ಜಿಲ್ಲೆ

ಚಾ.ನಗರದಲ್ಲಿ ಹಕ್ಕು ಚಲಾವಣೆ

reportermys

ಚಾಮರಾಜನಗರ : ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬುಧವಾರ ಶಾಂತಿಯುತವಾಗಿ ಮತದಾನ ನಡೆಯಿತು.
ನಗರ, ಗ್ರಾಮಾಂತರ ಪ್ರದೇಶಗಳ ಹಲವು ಮತಗಟ್ಟೆಗಳಲ್ಲಿ ಮಧ್ಯಾಹ್ನದ ತನಕವೂ ಮಂದಗತಿಯಲ್ಲಿಯೇ ಮತದಾನ ನಡೆಯಿತು. ಆರಂಭಿಕವಾಗಿ ಮತದಾರರು ಮತಗಟ್ಟೆಗೆ ಬಂದಿದ್ದು, ವಿರಳ ಸಂಖ್ಯೆಯಲ್ಲಿತ್ತು. ಮಧ್ಯಾಹ್ನದ ನಂತರ ಮತದಾನ ಚುರುಕುಗೊಂಡಿತು.


ನಗರದ ಕರಿನಂಜನಪುರ, ಗಾಳೀಪುರ ಹಾಗೂ ಉಪ್ಪಾರ ಬಡಾವಣೆಗಳಲ್ಲಿ ಬೆಳಗ್ಗೆಯಿಂದಲೂ ಬಿರುಸಿನಿಂದ ಮತದಾನ ನಡೆಯಿತು. ಈ ಭಾಗದಲ್ಲಿ ಜನರು ಬಹಳ ಉತ್ಸಾಹದಿಂದ ಮತಗಟ್ಟೆಗಳಲ್ಲಿ ಸರತಿಯಲ್ಲಿ ನಿಂತು ಮತ ಚಲಾಯಿಸಿದರು. ಅಭ್ಯರ್ಥಿಗಳ ಪರವಾಗಿ ಪಕ್ಷಗಳ ಕಾರ್ಯಕರ್ತರು ಮತದಾರರ ಮನವೊಲಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.
ಮತಗಟ್ಟೆಗಳಲ್ಲಿ ವೃದ್ಧರಿಗೆ ಗಾಲಿ ಕುರ್ಚಿಗಳ ವ್ಯವಸ್ಥೆ ಮಾಡಲಾಗಿತ್ತು. ಅಂಗವಿಕಲರು, ಅಂಧರು ಹಾಗೂ ಹಿರಿಯ ನಾಗರಿಕರನ್ನು ಮತಗಟ್ಟೆ ಸಿಬ್ಬಂದಿ ಒಳಗೆ ಕರೆದೊಯ್ದು ಮತದಾನ ಮಾಡಲು ಸಹಕರಿಸಿದರು. ಗಾಳೀಪುರ ಬಡಾವಣೆಯ ನಿವಾಸಿ, ಶತಾಯುಷಿ ಬೀಲಾಲ್ ಕುಟುಂಬಸ್ಥರೊಂದಿಗೆ ಗಾಲಿ ಕುರ್ಚಿಯಲ್ಲಿ ಬಂದು ಮತದಾನ ಮಾಡಿದರು. ಸಾಕಷ್ಟು ಮತಗಟ್ಟೆಗಳಲ್ಲಿ ಮೊದಲ ಬಾರಿಗೆ ಮತದಾನ ಮಾಡಿದ ಯುವಕ, ಯುವತಿಯರು ತಮ್ಮ ಅನುಭವ ಹಂಚಿಕೊಂಡು ಖುಷಿಪಟ್ಟರು.

ಹೆಚ್ಚಾಗಿದ್ದ ಮಹಿಳೆಯರ ಸಾಲು :
ನಗರದ ಎಲ್ಲ ಮತಗಟ್ಟೆಗಳ ಮುಂದೆಯೂ ಮತದಾನಕ್ಕಾಗಿ ಮಹಿಳೆಯರು ಹೆಚ್ಚಾಗಿ ಸಾಲುಗಟ್ಟಿ ನಿಂತಿದ್ದ ದೃಶ್ಯಗಳು ಕಂಡು ಬಂದವು. ವಾರ್ಡ್ ನಂ.16, 17, 18 ಹಾಗೂ 19ರಲ್ಲಿ ಬೆಳಗ್ಗೆಯಿಂದಲೇ ಗುಂಪು ಗುಂಪಾಗಿ ಮತಗಟ್ಟೆಗಳತ್ತ ಮಹಿಳೆಯರು ಸಾಗಿ ಬಂದರು. ಮಧ್ಯಾಹ್ನದ ನಂತರವೂ ಈ ಸರದಿ ಸಾಲು ಹೆಚ್ಚುತ್ತಲೇ ಹೋಯಿತು. ವಾರ್ಡ್ ನಂ.3ರಲ್ಲೂ ಮುಸ್ಲಿಂ ಮಹಿಳೆಯರ ಸಾಲು ಸಂಜೆಯ ತನಕವೂ ಕಡಿಮೆ ಆಗಲೇ ಇಲ್ಲ. ಇದರಿಂದಾಗಿ ಹಲವಾರು ಮತಗಟ್ಟೆಗಳಲ್ಲಿ ಮಹಿಳೆಯರ ಉದ್ದನೆಯ ಸರತಿ ಸಾಲುಗಳು ಕಂಡುಬಂದವು.

