ಯಳಂದೂರು: ತಾಲೂಕಿನ ಬಿಳಿಗಿರಿರಂಗನ ಬೆಟ್ಟಕ್ಕೆ ಸರ್ಕಾರಿ ರಜೆ ದಿನಗಳು ಸೇರಿದಂತೆ ವಿಶೇಷ ಪೂಜೆಯ ದಿನಗಳಲ್ಲಿ ಸಮರ್ಪಕವಾದ ಬಸ್‌ಗಳು ಹಾಗೂ ಬೆಟ್ಟದಲ್ಲಿ ಬಸ್ ನಿಲ್ದಾಣವಿಲ್ಲದೆ ಭಕ್ತರು ಪರದಾಡುವಂತಾಗಿದೆ.
ಯಳಂದೂರಿನಿಂದ ಬಿಳಿಗಿರಿರಂಗನಬೆಟ್ಟ, ಚಾಮರಾಜನಗರ ಹಾಗೂ ಕೆ.ಗುಡಿ ಮಾರ್ಗವಾಗಿ ಪ್ರತಿನಿತ್ಯ 17 ಬಸ್‌ಗಳು ಸಂಚರಿಸುತ್ತವೆ. ಆದರೆ ಶನಿವಾರ ಹಾಗೂ ಭಾನುವಾರ ಸೇರಿದಂತೆ ವಿಶೇಷ ದಿನಗಳಲ್ಲಿ 3 ರಿಂದ 4 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಕಲ್ಪಿಸುತ್ತಿದ್ದು, ಭಕ್ತರ ಸಂಖ್ಯೆ ಹೆಚ್ಚಾಗಿರುವ ಕಾರಣ ಮತ್ತಷ್ಟು ಹೆಚ್ಚುವರಿ ಬಸ್‌ಗಳ ಅವಶ್ಯಕತೆ ಇದೆ.
ಬಿಳಿಗಿರಿರಂಗನ ಬೆಟ್ಟವು ಹುಲಿ ಯೋಜನೆ ವ್ಯಾಪ್ತಿಗೆೆ ಒಳಪಟ್ಟಿದೆ. ಪ್ರಾಣಿ, ಸಸ್ಯ ಸಂಕುಲಗಳ ಜತೆಗೆ ಹಸಿರಿನಿಂದ ಕಂಗೊಳಿಸುವ ಸುಂದರವಾದ ಪ್ರದೇಶವಾಗಿದೆ. ಆದರೆ ಇಲ್ಲಿಗೆ ಭೇಟಿ ನೀಡುವ ಭಕ್ತರು ಸರಿಯಾದ ಬಸ್, ಬೆಟ್ಟದಲ್ಲಿ ನಿಲ್ದಾಣ ಹಾಗೂ ತಂಗುದಾಣದ ಜತೆಗೆ ಕುಡಿಯುವ ನೀರು, ಶೌಚಗೃಹ ವ್ಯವಸ್ಥೆ ಸೇರಿದಂತೆ ಕನಿಷ್ಠ ಮೂಲ ಸೌಲಭ್ಯಗಳಿಲ್ಲದೆ ಪರದಾಡಬೇಕಾದ ಸ್ಥಿತಿ ಇದೆ.
ಬಿಳಿಗಿರಿರಂಗನ ಬೆಟ್ಟ ಮೂಲ ಸೌಲಭ್ಯಗಳಿಂದ ವಂಚಿತವಾಗಿ ಪ್ರವಾಸೋದ್ಯಮದಲ್ಲಿ ಹಿಂದುಳಿದಿದೆ. ಜಿಲ್ಲೆಯ ಬಂಡೀಪುರ, ಮಹದೇಶ್ವರಬೆಟ್ಟ ಹಾಗೂ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಲಿಕೆ ಮಾಡಿದರೆ ಬಹಳ ಹಿಂದುಳಿದಿದೆ. ನಿತ್ಯ ಇಲ್ಲಿಗೆ ರಾಜ್ಯದ ವಿವಿಧ ಜಿಲ್ಲೆ, ರಾಜ್ಯ, ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದು, ಶನಿವಾರ, ಭಾನುವಾರ ವಿಶೇಷ ದಿನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ.
