ್ರಯತ್ನ ನಡೆಸಿದೆ.
ಶನಿವಾರ ಮುಂಜಾನೆ ಗ್ರಾಮದ ರೈತ ಚಿಕ್ಕಮಾದೇಗೌಡ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಹಸು ಮೇಲೆ ದಾಳಿ ಮಾಡಿ ಸಾಯಿಸಿವೆ. ಚಿಕ್ಕಮಾದೇಗೌಡ, ಆತನ ಪತ್ನಿ ಮತ್ತು ಮಕ್ಕಳು ಎಲಚಗೆರೆ ಬೆಟ್ಟದ ತಪ್ಪಲಿನ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಜಮೀನಿನಲ್ಲಿ ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಶನಿವಾರ ಹಸುವಿನ ಮೇಲೆ ದಾಳಿ ಮಾಡಿದಾಗ ಕೂದಲೆಳೆಯ ಅಂತರದಲ್ಲಿ ಪಾರಾಗಿರುವುದಾಗಿ ಚಿಕ್ಕಮಾದೇಗೌಡ ತಿಳಿಸಿದ್ದಾರೆ.
ಎಲಚೆಕೆರೆ ಬೆಟ್ಟದಿಂದ ಮೇವು ಹರಿಸಿ ಬರುವ ಕಾಡಾನೆಗಳ ಹಿಂಡು ಜಮೀನಿನಲ್ಲಿ ಬೆಳೆದಿರುವ ಫಸಲನ್ನು ನಾಶ ಮಾಡುತ್ತಿವೆ. ಈ ಪ್ರದೇಶ ವ್ಯಾಪ್ತಿಯಲ್ಲಿ ರೈತರು ಬೇಸಾಯ ಮಾಡುವುದು ಕಷ್ಟವಾಗಿದೆ. ಕಾಡಾನೆಗಳ ಉಪಟಳ ತಡೆಯುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಅನೇಕ ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನಮಗೆ ಇಲ್ಲಿ ಜೀವನ ಸಾಗಿಸಲು ತುಂಬಾ ಭಯವಾಗುತ್ತಿದೆ. ಅಲ್ಲದೇ ಅಕ್ಕಪಕ್ಕದ ಜಮೀನುಗಳ ಬೆಳೆಗಳನ್ನು ನಾಶ ಮಾಡುತ್ತಿವೆ. ಇಲ್ಲಿ ಎರಡು, ಮೂರು ಗುಂಪುಗಳಾಗಿ ಆನೆಗಳು ಬೆಳೆ ನಾಶ ಪಡಿಸುತ್ತಿವೆ. ರಾತ್ರಿ ಆಗುತ್ತಿದ್ದಂತೆ ಗುಂಪು ಗುಂಪಾಗಿ ದಾಳಿ ಮಾಡ್ತೀವಿ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಅರಣ್ಯ ಸೇರಿದ ಆನೆಗಳು: ಹೊನ್ನಳ್ಳಿ ಭಾಗದಲ್ಲಿ ಅರಣ್ಯ ಪ್ರದೇಶ ಕಡಿಮೆ ಇದ್ದು, ತಮಿಳುನಾಡಿನ ಸತ್ಯಮಂಗಲ ಹುಲಿ ಸಂರಕ್ಷಿತಾರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಕಾರಣಕ್ಕೆ ಅಲ್ಲಿಂದಲೇ ಆನೆಗಳ ಗುಂಪು ಬಂದಿವೆ ಎಂದು ಅರಣ್ಯ ಇಲಾಖೆ ತಿಳಿಸಿದೆ. 12 ಆನೆಗಳಿದ್ದ ಒಂದು ಗುಂಪನ್ನು ಸತ್ಯಮಂಗಲ ಹುಲಿ ಸಂರಕ್ಷಿತಾರಣ್ಯ ಪ್ರದೇಶದತ್ತ ಓಡಿಸಿದ್ದೇವೆ. ಎಲಚಿಕೆರೆಯಿಂದ ತಮಿಳುನಾಡಿನ ಅರಳವಾಡಿವರೆಗೂ ಆನೆಗಳನ್ನು ಓಡಿಸಿದ್ದೇವೆ. ಸದ್ಯಕ್ಕೆ ಬೇರೆ ಕಾಡಾನೆಗಳ ಹಿಂಡು ಕಂಡುಬಂದಿಲ್ಲ. ಗ್ರಾಮದಲ್ಲೇ ಅರಣ್ಯ ಸಿಬ್ಬಂದಿ ವಾಸ್ತವ್ಯ ಹೂಡಿದ್ದು, ಮತ್ತೆ ಆನೆಗಳ ಗುಂಪು ಕಂಡುಬಂದರೆ ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯಾಚರಣೆ ನಡೆಸಲಾಗುವುದು. ಪ್ರಸ್ತುತ ಕಾರ್ಯಾಚರಣೆಯಲ್ಲಿ 50ಕ್ಕೂ ಹೆಚ್ಚು ಸಿಬ್ಬಂದಿ ಮತ್ತು ಸೋಲಿಗರ ತಂಡ ಭಾಗವಹಿಸಿತ್ತು ಎಂದು ಎಸಿಎ್ ಸುರೇಶ್ ಮಾಹಿತಿ ನೀಡಿದರು.
