ಜಿಲ್ಲೆ

ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲನೆಯಾಗಲಿ

reportermys

ಚಾಮರಾಜನಗರ: ವಿಧಾನಸಭಾ ಚುನಾವಣೆ ಕೆಲಸ ಹೊಣೆಗಾರಿಕೆಯಿಂದ ಕೂಡಿದ್ದು, ಎಲ್ಲಿಯೂ ಲೋಪವಾಗದಂತೆ ಕರ್ತವ್ಯ ನಿರ್ವಹಿಸಬೇಕು. ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಪೂರಕವಾದ ಎಲ್ಲ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಾದರಿ ನೀತಿ ಸಂಹಿತೆ ಹಾಗೂ ಚುನಾವಣಾ ವೆಚ್ಚ ತಂಡದ ಅಧಿಕಾರಿಗಳಿಗೆ ಮಂಗಳವಾರ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.


ಸಾರ್ವಜನಿಕ ಸ್ಥಳಗಳಲ್ಲಿಯೇ ಆಗಲಿ ಅಥವಾ ಖಾಸಗಿ ಪ್ರದೇಶಗಳಲ್ಲಿಯೇ ಆಗಲಿ, ಅನುಮತಿ ಇಲ್ಲದೆ ಯಾವುದೇ ಪೋಸ್ಟರ್, ಬ್ಯಾನರ್, ಹೋರ್ಡಿಂಗ್‌ಗಳನ್ನು ಅಳವಡಿಸುವಂತಿಲ್ಲ. ಪರವಾನಗಿ ಪಡೆಯುವುದು ಕಡ್ಡಾಯ. ಈ ಬಗ್ಗೆ ನಿಗಾ ವಹಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಹಾಗೂ ಮಾದರಿ ನೀತಿ ಸಂಹಿತೆ ಜಿಲ್ಲಾ ನೋಡಲ್ ಅಧಿಕಾರಿ ಎಸ್. ಪೂವಿತಾ ಮಾತನಾಡಿ, ಮಾದರಿ ನೀತಿ ಸಂಹಿತೆ ಅನುಷ್ಠಾನಕ್ಕಾಗಿ ನೇಮಕವಾಗಿರುವ ಎಸ್.ಎಸ್.ಟಿ, ್ಲೈಯಿಂಗ್ ಸ್ಕ್ವಾಡ್, ವಿಡಿಯೋ ಸರ್ವಲೆನ್ಸ್, ವಿಡಿಯೋ ವೀವಿಂಗ್ ತಂಡಗಳು ಅತ್ಯಂತ ಜವಾಬ್ದಾರಿಯುತವಾಗಿ ಕರ್ತವ್ಯ ಕೈಗೊಳ್ಳಬೇಕು. ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬ ಬಗ್ಗೆ ಪೂರ್ಣ ಮಾಹಿತಿ ಹೊಂದಬೇಕು ಎಂದರು.


ಚುನಾವಣಾ ಸಂಬಂಧ ಪೋಸ್ಟರ್, ಕರಪತ್ರ ಸೇರಿದಂತೆ ಯಾವುದೇ ಮುದ್ರಿತ ಪ್ರಚಾರ ಸಾಮಗ್ರಿಗಳಲ್ಲಿ ಮುದ್ರಕರು, ಪ್ರಕಾಶಕರ ಹೆಸರು ಕಡ್ಡಾಯವಾಗಿ ಇರಬೇಕು. ಅನುಮತಿ ಸಹ ಪಡೆದುಕೊಳ್ಳಬೇಕು. ಇಲ್ಲವಾದಲ್ಲಿ ಕ್ರಮ ಜರುಗಿಸಲಾಗುವುದು. ಮಾದರಿ ನೀತಿ ಸಂಹಿತೆ ಅನುಷ್ಠಾನಕ್ಕಾಗಿ ನಿಯೋಜಿತರಾಗಿರುವ ಇತರ ತಂಡಗಳು, ಅಕೌಂಟಿಂಗ್ ತಂಡಗಳು ಪ್ರತಿನಿತ್ಯ ನಿಗದಿತ ನಮೂನೆಯಲ್ಲಿ ವರದಿ ಸಲ್ಲಿಸಬೇಕು ಎಂದು ಹೇಳಿದರು.


ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಬಸವರಾಜು, ವಿಧಾನಸಭಾ ಕ್ಷೇತ್ರವಾರು ಚುನಾವಣಾ ಅಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿಗಳು, ಸೆಕ್ಟರ್ ಅಧಿಕಾರಿಗಳು, ಎಸ್.ಎಸ್.ಟಿ, ್ಲೈಯಿಂಗ್ ಸ್ಕ್ವಾಡ್, ವಿಡಿಯೋ ಸರ್ವಲೆನ್ಸ್ ಅಧಿಕಾರಿಗಳು ಭಾಗವಹಿಸಿದ್ದರು.