ಹಲವು ಕಡೆ ಕೈಕೊಟ್ಟ ಯಂತ್ರ:
ನಗರದ ಸಂತೇಮರಹಳ್ಳಿ ವೃತ್ತ ಸಮೀಪದ ಉಪ್ಪಾರ ಬೀದಿಯ ಮತಗಟ್ಟೆ 69ರಲ್ಲಿ ಇವಿಎಂ ಕೈಕೊಟ್ಟ ಪರಿಣಾಮ ಮತದಾರರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಅಧಿಕಾರಿಗಳು ಮತಯಂತ್ರ ಸರಿಪಡಿಸಿದರು. ಇದರಿಂದ ಮತದಾನ ಪ್ರಕ್ರಿಯೆ ಅರ್ಧ ತಾಸು ತಡವಾಯಿತು. ಚಾ.ನಗರ ತಾಲೂಕಿನ ನಂಜೇದೇವನಪುರ ಗ್ರಾಮದ ಮತಗಟ್ಟೆ ಸಂಖ್ಯೆ 230ರಲ್ಲಿ ವಿದ್ಯುನ್ಮಾನ ಮತಯಂತ್ರ ನಿಧಾನಗತಿಯಲ್ಲಿ ಕಾರ್ಯ ನಿರ್ವಹಿಸತೊಡಗಿತ್ತು. ಇದರಿಂದ ಮತದಾನ ಪ್ರಕ್ರಿಯೆ ನಿಧಾನವಾಯಿತು. ಸ್ಥಳಕ್ಕೆ ಬಂದ ತಂತ್ರಜ್ಞರು ಮತಯಂತ್ರ ಸರಿಪಡಿಸಿದ ಬಳಿಕ ಮತದಾನ ಮುಂದುವರಿಯಿತು. ಹಂಡರಕಳ್ಳಿ ಗ್ರಾಮದ ಮತಗಟ್ಟೆ ಸಂಖ್ಯೆ 34ರ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡಿತು. 300 ಮತಗಳು ಚಲಾವಣೆಯಾದ ಬಳಿಕ ಯಂತ್ರ ಸ್ಥಗಿತಗೊಂಡಿತು. ಒಂದು ಸಾವಿರಕ್ಕೂ ಅಧಿಕ ಮತದಾರರು ಇರುವ ಈ ಮತಗಟ್ಟೆಯ ಮತದಾರರು ಗಲಿಬಿಲಿಗೊಂಡರು. ತಂತ್ರಜ್ಞರು ಮತಯಂತ್ರವನ್ನು ದುರಸ್ತಿಪಡಿಸಿದ ಬಳಿಕ ಮತ್ತೆ ಮತದಾನ ಆರಂಭವಾಯಿತು.

ಸಚಿವ ವಿ.ಸೋಮಣ್ಣ ಪತ್ನಿ ಜತೆ ಮತದಾನ:
ನಗರದ ಪೇಟೆ ಪ್ರೈಮರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 75ರಲ್ಲಿ ಚಾ.ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಚಿವ ವಿ.ಸೋಮಣ್ಣ ಅವರು ಪತ್ನಿ ಶೈಲಜಾ ಅವರೊಡನೆ ಮತ ಚಲಾಯಿಸಿದರು.
ನನ್ನ 45 ವರ್ಷಗಳ ರಾಜಕೀಯ ಜೀವನದಲ್ಲಿ ಸುಮಾರು 12 ಚುನಾವಣೆಗಳನ್ನು ನೋಡಿದ್ದೇನೆ. ಒಂದು ಬಾರಿ ಎಂ.ಪಿ ಮತ್ತು ಎಂಎಲ್ಎ ಚುನಾವಣೆಯಲ್ಲಿ ಸೋಲನ್ನು ಕಂಡಿದ್ದೇನೆ. ಈ ಭಾಗದ ಜನರ ಮುಗ್ಧತೆ ಹಾಗೂ ಭಯ ನಾನು ಎಲ್ಲೂ ನೋಡಿಲ್ಲ. ಆ ಮುಗ್ಧತೆಯೇ ನನ್ನ ಪರವಾಗಿ ಮತವಾಗಿ ಬದಲಾಗುವ ಸಾಧ್ಯತೆ ಇದೆ. ನನ್ನ ಭರವಸೆ ಅನ್ನುವುದಕ್ಕಿಂತಲೂ ಮುಖ್ಯವಾಗಿ ನಾನು ನಂಬಿರುವ ಶ್ರೀ ಚಾಮುಂಡೇಶ್ವರಿ, ಶ್ರೀ ಮಲೆಮಹದೇಶ್ವರರ ಆಶೀರ್ವಾದದ ಜತೆಗೆ, ನನ್ನ ಅಭಿವೃದ್ಧಿ ಕೆಲಸದ ಮೇಲೆ ನಂಬಿಕೆ ಇದೆ. ಒಟ್ಟಾರೆ ಜನರು ತೀರ್ಮಾನ ಮಾಡುತ್ತಾರೆ, ಭಗವಂತನಿದ್ದಾನೆ ನೋಡೋಣ ಎಂದು ಅವರು ಹೇಳಿದರು.
ಮತದಾರರ ಶ್ರೀರಕ್ಷೆ ಎರಡು ಕ್ಷೇತ್ರಗಳಲ್ಲೂ ನನ್ನ ಮೇಲಿದೆ ಎಂಬ ಆಶಾಭಾವನೆ ಹೊಂದಿದ್ದೇನೆ. ಯಾರಿಗೆ ಯಾರೂ ದೊಡ್ಡವರಲ್ಲ, ಮತದಾರರ ಮುಂದೆ ಎಲ್ಲರೂ ಸಣ್ಣವರಾಗುತ್ತೇವೆ. ಈ ಭಾಗದ ಜನರ ಋಣ ನನ್ನ ಮೇಲಿದೆ. 5-10 ವರ್ಷಗಳ ಕಾಲ ನನ್ನ ಆರೋಗ್ಯ ಚೆನ್ನಾಗಿದ್ದರೆ ಈ ಭಾಗದ ಜನರ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದರು.