ತಾತ್ಕಾಲಿಕ ಬಸ್ ನಿಲ್ದಾಣ ನಿರ್ಮಿಸಿ
ಬಿಳಿಗಿರಿರಂಗನ ಬೆಟ್ಟದಲ್ಲಿ ಬಿಸಿಲು, ಮಳೆ ಏನೇ ಬಂದರೂ ನಿಲ್ಲಲು ಒಂದು ಸೂರು ಇಲ್ಲ, ಬಸ್ ನಿಲ್ಲುವ ಸ್ಥಳದ ಒಂದು ಬದಿಯಲ್ಲಿ ಮರ, ಅಕ್ಕಪಕ್ಕದ ಅಂಗಡಿ ಸ್ಥಳಗಳಲ್ಲಿ ಆಶ್ರಯಿಸಿ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಪ್ರಸ್ತುತ ಮಳೆಗಾಲವಾಗಿರುವುದರಿಂದ ಬೆಟ್ಟದಲ್ಲಿ ಹೆಚ್ಚು ಮಂಜು ಆವರಿಸುತ್ತಿದ್ದು, ಜತೆಗೆ ಮಳೆಯೂ ಆಗಾಗ ಬರುತ್ತಿರುತ್ತದೆ. ಇವುಗಳ ನಡುವೆ ಬಸ್‌ಗಾಗಿ ಜನರು ಗಂಟೆಗಳ ಕಾಲ ಕಾಯಬೇಕಾಗಿದ್ದು, ಈ ಸ್ಥಳದಲ್ಲಿ ಕುಳಿತುಕೊಳ್ಳಲು ಒಂದು ತಾತ್ಕಾಲಿಕವಾಗಿ ಬಸ್ ನಿಲ್ದಾಣ ಇಲ್ಲವಾಗಿದೆ. ಇದರಿಂದ ಭಕ್ತರ ಪರದಾಟ ಹೇಳತೀರದಾಗಿದೆ. ಬೆಟ್ಟದ ಅಭಿವೃದ್ಧಿಯ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳ ಇಚ್ಛಾಸಕ್ತಿ ಕೊರತೆ ಕಂಡುಬರುತ್ತಿದೆ.
ಬಸ್ ಬರದೆ ಪರದಾಡಿದ ಪ್ರಯಾಣಿಕರು: ಶನಿವಾರ ಹಾಗೂ ಭಾನುವಾರ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಯಳಂದೂರಿನಿಂದ ಬಿಳಿಗಿರಿರಂಗನಬೆಟ್ಟಕ್ಕೆ ಬಸ್‌ಗಳು ಬಾರದಿದ್ದರಿಂದ ಪ್ರಯಾಣಿಕರು ಪರದಾಡುವ ಸ್ಥಿತಿ ಉಂಟಾಗಿತ್ತು. ದೊಡ್ಡಜಾತ್ರೆ ಮುಗಿದ ನಂತರ ಬೇಸಿಗೆ ಸಮಯವಾಗಿರುವುದರಿಂದ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆಯೂ ಅಧಿಕವಾಗಿರುತ್ತದೆ. ಪ್ರತಿ ಶನಿವಾರ ಇಲ್ಲಿಗೆ ಕೆಎಸ್‌ಆರ್‌ಟಿಸಿ ವತಿಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಬೆಟ್ಟಕ್ಕೆ ತೆರಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇರುವ ಬಸ್‌ಗಳಲ್ಲಿ ಕೆಲವರು ಸೀಟುಗಳು ಸಿಗದೆ ನಿಂತುಕೊಂಡೇ ತೆರಳುವಂತಾಯಿತು.
ಬಿಳಿಗಿರಿರಂಗನಬೆಟ್ಟಕ್ಕೆ ಸಮಪರ್ಕ ನಿಲ್ದಾಣ ಹಾಗೂ ಬಸ್‌ಗಳ ವ್ಯವಸ್ಥೆ ಇಲ್ಲದೆ ಭಕ್ತರು ಪರದಾಡುವಂತಾಗಿದ್ದು, ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೂಡಲೇ ಗಮನಹರಿಸಿ, ವಿಶೇಷವಾದ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಬೇಕಾಗಿದೆ.
ಸುರೇಶ್ ಕುಮಾರ್ ಯಳಂದೂರು
ಬೆಟ್ಟಕ್ಕೆ ಶನಿವಾರ ಹಾಗೂ ಭಾನುವಾರ ಸೇರಿದಂತೆ ಸರ್ಕಾರಿ ರಜೆ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್‌ಗಳ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಪತ್ರ ಬರೆಯಲಾಗಿದೆ.
ಮೋಹನ್ ಕುಮಾರ್ ಇಒ, ಬಿಳಿಗಿರಿರಂಗನಬೆಟ್ಟ