ಜಿಲ್ಲೆ

ಯಾರಾಗ್ತಾರೆ ಬಿಜೆಪಿಗೆ ಜಿಲ್ಲಾಧ್ಯಕ್ಷ?

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಭಾರತೀಯ ಜನತಾ ಪಕ್ಷಕ್ಕೆ ರಾಜ್ಯ ಮಟ್ಟದಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಇದೇ ವೇಳೆ ಚಾಮರಾಜನಗರ ಜಿಲ್ಲಾಧ್ಯಕ್ಷ ಸ್ಥಾನದ ಜವಾಬ್ದಾರಿ ಯಾರಿಗೆ ಸಿಗಲಿದೆ ಎನ್ನುವ ಕುತೂಹಲ ಮೂಡಿದೆ.

ರಾಜ್ಯ ಬಿಜೆಪಿ ನೂತನ ಅಧ್ಯಕ್ಷ ಮತ್ತು ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ ಇತ್ತೀಚೆಗಷ್ಟೇ ರಾಜ್ಯ ಪದಾಧಿಕಾರಿಗಳನ್ನು ನೇಮಕ ಮಾಡಿದ್ದಾರೆ. ಇದರಲ್ಲಿ ಕೊಳ್ಳೇಗಾಲದ ಮಾಜಿ ಶಾಸಕ ಎನ್.ಮಹೇಶ್‌ಗೆ ಮಹತ್ತರವಾದ ಉಪಾಧ್ಯಕ್ಷ ಸ್ಥಾನ ಸಿಕ್ಕಿದೆ. ಇನ್ನು ಜಿಲ್ಲಾ ಸಮಿತಿಗಳ ಬದಲಾವಣೆಯೂ ಆಗಲಿದ್ದು, ಮುಂದಿನ ವಾರಗಳಲ್ಲಿ ಜಿಲ್ಲಾಧ್ಯಕ್ಷರ ನೇಮಕ ಪ್ರಕ್ರಿಯೆ ನಡೆಯಲಿದೆ ಎನ್ನಲಾಗಿದೆ.

ಸದ್ಯಕ್ಕೆ ಈ ಸ್ಥಾನಕ್ಕೆ ಗುಂಡ್ಲುಪೇಟೆಯ ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್ ಹೆಸರು ಬಲವಾಗಿ ಕೇಳಿಬರುತ್ತಿದೆ. ಪಕ್ಷದ ಪದಾಧಿಕಾರಿಗಳ ಜವಾಬ್ದಾರಿಯನ್ನು ಮಾಜಿ ಶಾಸಕರಿಗೆ ನೀಡುವ ಮತ್ತು ಯುವಕರಿಗೆ ಆದ್ಯತೆ ಸಿಗುವ ನಿಲುವಿನ ಹಿನ್ನೆಲೆಯಲ್ಲಿ ಸಿ.ಎಸ್.ನಿರಂಜನ ಕುಮಾರ್‌ಗೆ ಅವಕಾಶ ಸಿಗಬಹುದೆಂದು ಅಂದಾಜಿಸಲಾಗುತ್ತಿದೆ.

ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೃಷಭೇಂದ್ರಪ್ಪ, ಪ್ರಧಾನ ಕಾರ್ಯದರ್ಶಿ ನಾಗಶ್ರೀ ಪ್ರತಾಪ್ ಹೆಸರುಗಳೂ ಚಾಲ್ತಿಯಲ್ಲಿವೆ. ಪಕ್ಷ ಅಧಿಕಾರದಲ್ಲಿದ್ದಾಗ ಜಿಲ್ಲಾಧ್ಯಕ್ಷರಾಗಿ ಕೆಲಸ ಮಾಡುವುದು ಸುಲಭ. ಆದರೆ ಪಕ್ಷ ಅಧಿಕಾರದಲ್ಲಿ ಇಲ್ಲದೆ ಇರುವಾಗ ಜಿಲ್ಲಾಧ್ಯಕ್ಷರಾದವರಿಗೆ ದೊಡ್ಡ ಸವಾಲುಗಳಿವೆ. ಇದನ್ನು ಸಮರ್ಥವಾಗಿ ನಿಭಾಯಿಸಬಲ್ಲೆ. ಆದರೆ ನಾನು ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ ಎಂದು ಪಕ್ಷದ ಮುಖಂಡ ಮೂಡ್ಲುಪುರ ನಂದೀಶ್ ಹೇಳಿದ್ದಾರೆ.