ಮೊದಲ ಮತದಾನದ ಹರ್ಷ:
ನಗರದಲ್ಲಿ ಸಾಕಷ್ಟು ಯುವಕ, ಯುವತಿಯರು ಮೊದಲ ಬಾರಿಗೆ ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸಿ ಗಮನ ಸೆಳೆದರು. ಮತಗಟ್ಟೆ 66ರಲ್ಲಿ ಮೊದಲ ಬಾರಿಗೆ ಮತ ಚಲಾಯಿಸಿದ ಸ್ನೇಹ, ತಮ್ಮ ನಾಯಕರನ್ನು ಆಯ್ಕೆ ಮಾಡುವ ಹಕ್ಕು ಸಿಕ್ಕಿದ್ದಕ್ಕೆ ಖುಷಿಪಟ್ಟರು. ವೆಂಕಟಯ್ಯನಛತ್ರ ಹೊಸೂರು ಗ್ರಾಮದ ಭಾನುಪ್ರಿಯಾ ಮೊದಲ ಮತದಾನ ಮಾಡಿ ಹರ್ಷ ವ್ಯಕ್ತಪಡಿಸಿದರು. ಮತಗಟ್ಟೆ 75ರಲ್ಲಿ ಅವಳಿ ಮಕ್ಕಳಾದ ಶಿವಾನಿ ಮತ್ತು ಶರಣ್ ತುಮಕೂರಿನಿಂದ ಚೊಚ್ಚಲ ಮತದಾನಕ್ಕಾಗಿ ಚಾ.ನಗರಕ್ಕೆ ಆಗಮಿಸಿ ಮತದಾನ ಮಾಡಿದ ಖುಷಿ ಹಂಚಿಕೊಂಡರು.

ಮತ ಚಲಾಯಿಸಿದ ಚಿತ್ರನಟ:
ತಾಲೂಕಿನ ಮೂಡ್ಲುಪುರ ಗ್ರಾಮದಲ್ಲಿ ಸ್ಯಾಂಡಲ್‌ವುಡ್ ನಟ, ಕೆಂಡಸಂಪಿಗೆ ಸಿನಿಮಾ ಖ್ಯಾತಿಯ ವಿಕ್ಕಿ ಮೊದಲ ಮತ ಚಲಾಯಿಸಿದರು. ಮತದಾನದ ಬಳಿಕ ಮಾತನಾಡಿರುವ ಅವರು, ಗ್ರಾಮದಲ್ಲಿ ನಾನೇ ಮೊದಲ ಮತ ಚಲಾಯಿಸಬೇಕು ಎಂಬ ಉದ್ದೇಶದಿಂದ ಬೆಳಗ್ಗೆ ಬೆಂಗಳೂರಿನಿಂದ ಆಗಮಿಸಿದ್ದೇನೆ. ಸಮರ್ಥ ನಾಯಕನಿಗೆ ಮತ ನೀಡಬೇಕು. ಅದೇ ರೀತಿ ಪ್ರತಿಯೊಬ್ಬರೂ ತಮ್ಮ ಅಮೂಲ್ಯ ಮತವನ್ನು ಚಲಾವಣೆ ಮಾಡಬೇಕು ಎಂದು ಮನವಿ ಮಾಡಿದರು.