ಹನೂರು: ಇತರ ಜಿಲ್ಲೆಗಳಿಗಿಂತ ಚಾಮರಾಜನಗರ ಜಿಲ್ಲೆಯ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಮುಂದಿರುವುದಕ್ಕೆ ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳೇ ಕಾರಣ ಎಂದು ಶಾಸಕ ಆರ್. ನರೇಂದ್ರ ಪ್ರಶಂಸೆ ವ್ಯಕ್ತಪಡಿಸಿದರು.
ಪಟ್ಟಣದ ಕ್ರಿಸ್ತರಾಜ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹನೂರು ಭಾಗವು ಆರ್ಥಿಕವಾಗಿ ಸ್ವಲ್ಪ ಹಿಂದುಳಿದಿರಬಹುದು. ಆದರೆ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದ್ದು, ಗಮನಾರ್ಹ ಸಾಧನೆ ಮಾಡಿದೆ. 20 ವರ್ಷಗಳಿಂದ ಶೈಕ್ಷಣಿಕವಾಗಿ ಪ್ರಗತಿ ಹೊಂದಿದ್ದು, ಕಳೆದ 5 ವರ್ಷದಿಂದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಪಡೆಯುತ್ತಾ ಬಂದಿದೆ. ಅಲ್ಲದೆ ಪಿಯುಸಿಯಲ್ಲೂ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಈ ಹಿಂದೆ ಬ್ರಿಟಿಷ್ ಸರ್ಕಾರ ಇದ್ದಂತಹ ಸಂದರ್ಭದಲ್ಲಿ ಈ ಭಾಗವು ತಮಿಳುನಾಡಿಗೆ ಸೇರಿತ್ತು. ಈ ವೇಳೆ ಆಗಮಿಸಿದ ಕ್ರಿಶ್ಚಿಯನ್ ಧರ್ಮ ಗುರುವೊಬ್ಬರು ಮಕ್ಕಳಿಗೆ ಶಿಕ್ಷಣದ ಅಗತ್ಯತೆಯನ್ನು ಮನಗಂಡು ಮಾರ್ಟಳ್ಳಿ ಭಾಗದಲ್ಲಿ ಶಿಕ್ಷಣ ಸಂಸ್ಥೆಯನ್ನು ತೆರೆದರು. ಇದರ ಪರಿಣಾಮ ಈ ಭಾಗದಲ್ಲಿ ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಹೆಚ್ಚು ಜನರು ಸೇವೆ ಸಲ್ಲಿಸುತ್ತಿರುವುದೇ ಸಾಕ್ಷಿ ಎಂದರು.
ಇತ್ತೀಚಿನ ದಿನಗಳಲ್ಲಿ ಮಕ್ಕಳು ಹೆಚ್ಚಿನ ಅಂಕ ಗಳಿಸಬೇಕು ಎನ್ನುವ ಮನೋಭಾವನೆಯನ್ನು ಪಾಲಕರು ಹೊಂದಿದ್ದಾರೆ. ಆದರೆ ಅಂಕ ಗಳಿಸಿದರೆ ಮಾತ್ರ ಶಿಕ್ಷಣ ಪರಿಪೂರ್ಣವಾಗದು. ಆದ್ದರಿಂದ ಪಾಲಕರು ಮಕ್ಕಳ ಗುಣ, ನಡತೆ ಹಾಗೂ ಹಾವ-ಭಾವವನ್ನು ಪ್ರತಿನಿತ್ಯ ಗಮನಿಸಬೇಕು. ಈ ಮೂಲಕ ನೈತಿಕ ನಿಯಮಗಳನ್ನು ಅನುಸರಿಸುವಂತೆ ಮಾಡುವುದರ ಮೂಲಕ ಸನ್ನಡತೆಯುಳ್ಳ ವ್ಯಕ್ತಿಯಾಗಿ ರೂಪಿಸಬೇಕು. ಜತೆಗೆ ಅವರಲ್ಲಿರುವ ಪ್ರತಿಭೆ ಗುರುತಿಸಿ, ಹೊರತೆಗೆದು ಸಾಧನೆ ಮಾಡಲು ಪ್ರೇರೇಪಿಸಬೇಕು. ಅಲ್ಲದೆ ಇತ್ತೀಚೆಗೆ ವಿದ್ಯಾರ್ಥಿಗಳು ಮೊಬೈಲ್‌ನಿಂದ ಪ್ರೇರಿತರಾಗಿದ್ದು, ಹೆಚ್ಚು ಸಮಯ ಅದರ ಬಳಕೆಯಲ್ಲಿ ತೊಡಗಿದ್ದಾರೆ. ಮೊಬೈಲ್ ಬಳಕೆಯಿಂದ ಅನುಕೂಲವೂ ಉಂಟು, ಅಷ್ಟೇ ಅನನುಕೂಲವು ಇದೆ. ಇದರಿಂದ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಆದ್ದರಿಂದ ಮೊಬೈಲ್ ಬಳಕೆಯಿಂದ ಮಕ್ಕಳು ಆದಷ್ಟು ದೂರವಿರುವಂತೆ ನೋಡಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು.
