ಜಿಲ್ಲೆ

ಮೇ 10ಕ್ಕೆ ಮುಹೂರ್ತ ಫಿಕ್ಸ್

reportermys

ಚಾಮರಾಜನಗರ: ಕೇಂದ್ರ ಚುನಾವಣಾ ಆಯೋಗದಿಂದ 2023ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ದಿನಾಂಕ ೋಷಣೆಯಾಗಿದ್ದು, ಮೇ 10ರಂದು ಮತದಾನ, 13ರಂದು ಲಿತಾಂಶ ಹೊರಬೀಳಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಹೇಳಿದರು.

ಚುನಾವಣೆ ಸಂಬಂಧ ಜಿಲ್ಲೆಯಲ್ಲಿ ಕೈಗೊಂಡಿರುವ ಸಿದ್ಧತೆ, ಚಟುವಟಿಕೆಗಳ ಕುರಿತು ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಏ.13ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. 20ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನ. 21ರವರೆಗೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. 24 ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನ. ಮೇ 10ರಂದು ಮತದಾನ ಮತ್ತು 13ರಂದು ಮತ ಎಣಿಕೆ ನಡೆಯಲಿದೆ. 15ರಂದು ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ. ಜಿಲ್ಲೆಯಲ್ಲಿ ಮಾ. 29ರಿಂದ ಮೇ 15ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ವಿವರಿಸಿದರು.

ಚಾಮರಾಜನಗರ ಮತ್ತು ಗುಂಡ್ಲುಪೇಟೆ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವವರು ಆಯಾ ತಹಸೀಲ್ದಾರ್ ಕಚೇರಿಯ ಸಭಾಂಗಣದ ಕೊಠಡಿಯಲ್ಲಿ ನಿಗದಿತ ನಾಮಮಪತ್ರ ಸಲ್ಲಿಸಬಹುದು. ಹನೂರು ಕ್ಷೇತ್ರದ ನಾಮಪತ್ರಗಳನ್ನು ಹಿರಿಯ ಪಶುವೈದ್ಯಾಧಿಕಾರಿ ಕಚೇರಿ, ಕೊಳ್ಳೇಗಾಲ ಕ್ಷೇತ್ರದ ನಾಮಪತ್ರಗಳನ್ನು ಉಪ ವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಲ್ಲಿಸಬಹುದು ಎಂದು ತಿಳಿಸಿದರು. ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಪೂವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ ಇದ್ದರು.

ಒಟ್ಟು 982 ಮತಗಟ್ಟೆಗಳು: ಜಿಲ್ಲೆಯಲ್ಲಿ ಚಾಮರಾಜನಗರ, ಹನೂರು, ಕೊಳ್ಳೇಗಾಲ, ಗುಂಡ್ಲಪೇಟೆ ಸೇರಿ ಒಟ್ಟು 4 ಕ್ಷೇತ್ರಗಳಿದ್ದು, 2018ರಲ್ಲಿ 976 ಮತಗಟ್ಟೆಗಳಿದ್ದರೆ ಈ ಸಲದ ಚುನಾವಣೆಗಾಗಿ 982 ಮತಗಟ್ಟೆಗಳನ್ನು ತೆರೆಯಲಾಗಿದೆ ಎಂದು ಡಿಸಿ ಡಿ.ಎಸ್.ರಮೇಶ್ ತಿಳಿಸಿದರು. ಹನೂರು ಕ್ಷೇತ್ರದಲ್ಲಿ 253, ಕೊಳ್ಳೇಗಾಲ(ಮೀಸಲು) 241, ಚಾಮರಾಜನಗರ 239, ಗುಂಡ್ಲುಪೇಟೆ 249 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ 281 ಮತಗಟ್ಟೆಗಳನ್ನು ನಗರ ಪ್ರದೇಶ, 695 ಮತಗಟ್ಟೆಗಳನ್ನು ಗ್ರಾಮಾಂತ ಪ್ರದೇಶದಲ್ಲಿ ಸ್ಥಾಪಿಸಲಾಗಿದೆ. 10 ಪಿಂಕ್ ಬೂತ್‌ಗಳನ್ನು ತೆರೆಯಲಾಗುವುದು ಎಂದು ಹೇಳಿದರು.