ಇನ್ನು ಸಂಘದ ಶಿಸ್ತು, ಬದ್ಧತೆಯನ್ನು ಮೈಗೂಡಿಸಿಕೊಂಡು ಬಂದಿರುವ ಚುಡಾ ಮಾಜಿ ಅಧ್ಯಕ್ಷ ಕುಲಗಾಣ ಶಾಂತಮೂರ್ತಿ ತಮಗೆ ಪಕ್ಷ ಏನೇ ಜವಾಬ್ದಾರಿ ಕೊಟ್ಟರೂ ಕರ್ತವ್ಯ ನಿರ್ವಹಿಸುತ್ತೇನೆ ಎಂದಿದ್ದಾರೆ. ಉಳಿದಂತೆ, ಕಾಡಾ ಮಾಜಿ ಅಧ್ಯಕ್ಷ ನಿಜಗುಣರಾಜು, ಮುಖಂಡರಾದ ಡಾ.ಬಾಬು, ಅಮ್ಮನಪುರ ಮಲ್ಲೇಶ್ ತಾವು ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲ ಎಂದಿದ್ದಾರೆ.
ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಯಾರಿಂದಲೂ ಲಾಬಿ ನಡೆಯುತ್ತಿಲ್ಲ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ದೊಡ್ಡ ದಂಡೇ ಇತ್ತು. ಟಿಕೆಟ್‌ಗಾಗಿ ಲಾಬಿ ನಡೆದಿತ್ತು. ಈ ಪೈಪೋಟಿಗೆ ಹೋಲಿಸಿದರೆ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನವನ್ನು ಯಾರಾದರೂ ವಹಿಸಿಕೊಳ್ಳಲಿ. ನಾವು ಸಹಕಾರ ನೀಡುತ್ತೇವೆ ಎನ್ನುವವರೇ ಹೆಚ್ಚಾಗಿದ್ದಾರೆ.

‘ಲೋಕ’ ಸವಾಲು:
ನೂತನ ಜಿಲ್ಲಾಧ್ಯಕ್ಷರಿಗೆ ಮುಂದಿನ ಲೋಕಸಭೆ ಚುನಾವಣೆಗೆ ಪಕ್ಷವನ್ನು ಸನ್ನದ್ಧಗೊಳಿಸುವ ದೊಡ್ಡ ಜವಾಬ್ದಾರಿ ಇದೆ.
ಹಾಲಿ ಜಿಲ್ಲಾಧ್ಯಕ್ಷ ನಾರಾಯಣಪ್ರಸಾದ್ ಅಧಿಕಾರಾವಧಿ ಇನ್ನೂ ಪೂರ್ಣಗೊಂಡಿಲ್ಲ. ಆದರೆ ರಾಜ್ಯಾಧ್ಯಕ್ಷರ ಬದಲಾವಣೆಯಾಗಿರುವು ದರಿಂದ ಜಿಲ್ಲಾ ಸಮಿತಿಗಳಲ್ಲೂ ನೂತನ ಪದಾಧಿಕಾರಿಗಳು ನೇಮಕಗೊಳ್ಳಲಿದ್ದಾರೆ. ಈ ರೀತಿ ನೇಮಕಗೊಂಡ ನೂತನ ಜಿಲ್ಲಾಧ್ಯಕ್ಷರಿಗೆ ಲೋಕಸಭೆ ಚುನಾವಣೆ ಎದುರಾಗಲಿದೆ. ಇದಕ್ಕಾಗಿ ಪಕ್ಷ ಸಂಘಟನೆ ಮಾಡಬೇಕು. ವಿಧಾನಸಭೆ ಚುನಾವಣೆ ಸೋಲಿನಿಂದ ಹತಾಶೆಗೊಳಗಾಗಿರುವ ಮುಖಂಡರು, ಕಾರ್ಯಕರ್ತರಲ್ಲಿ ಮತ್ತೆ ಉತ್ಸಾಹ ಮೂಡಿಸಬೇಕಾಗಿದೆ. ಚುನಾವಣೆ ಬಳಿಕ ಮೂಡಿರುವ ಬಿರುಕುಗಳನ್ನು ಸರಿಪಡಿಸಬೇಕಾಗಿದೆ. ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿಯುತ್ತಿರುವವರಿಗೆ ಸ್ಥಾನಮಾನ ನೀಡಬೇಕಾಗಿದೆ. ಮುಖ್ಯವಾಗಿ ಪಕ್ಷದ ಕಚೇರಿ, ಕಾರ್ಯಕ್ರಮ ಇತ್ಯಾದಿ ಖರ್ಚು-ವೆಚ್ಚಗಳನ್ನು ನಿಭಾಯಿಸಬೇಕು.
ಕ್ಷೇತ್ರದ ಅಳಿವು-ಉಳಿವಿನ ಪ್ರಶ್ನೆ: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರರಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಲೋಕಸಭೆ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7ರಲ್ಲಿ ಕಾಂಗ್ರೆಸ್ ಅಧಿಪತ್ಯ ಸಾಧಿಸಿದೆ. ಇಂತಹ ಸಂದರ್ಭದಲ್ಲಿ ಸಮರ್ಥ ವಿರೋಧ ಪಕ್ಷವಾಗಿ ಕೆಲಸ ಮಾಡಬೇಕಾದರೆ ಜಿಲ್ಲಾಧ್ಯಕ್ಷರೂ ಅಷ್ಟೇ ಸಮರ್ಥರಾಗಿರಬೇಕು. ಲೋಕಸಭಾ ಕ್ಷೇತ್ರ ಬಿಜೆಪಿ ತೆಕ್ಕೆಯಲ್ಲಿದೆ. ಸಂಸದ ವಿ.ಶ್ರೀನಿವಾಸಪ್ರಸಾದ್ ಗೆಲುವಿನ ಬಳಿಕ ಈಗ ಮತ್ತೆ ಕಮಲ ಪಾಳಯಕ್ಕೆ ಅಗ್ನಿಪರೀಕ್ಷೆ ಎದುರಾಗಲಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಗೆದ್ದು ಕ್ಷೇತ್ರವನ್ನು ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ ಕ್ಷೇತ್ರವನ್ನು ಕಳೆದುಕೊಳ್ಳಬೇಕಾಗುತ್ತದೆ.