ಕ್ರೈಸ್ತ ಪ್ರಾಂತೀಯ ಧರ್ಮಗುರು ಹಾಗೂ ಎಂಡಿಇಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಅಂತೋಣಿ ವಿಲಿಯಂ ಮಾತನಾಡಿ, ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳು ಕೇವಲ ಕ್ರೈಸ್ತ ಸಮುದಾಯಕ್ಕೆ ಮಾತ್ರ ಸೀಮಿತವಲ್ಲ. ಎಲ್ಲ ವರ್ಗದ ಮಕ್ಕಳಿಗೂ ಶಿಕ್ಷಣ ನೀಡಲಾಗುತ್ತಿದೆ. ಇತ್ತೀಚೆಗೆ ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ಹಿನ್ನಡೆಯಾಗುತ್ತಿದೆ. ಆದ್ದರಿಂದ ಮಕ್ಕಳಲ್ಲಿ ವಿನಯತೆ, ಸರಳತೆ, ಸನ್ನಡತೆ ಕಲಿಸುವುದರ ಮೂಲಕ ಸುಸಂಸ್ಕೃತ ವ್ಯಕ್ತಿಯನ್ನಾಗಿ ರೂಪಿಸಬೇಕಿದೆ ಎಂದ ಅವರು, ಕ್ರಿಸ್ತರಾಜ ಶಿಕ್ಷಣ ಸಂಸ್ಥೆಯು ಉತ್ತಮ ಫಲಿತಾಂಶವನ್ನು ಪಡೆಯುವುದರ ಮೂಲಕ ಶೈಕ್ಷಣಿಕ ಪ್ರಗತಿಯತ್ತ ಮುಂಚೂಣಿಯಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎಂಡಿಇಎಸ್ ಸಂಸ್ಥೆಯ ಕಾರ್ಯದರ್ಶಿ ವಿಜಯಕುಮಾರ್ ಮಾತನಾಡಿ, ಕ್ರಿಸ್ತರಾಜ ಶಿಕ್ಷಣ ಸಂಸ್ಥೆಯು ಹಲವು ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಯನ್ನು ನೀಡುತ್ತಾ ಬಂದಿದ್ದು, ಜಿಲ್ಲೆಯಲ್ಲಿಯೇ ಮುಕುಟಪ್ರಾಯವಾಗಿದೆ. ಈ ಭಾಗದ ಮಕ್ಕಳ ಜ್ಞಾನದ ದಾಹವನ್ನು ನೀಗಿಸುವ ಕಣಜವಾಗಿದೆ ಎಂದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಕ್ರಿಸ್ತರಾಜ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ಫಾದರ್ ರೋಷನ್‌ಬಾಬು, ಧರ್ಮಗುರುಗಳಾದ ಬೆರ್ನಾಡ್ ಪ್ರಕಾಶ್, ಮದಲೈಮುತ್ತು, ಪಪಂ ಅಧ್ಯಕ್ಷೆ ಚಂದ್ರಮ್ಮ, ಸಂಸ್ಥೆಯ ಶಿಕ್ಷಕರು, ಉಪಾನ್ಯಾಸಕರು, ವಿದ್ಯಾರ್ಥಿಗಳು ಮತ್ತು ಪಾಲಕರು ಭಾಗವಹಿಸಿದ್ದರು.