ಮಹಿಳಾ ಮತದಾರರೇ ಹೆಚ್ಚು:
ಈ ಬಾರಿಯ ಚುನಾವಣೆಯಲ್ಲಿ ಮಹಿಳಾ ಮತಗಳೇ ನಿರ್ಣಾಯಕವಾಗಲಿವೆ. ಏಕೆಂದರೆ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಪುರುಷರಿಗಿಂತಲೂ ಮಹಿಳಾ ಮತದಾರರೇ ಹೆಚ್ಚಾಗಿದ್ದಾರೆ.
2023ರ ಜ.6ರವರೆಗಿನ ಮತದಾರರ ಪಟ್ಟಿಯಂತೆ ಹನೂರು ಕ್ಷೇತ್ರದಲ್ಲಿ 1,10,797 ಪುರುಷರು, 1,08,387 ಮಹಿಳೆಯರು, 16 ಇತರೆ ಒಟ್ಟು 2,19,200 ಮತಗಳಿವೆ. ಕೊಳ್ಳೇಗಾಲದಲ್ಲಿ 1,06,235 ಪುರುಷರು, 1,08,909 ಮಹಿಳೆಯರು, 18 ಇತರೆ ಒಟ್ಟು 2,15,162, ಚಾಮರಾಜನಗರದಲ್ಲಿ 1,01,744 ಪುರುಷರು, 1,06,012 ಮಹಿಳೆಯರು, 15 ಇತರೆ ಒಟ್ಟು 2,07,771, ಗುಂಡ್ಲುಪೇಟೆಯಲ್ಲಿ 1,04,187 ಪುರುಷರು, 1,07,918 ಮಹಿಳೆಯರು, 19 ಇತರೆ ಒಟ್ಟು 2,12,124 ಮತದಾರರಿದ್ದಾರೆ. ಜಿಲ್ಲೆಯ 4 ಕ್ಷೇತ್ರಗಳು ಸೇರಿ ಒಟ್ಟು 8,54,257 ಮತದಾರರಿದ್ದು, ಇವರಲ್ಲಿ 4,22,963 ಪುರುಷರಿದ್ದರೆ, 4,31,226 ಮಹಿಳಾ ಮತದಾರರಿದ್ದಾರೆ.

ನಿರಂತರ ಪರಿಷ್ಕರಣೆ:
ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಸಂಬಂಧಿಸಿದಂತೆ ನಿರಂತರ ಪರಿಷ್ಕರಣೆ ನಡೆಯುತ್ತಿದೆ. 2023ರ ಜ.6ರಿಂದ ನಾಮಪತ್ರ ಸ್ವೀಕರಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ 10 ದಿನಗಳ ಹಿಂದಕ್ಕೆ ಸ್ವೀಕರಿಸಿದ ಅರ್ಜಿಗಳನ್ನು ಇತ್ಯರ್ಥಪಡಿಸಿ ಅರ್ಹರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಕ್ರಮ ವಹಿಸಲಾಗಿದೆ ಎಂದು ಡಿಸಿ ಡಿ.ಎಸ್.ರಮೇಶ್ ಹೇಳಿದರು.

195 ಸೇವಾ ಮತದಾರರು: ಜಿಲ್ಲೆಯಲ್ಲಿ ಒಟ್ಟು 195 ಸೇವಾ ಮತದಾರರು ಇದ್ದಾರೆ. ಹನೂರು 73, ಕೊಳ್ಳೇಗಾಲ 41, ಚಾಮರಾಜನಗರ 28, ಗುಂಡ್ಲುಪೇಟೆಯಲ್ಲಿ 53 ಮತದಾರರಿದ್ದಾರೆ. ಚುನಾವಣೆಯ ವಿವಿಧ ಕಾರ್ಯಗಳ ಮೇಲ್ವಿಚಾರಣೆ ನಡೆಸಲು ಜಿಲ್ಲಾದ್ಯಂತ ಒಟ್ಟು 16 ಜನ ಜಿಲ್ಲಾಮಟ್ಟದ ಅಧಿಕಾರಿಗಳನ್ನು ಜಿಲ್ಲಾ ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.

