ಜಿಲ್ಲೆ

ರಾಹುಲ್‌ಗಾಂಧಿ ಅನರ್ಹ ಖಂಡಿಸಿ ಪ್ರತಿಭಟನೆ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಕಾಂಗ್ರೆಸ್ ಯುವನಾಯಕ ರಾಹುಲ್‌ಗಾಂಧಿ ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದನ್ನು ಖಂಡಿಸಿ ಕಾಂಗ್ರೆಸ್ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಸತ್ತಿ ರಸ್ತೆಯಲ್ಲಿರುವ ಕಾಂಗ್ರೆಸ್ ಜಿಲ್ಲಾ ಕಚೇರಿ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು, ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ವಿರೋಧ ಪಕ್ಷಗಳು ಇಲ್ಲದೆ, ನಾವು ಏನು ಬೇಕಾದರು ಮಾಡಬಹುದು ಎಂದು ಭಾವಿಸಿರುವ ಕೇಂದ್ರ ಬಿಜೆಪಿ ಸರ್ಕಾರ ವಿರೋಧ ಪಕ್ಷಗಳ ಮೇಲೆ ಪ್ರಹಾರ ನಡೆಸುತ್ತಿದ್ದಾರೆ. ಅದೇ ತರಹ ನಮ್ಮ ಪಕ್ಷದ ನಾಯಕ ರಾಹುಲ್‌ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲು ಹುನ್ನಾರವನ್ನು ನಡೆಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ವಿರೋಧಿಯಾದ ಧೋರಣೆಯಾಗಿದೆ. ಈ ಮೂಲಕ ಕೇಂದ್ರ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವವನ್ನು ನಾಶಗೊಳಿಸುವ ಹುನ್ನಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರದ ಬಿಜೆಪಿ ಸರ್ಕಾರ ಎಲ್ಲಾ ರಾಜ್ಯಗಳಲ್ಲೂ ಸಹ ವಿರೋಧ ಪಕ್ಷಗಳನ್ನು ದಮನ ಮಾಡುವ ನೀತಿ ಅನುಸರಿಸುತ್ತಿದೆ. ಮಹಾರಾಷ್ಟ್ರದಲ್ಲಿ ಪ್ರಜಾಪ್ರಭುತ್ವದ ತಳಹದಿಯಲ್ಲಿ ಗೆದ್ದು ಬಂದಿರುವ ಎನ್‌ಸಿಪಿ ಶಾಸಕರನ್ನು ಸೆಳೆದು, ಬೇರೆ ಗುಂಪನ್ನು ಮಾಡಿ, ವಾಮಾಮಾರ್ಗದಲ್ಲಿ ಅಧಿಕಾರ ಹಿಡಿಯುವ ಪ್ರಯತ್ನ ಮಾಡುತ್ತಿದೆ. ಈ ಮೂಲಕ ವಿರೋಧ ಪಕ್ಷಗಳನ್ನು ನಿರ್ನಾಮ ಮಾಡುವ ಹುನ್ನಾರ ಮಾಡಿದೆ. ರಾಹುಲ್ ಗಾಂಧಿಯವರು ಸಂಸದರಾಗಿ ಉತ್ತಮ ಕೆಲಸವನ್ನು ಮಾಡುತ್ತಿದ್ದರು, ಅವರನ್ನು ಅನರ್ಹಗೊಳಿಸಿದರೆ ಲೋಕಸಭೆಯಲ್ಲಿ ತನ್ನದೇ ಆಟವನ್ನು ಆಡಬಹುದು ಎಂಬ ಕುತಂತ್ರದಿಂದ ಈ ನಿರ್ಧಾರ ಮಾಡಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ್, ಆರ್. ಮಹದೇವ್, ಬ್ಲಾಕ್ ಅಧ್ಯಕ್ಷ ಮಹಮದ್ ಅಸ್ಗರ್, ಮುಖಂಡ ನಾಗವಳ್ಳಿ ನಾಗಯ್ಯ, ರಾಮಸಮುದ್ರ ನಾಗರಾಜು, ಕಾಗಲವಾಡಿ ಚಂದ್ರು, ಶಿವಸ್ವಾಮಿ, ಮಹದೇವಶೆಟ್ಟಿ, ಮಹೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಶಿವಸ್ವಾಮಿ, ಡಿ.ಎಸ್. ಶಂಕರಮೂರ್ತಿ, ಜಿ.ಪಂ. ಮಾಜಿ ಸದಸ್ಯ ರಮೇಶ್, ಸೋಮಣ್ಣ, ಚೆಂಗುಮಣಿ, ಪುಟ್ಟಸ್ವಾಮಿ, ಕೆಲ್ಲಂಬಳ್ಳಿ ಸೋಮಶೇಖರ್, ಮಹದೇವ್, ಶೇಖರ್, ಮಲ್ಲಿಕಾರ್ಜುನಸ್ವಾಮಿ, ಮಾದಾಪುರ ರವಿಕುಮಾರ್ ಹಾಗೂ ಇತರರು ಭಾಗವಹಿಸಿದ್ದರು.