ಪರಿಹಾರ ವಿತರಿಸಿದ ಶಾಸಕ: ವಿಷಯ ತಿಳಿದು ಎಲಚಿಕೆರೆಗೆ ಭೇಟಿ ನೀಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ, ಹಸು ಕಳೆದುಕೊಂಡ ರೈತ ಚಿಕ್ಕಮಾದೇಗೌಡಗೆ ವೈಯಕ್ತಿಕವಾಗಿ ಪರಿಹಾರ ವಿತರಣೆ ಮಾಡಿದರು.
ಸ್ಥಳದಲ್ಲಿಯೇ ಇದ್ದ ಅರಣ್ಯಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಪದೇ ಪದೆ ಕಾಡಾನೆಗಳು ಈ ಭಾಗದ ರೈತರಿಗೆ ತೊಂದರೆ ನೀಡುತ್ತಿವೆ. ರೈತರ ಜಮೀನುಗಳಿಗೆ ಕಾಡಾನೆ ಬಾರದಂತೆ ತಡೆಯಲು ರೈಲು ಕಂಬಿಗಳನ್ನು ಕಾಡಂಚಿನಲ್ಲಿ ಅಳವಡಿಸಿ, ಕಂದಕಗಳನ್ನು ನಿರ್ಮಾಣ ಮಾಡಬೇಕು. ಕಾಡಾನೆಗಳ ಹಾವಳಿ ತಡೆಯಲು ಹೆಚ್ಚಿನ ಸಿಬ್ಬಂದಿಯನ್ನು ಈ ಭಾಗದಲ್ಲಿ ನಿಯೋಜನೆ ಮಾಡಬೇಕು. ಆನೆಗಳನ್ನು ಕಾಡಿಗೆ ಅಟ್ಟಲು ರೈತರಿಗೆ ಅನುಕೂಲವಾಗುವಂತೆ ತೋಪು, ಸಲಕರಣೆ ಬ್ಯಾಟರಿ ಸೇರಿದಂತೆ ಇತರ ಸಾಮಗ್ರಿಗಳನ್ನು ನೀಡಬೇಕು ಎಂದು ಸಲಹೆ ನೀಡಿದರು. ಡಿಸಿಎಫ್‌ಗೆ ಕರೆ ಮಾಡಿ, ಸ್ಥಳಕ್ಕೆ ಬಂತು ಪರಿಶೀಲನೆ ಮಾಡುವ ಜತೆಗೆ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ ಹುಲಿ ದಾಳಿಯಿಂದ ಗಾಯಗೊಂಡಿರುವ ಹೊನ್ನಹಳ್ಳಿ ಗ್ರಾಮದ ರೈತ ಚಿಕ್ಕಮಾದೇಗೌಡಗೆ ಶಾಸಕರು ವೈಯಕ್ತಿಕ ಪರಿಹಾರ ನೀಡಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ. ರವಿಕುಮಾರ್, ಮುಖಂಡರಾದ ಎ.ಎಸ್. ಗುರುಸ್ವಾಮಿ, ಎಸ್.ಸೋಮನಾಯಕ, ಬೊಕ್ಕಪುರ ಮಲ್ಲೇಶ್, ತಹಸೀಲ್ದಾರ್ ಬಸವರಾಜು, ಮಲ್ಲಿಕಾರ್ಜುನ್, ಅರಕಲವಾಡಿ ಮಹೇಶ್, ಹೊನ್ನಹಳ್ಳಿ ಪ್ರಕಾಶ್, ಬಸವಣ್ಣ ಇದ್ದರು.