ಜಿಲ್ಲೆ

22ರಂದು ಬಣಜಿಗರ ವಧು-ವರರ ಸಮಾವೇಶ

reportermys

ಚಾಮರಾಜನಗರ: ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಶ್ರೀಯೋಗಿ ನಾರೇಯಣ ಬಣಜಿಗ(ಬಲಿಜ) ಸಂಘದ ವತಿಯಿಂದ ಜ.22ರಂದು ಮೈಸೂರಿನಲ್ಲಿ ವಧು-ವರರ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರು ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಆರ್.ಗೋಪಾಲಕೃಷ್ಣ ತಿಳಿಸಿದರು.

ಸಂಘದ ಮೂಲಕ ಹಲವು ಸೇವಾ ಕಾರ್ಯಗಳನ್ನು ಮಾಡುತ್ತಾ ಬರಲಾಗಿದೆ. ಜ.22ರಂದು ಮೈಸೂರಿನ ಸರಸ್ವತಿಪುರದಲ್ಲಿರುವ ಸಂಘದ ಕಚೇರಿಯಲ್ಲಿ ಬೆಳಗ್ಗೆ 11 ಗಂಟೆಗೆ ವಧು-ವರರ ಸಮಾವೇಶ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ಶ್ರೀಮುಕ್ತಿದಾನಂದಜೀ ಸಮಾರಂಭದ ಅಧ್ಯಕ್ಷತೆ ವಹಿಸುವರು. ಡಾ.ಎಂ.ಎಸ್.ರಾಮಯ್ಯ ವಿದ್ಯಾರ್ಥಿನಿಯರ ವಸತಿ ನಿಲಯವನ್ನು ಗೋಕುಲಂನ ಶ್ರುತಿ ಸೀತಾರಾಮ್ ಉದ್ಘಾಟಿಸುವರು. ಮಾಜಿ ಸಚಿವ ಎಂ.ಆರ್.ಸೀತಾರಾಮ್ ಸಮಾರಂಭಕ್ಕೆ ಚಾಲನೆ ನೀಡುವರು. ಸಂಘದ ಅಧ್ಯಕ್ಷ ಎಂ.ನಾರಾಯಣ, ಸಂಕಲ್ಪ ಗ್ರೂಪ್ಸ್ ವ್ಯವಸ್ಥಾಪಕ ನಿರ್ದೇಶಕ ವಿ.ಕೆ.ಜಗದೀಶ್ ಬಾಬು, ಪಿ.ಜಿ.ಕನ್ಸ್‌ಟ್ರಕ್ಷನ್ಸ್ ವ್ಯವಸ್ಥಾಪಕ ನಿರ್ದೇಶಕ ಎಂ.ಜಿ.ಸೋಮಶೇಖರ್, ಮಂಡ್ಯ ಸಂಘದ ಅಧ್ಯಕ್ಷ ಎಂ.ಎಸ್.ವೆಂಕಟೇಶ್‌ಬಾಬು, ಚಾಮರಾಜನಗರ ಸಂಘದ ಅಧ್ಯಕ್ಷ ಶ್ರೀನಿವಾಸಶೆಟ್ಟಿ, ಅರಗು ಮತ್ತು ಬಣ್ಣದ ಕಾರ್ಖಾನೆ ಮಾಜಿ ಅಧ್ಯಕ್ಷ ಎಚ್.ಎ.ವೆಂಕಟೇಶ್ ಭಾಗವಹಿಸುವರು. ಸಮಾವೇಶದಲ್ಲಿ ಮದುವೆಯಾಗಲು ಆಸಕ್ತಿ ಇರುವ ವಧು-ವರರು ಸಂಘದ ಮೈಸೂರು ಕಚೇರಿ ಅಥವಾ 0821-2340734 ಸಂಪರ್ಕಿಸಬೇಕೆಂದು ಮನವಿ ಮಾಡಿದರು.

ಬೇಡಿಕೆ ಈಡೇರಿಲ್ಲ:
ಬಲಿಜ ಸಮುದಾಯಕ್ಕೆ ಉದ್ಯೋಗ ಕ್ಷೇತ್ರಕ್ಕೂ 2ಎ ಮೀಸಲು ಸೌಲಭ್ಯ ನೀಡಬೇಕೆಂದು ಹೋರಾಟ ಮಾಡುತ್ತಿದ್ದೇವೆ. ಈ ಹಿಂದೆ ನಮ್ಮ ಸಮಾಜಕ್ಕೆ 2ಎ ಮೀಸಲಾತಿ ಇತ್ತು. ಆದರೆ 2ಎ ಬದಲು 3ಎ ನೀಡಿ ಮೀಸಲಾತಿ ವಂಚನೆ ಮಾಡಲಾಯಿತು. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸಮಾಜದ ದೊಡ್ಡ ಸಮಾವೇಶ ನಡೆದಿತ್ತು. ಮತ್ತೆ ನಮ್ಮನ್ನು 2ಎಗೆ ಸೇರಿಸಬೇಕೆಂದು ಒತ್ತಾಯ ಮಾಡಿದ್ದೆವು. ಆದರೆ ಈವರೆಗೂ ಸರ್ಕಾರ ನಮ್ಮ ಬೇಡಿಕೆ ಈಡೇರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಬಣಜಿಗರು ಒಟ್ಟು 60 ಲಕ್ಷ, ಚಾಮರಾಜನಗರ ಜಿಲ್ಲೆಯಲ್ಲಿ 10 ಸಾವಿರ ಜನಸಂಖ್ಯೆ ಇದೆ. ಉದ್ಯೋಗಕ್ಕಾಗಿ ಅರಿಶಿಣ, ಕುಂಕುಮ, ಪೂಜಾ ಸಾಮಗ್ರಿ ಮಾರಾಟ, ಕೃಷಿ, ವ್ಯಾಪಾರ ಮಾಡುತ್ತಿದ್ದೇವೆ. ನಮ್ಮ ಜನಾಂಗಕ್ಕೆ ಶಿಕ್ಷಣ ಮತ್ತು ಉದ್ಯೋಗ ದೊರಕಿಸಿಕೊಡಲು 2ಎ ಮೀಸಲಾತಿ ನೀಡಬೇಕೆಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಎಸ್.ಶ್ರೀನಿವಾಸಶೆಟ್ಟಿ, ಪಿ.ರಾಜೇಂದ್ರಕುಮಾರ್, ಜಿ.ವಿ.ಶ್ರೀನಿವಾಸಶೆಟ್ಟಿ, ಎಚ್.ಪಿ.ಮೋಹನ್, ಪದ್ಮಾ ಪುರುಷೋತ್ತಮ್ ಇದ್ದರು.