ಎನ್.ಮಹೇಶ್ ರಾಜ್ಯ ಉಪಾಧ್ಯಕ್ಷ:
ಮಾಜಿ ಶಾಸಕ ಎನ್.ಮಹೇಶ್‌ಗೆ ಪಕ್ಷದಲ್ಲಿ ಮಹತ್ವದ ಸ್ಥಾನ ಸಿಕ್ಕಿದೆ. ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಪಕ್ಷ ಅವರನ್ನು ಕೈ ಬಿಡದೆ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದೆ. ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾಗ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊಳ್ಳೇಗಾಲ ಕ್ಷೇತ್ರಕ್ಕೆ ಆಗಮಿಸಿ ಎನ್.ಮಹೇಶ್ ಪರವಾಗಿ ಪ್ರಚಾರ ಮಾಡಿದ್ದರು. ಹಿಂದಿನಿಂದಲೂ ಬಿಎಸ್‌ವೈ ಕೃಪಾಶೀರ್ವಾದವನ್ನು ಹೊಂದಿರುವ ಎನ್.ಮಹೇಶ್‌ಗೆ ರಾಜ್ಯ ಉಪಾಧ್ಯಕ್ಷ ಹುದ್ದೆ ದೊರೆಯಲು ಸಂಘಟನಾ ಸಾಮರ್ಥ್ಯವೂ ಕಾರಣ. ರಾಜ್ಯ ಉಪಾಧ್ಯಕ್ಷರಾದ ಬಳಿಕ ಎನ್.ಮಹೇಶ್ ಮೊದಲ ಬಾರಿಗೆ ಪಕ್ಷದ ಸಭೆಯಲ್ಲಿ ಬುಧವಾರ ಭಾಗವಹಿಸುತ್ತಿದ್ದಾರೆ.

ಹಾಲಿ ಜಿಲ್ಲಾಧ್ಯಕ್ಷ ನಾರಾಯಣಪ್ರಸಾದ್ ಜವಾಬ್ದಾರಿ ಪಡೆದುಕೊಂಡು 3 ವರ್ಷ ಪೂರ್ಣಗೊಂಡಿಲ್ಲ. ಹೀಗಾಗಿ ಇವರನ್ನೇ ಮುಂದುವರಿಸಬೇಕೆಂಬ ಅಭಿಪ್ರಾಯವಿದೆ. ಹಾಗಿದ್ದೂ ಪಕ್ಷದ ಮುಂದಿನ ತೀರ್ಮಾನ ಏನಿದೆ ಎಂದು ನೋಡೋಣ.ಸಿ.ಎಸ್.ನಿರಂಜನ್‌ಕುಮಾರ್, ಮಾಜಿ ಶಾಸಕ, ಗುಂಡ್ಲುಪೇಟೆ