ಅಧಿಕಾರಿಗಳ ತಂಡ ರಚನೆ:
ಚುನಾವಣಾ ನೀತಿ ಸಂಹಿತೆ ಪಾಲನೆಗಾಗಿ ಅಧಿಕಾರಿಗಳ ತಂಡ ರಚನೆ ಮಾಡಲಾಗಿದ್ದು, ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಎಚ್ಚರಿಕೆ ನೀಡಿದರು.
ಹನೂರು ಕ್ಷೇತ್ರದಲ್ಲಿ 28, ಕೊಳ್ಳೇಗಾಲ ಮತ್ತು ಚಾಮರಾಜನಗರದಲ್ಲಿ ತಲಾ 22, ಗುಂಡ್ಲುಪೇಟೆಯಲ್ಲಿ 25 ಸೆಕ್ಟರ್ ಅಧಿಕಾರಿಗಳು ನಿಗಾ ವಹಿಸಲಿದ್ದಾರೆ. ಇವರು ಪ್ರತಿ ಕ್ಷೇತ್ರದ 10ರಿಂದ 12 ಮತಗಟ್ಟೆಗಳಿಗೆ ಒಬ್ಬರಂತೆ ಚುನಾವಣಾ ಅಕ್ರಮಗಳ ಬಗ್ಗೆ ಕಣ್ಣಿಡಲಿದ್ದಾರೆ. 4 ಕ್ಷೇತ್ರಗಳಲ್ಲೂ ತಲಾ 3 ್ಲೈಯಿಂಗ್ ಸ್ಕ್ವಾಡ್ ತಂಡ ರಚನೆ ಮಾಡಲಾಗಿದೆ ಎಂದು ಡಿಸಿ ತಿಳಿಸಿದರು. ಮಾದರಿ ನೀತಿ ಸಂಹಿತೆ ಪಾಲನೆ ಅಧಿಕಾರಿಗಳನ್ನೂ ನೇಮಕ ಮಾಡಲಾಗಿದೆ. 4 ಕ್ಷೇತ್ರಗಳಿಗೆ ತಲಾ 2 ತಂಡ, ಜಿಲ್ಲಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಲು ಒಟ್ಟು 12 ಅಧಿಕಾರಿಗಳ ತಂಡ, 10 ಜನರಿರುವ ವಿಡಿಯೋ ಸರ್ವೇಲೆನ್ಸ್ ತಂಡ, 4 ಜನರಿರುವ ವಿಡಿಯೋ ವೀವಿಂಗ್ ತಂಡ ರಚನೆ ಮಾಡಲಾಗಿದೆ ಎಂದು ಡಿಸಿ ವಿವರಿಸಿದರು.

ಅಂಚೆ ಮತದಾನ ಅಂಕಿ-ಅಂಶ: ಆಯೋಗದ ನಿರ್ದೇಶನದಂತೆ ಅಂಗವಿಕಲ ಮತ್ತು 80 ವರ್ಷ ಮೇಲ್ಪಟ್ಟ ಹಾಸಿಗೆ ಹಿಡಿದ, ಮತ ಚಲಾಯಿಸಲು ಶಕ್ತರಲ್ಲದೇ ಇರುವವರು ಅಂಚೆ ಮೂಲಕ ಮತ ಚಲಾಯಿಸಲು ಅಂಚೆ ಮತಪತ್ರ ನೀಡಲು ವ್ಯವಸ್ಥೆ ಮಾಡಲಾಗಿದೆ. ಹನೂರಿನಲ್ಲಿ 2,743 ಅಂಗವಿಕಲರು, 5,282 ಹಿರಿಯ ನಾಗರಿಕರು, ಕೊಳ್ಳೇಗಾಲದಲ್ಲಿ 3,005 ಅಂಗವಿಕಲರು, 5,753 ಹಿರಿಯ ನಾಗರಿಕರು, ಚಾಮರಾಜನಗರದಲ್ಲಿ 2,718 ಅಂಗವಿಕಲರು, 5515 ಹಿರಿಯ ನಾಗರಿಕರು, ಗುಂಡ್ಲುಪೇಟೆಯಲ್ಲಿ 3,499 ಅಂಗವಿಕಲರು, 6750 ಹಿರಿಯ ನಾಗರಿಕರು ಇದ್ದಾರೆ. ಇವರು ಮತದಾನ ಮಾಡಲು ನಮೂನೆ 12 ಡಿರಲ್ಲಿ ಅರ್ಜಿ ವಿತರಣೆ ಮಾಡಲಾಗಿದೆ. 136 ಜನರು ನೂರು ವರ್ಷ ಮೇಲ್ಪಟ್ಟ ಮತದಾರರು ಇದ್ದಾರೆ.

ಜಿಲ್ಲೆಯಲ್ಲಿ 11 ಅಂತಾರಾಜ್ಯ ಮತ್ತು 8 ಅಂತರ ಜಿಲ್ಲಾ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. 24*7 ಅವಧಿಯಲ್ಲಿ 3 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಹನೂರಿನಲ್ಲಿ 3 ಅಂತಾರಾಜ್ಯ, 1 ಅಂತರ ಜಿಲ್ಲಾ, ಚಾಮರಾಜನಗರದಲ್ಲಿ 6 ಅಂತಾರಾಜ್ಯ, 1 ಅಂತರ ಜಿಲ್ಲಾ ಚೆಕ್‌ಪೋಸ್ಟ್ ಇದೆ. ಗುಂಡ್ಲುಪೇಟೆಯಲ್ಲಿ ತಲಾ 2 ಅಂತಾರಾಜ್ಯ ಮತ್ತು ಜಿಲ್ಲಾ, ಕೊಳ್ಳೇಗಾಲದಲ್ಲಿ 4 ಅಂತರ ಜಿಲ್ಲಾ ಚೆಕ್‌ಪೋಸ್ಟ್‌ಗಳಿವೆ.
>ಪದ್ಮಿನಿ ಸಾಹೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಾಮರಾಜನಗರ