ಕೊಳ್ಳೇಗಾಲ: ವಿಷಪ್ರಾಶನದಿಂದ ಐದು ಹುಲಿಗಳು ಸಾವಿಗೀಡಾದವು, ಬೃಹತ್ ಗಾತ್ರದ ಹುಲಿಯನ್ನು ಮೂರು ತುಂಡು ಮಾಡಿದರು, ತನಿಖೆಯಲ್ಲಿ ಯಾರ ಮೇಲೆ ಕ್ರಮವಾಯಿತು ಎಂಬುದು ತಿಳಿಯಲೇ ಇಲ್ಲ. ಇದರ ಹಿಂದೆ ಯಾವುದೋ ಶಕ್ತಿ ಕೆಲಸ ಮಾಡಿದೆಯೇ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಅನುಮಾನ ವ್ಯಕ್ತಪಡಿಸಿದರು.
ಪಟ್ಟಣದ ಶ್ರೀ ಭ್ರಮರಾಂಬಾ ಕಲ್ಯಾಣ ಮಂಟಪದಲ್ಲಿ ಅರಣ್ಯ ಇಲಾಖೆ, ಚಾಮರಾಜನಗರ ವೃತ್ತ ವತಿಯಿಂದ 72ನೇ ವನ್ಯಜೀವಿ ಸಪ್ತಾಹ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಹುಲಿ ಸಾವಿನ ಪ್ರಕರಣದಲ್ಲಿ ಸರ್ಕಾರದ ಅರಣ್ಯ ಸಚಿವರೇ ಭೇಟಿ ನೀಡಿ ಪರಿಶೀಲಿಸಿದ್ದರು. ಆರೋಪಿಗಳಿಗೆ ಜಾಮೀನು ದೊರೆಯಿತು. ಹುಲಿ ಸಾವಿನ ಪ್ರಕರಣದಲ್ಲಿ ಯಾರ ಮೇಲೂ ಕ್ರಮವಾಗಲಿಲ್ಲ. ಇದರ ಹಿಂದೆ ಯಾವ ಶಕ್ತಿ ಎಂಬುದು ನನಗೆ ಗೊತ್ತಿಲ್ಲ. ಈ ಹಿಂದೆ ಅರಣ್ಯದೊಳಗೆ ಟ್ರ್ಯಾಕ್ಟರ್, ಎತ್ತಿನ ಗಾಡಿ ಪ್ರವೇಶಿಸಿ ಕಾನೂನು ಕ್ರಮಕ್ಕೆ ಒಳಗಾದರೆ ಜಾಮೀನು ಸಿಗುವುದು ಸುಲಭವಿರಲಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಚಾಮರಾಜನಗರ ಜಿಲ್ಲೆ ಅರಣ್ಯ, ಪ್ರವಾಸಿ, ಧಾರ್ಮಿಕ ಕೇಂದ್ರಕ್ಕೆ ಹೆಸರಾಗಿದ್ದು ರಾಜ್ಯದ ಯಾವ ಜಿಲ್ಲೆಯಲ್ಲೂ ಇಂತಹ ಪರಿಸರವಿಲ್ಲ. ಜೀವವನ್ನು ಮುಡಿಪಾಗಿಟ್ಟು ಅರಣ್ಯ ಅಧಿಕಾರಿ, ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಾರೆ ಎಂದರು.
ನನ್ನ ತಂದೆ ಬಿ.ರಾಚಯ್ಯ ಅವರು ಅರಣ್ಯ ಮಂತ್ರಿಯಾದ್ದಾಗ ಬೀದರ್‌ನಿಂದ ಚಾಮರಾಜನಗರವರೆಗೆ ಅರಣ್ಯ ಭೂಮಿಯನ್ನು ಕಂದಾಯ ಭೂಮಿಯಾಗಿ ಪರಿವರ್ತಿಸಿ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳು, ಅಲ್ಪ ಸಂಖ್ಯಾತರು, ಸಾಮಾನ್ಯ ಬಡ ರೈತರಿಗೆ ತಲಾ 4 ಎಕರೆ ಜಮೀನು ಹಂಚಿಕೆ ಮಾಡಿದ್ದರು. ಕಾನೂನಾತ್ಮಕವಾಗಿ ನೀಡಿದ ಜಮೀನಿಗೆ ಸಾಗುವಳಿ ಪತ್ರಗಳಿವೆ. ಬಿ.ಆರ್.ಹಿಲ್ಸ್ ಅರಣ್ಯ ಪ್ರದೇಶ ಹೊರ ಬರುತ್ತಿದಂತೆ ಅರಣ್ಯ ಇಲಾಖೆ ರಸ್ತೆಯ ಪಕ್ಕದಲ್ಲಿಯೇ ಕಂದಕ ತೆಗೆದಿದ್ದಾರೆ. ರಸ್ತೆಯಿಂದ ಕೇವಲ 3 ಅಡಿಗೆ ಕಂದಕ ನಿರ್ಮಾಣವಾಗಿದೆ. ಇದು ನನ್ನ ಪ್ರಕಾರ ಕಾನೂನು ಬಾಹಿರವಾಗಿದೆ ಎಂದು ಹೇಳಿದರು.
ಕಂದಕದೊಳಗೆ ಇರಸವಾಡಿ ರೈತರಿಗೆ ನೀಡಿದ ರೈತರ ಜಮೀನಿದ್ದು ಅಸಲಿ ಸಾಗುವಳಿ ಪತ್ರ ಇದೆ. ಕಾಡುಪ್ರಾಣಿಗಳ ಹಾವಳಿಯಿಂದ ಸಾಗುವಳಿ ಮಾಡದೆ ಬಿಟ್ಟಿದ್ದರು. ಮರಗಿಡಗಳು ಬೆಳೆದಿದ್ದರಿಂದ ಅರಣ್ಯ ಇಲಾಖೆ ಅರಣ್ಯ ಪ್ರದೇಶವೆಂದು ಕಂದಕ ನಿರ್ಮಿಸಿದೆ. ಈ ಬಗ್ಗೆ ಡ್ರೋನ್ ಸರ್ವೇ ಆಗಿದೆ. ಇನ್ನೂ ರೈತರಿಗೆ ನ್ಯಾಯ ದೊರೆತಿಲ್ಲ. ನನ್ನ ತಂದೆ ಮಂತ್ರಿಗಳಾಗಿದ್ದಾಗ ರೈತರಿಗೆ ಹಂಚಿಕೆ ಮಾಡಿದ್ದ ಜಮೀನನ್ನು ಉಳಿಸಿಕೊಡಲಿಲ್ಲ ಎಂದರೆ ಶಾಸಕನಾಗಿ ಏನು ಪ್ರಯೋಜನ ಎಂದು ಎ.ಆರ್.ಕೃಷ್ಣಮೂರ್ತಿ ಬೇಸರ ವ್ಯಕ್ತಪಸಿದರು.
ವೇದಿಕೆಯಲ್ಲಿದ್ದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಮಾಲತಿ ಪ್ರಿಯಾ ಅವರಿಗೆ ಮರು ಸರ್ವೇ ನಡೆಸಿ ರೈತರಿಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದರು. ಚಾಮರಾಜನಗರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಎಚ್.ವಿ.ಚಂದ್ರು ಮಾತನಾಡಿ, ಅರಣ್ಯ ಅಧಿಕಾರಿಗಳು, ಸಿಬ್ಬಂದಿ ಅರಣ್ಯ ಸಂಪತ್ತನ್ನು ಕಾಯುತ್ತಿದ್ದಾರೆ. ಅವರಿಗೆ ನಾವು ಸಹಕಾರ ನೀಡಬೇಕು ಎಂದರು.
ಚಾಮರಾಜನಗರ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಮಾಲತಿ ಪ್ರಿಯಾ ಮಾತನಾಡಿ, 72ನೇ ವನ್ಯಜೀವಿ ಸಪ್ತಾಹ ಅ.2ರಿಂದ 8 ರವರೆಗೆ ಆಯೋಜಿಸಲಾಗಿತ್ತು. ಎಂ.ಎಂ.ಹಿಲ್ಸ್ ವೈಲ್ಡ್ ಲೈಫ್, ಕಾವೇರಿ ವೈಲ್ಡ್ ಲೈಫ್, ಬಿ.ಆರ್.ಟಿ ಹಾಗೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವಿವಿಧ ಕಾರ್ಯಕ್ರಮ ಮಾಡಿದ್ದೇವೆ ಎಂದು ತಿಳಿಸಿದರು.
ಜಿಲ್ಲೆ ಶೇ.50ಕ್ಕೂ ಹೆಚ್ಚು ಅರಣ್ಯ ಪ್ರದೇಶದಿಂದ ಕೂಡಿದೆ. ಅರಣ್ಯದೊಳಗೆ ಕೆಲಸ ಮಾಡುವುದು ಸುಲಭವಲ್ಲ. ದೇಶದಲ್ಲಿ ನಮ್ಮ ರಾಜ್ಯ ಆನೆಗಳ ಸಂಖ್ಯೆಯಲ್ಲಿ 1ನೇ ಸ್ಥಾನ, ಹುಲಿ ಸಂಖ್ಯೆಯಲ್ಲಿ 2ನೇ ಸ್ಥಾನ, ಚಿರತೆ ಸಂಖ್ಯೆಯಲ್ಲಿ 3ನೇ ಸ್ಥಾನದಲ್ಲಿದೆ. ಅರಣ್ಯ ಸಿಬ್ಬಂದಿ ಗಸ್ತು ಕಾರ್ಯಾಚರಣೆಯಿಂದ ಪ್ರಾಣಿಗಳ ಸಂರಕ್ಷಣೆ ಆಗುತ್ತಿದೆ. ರೈತರ ಜಮೀನು ವಿಚಾರವಾಗಿ ಅಧಿಕಾರಿಗಳ ಜತೆ ಚರ್ಚಿಸಿ ಸ್ಪಂದಿಸುವುದಾಗಿ ತಿಳಿಸಿದರು.
ಅರಣ್ಯ ಮಿತ್ರ ಅಧಿಕಾರಿ ಎಂದು ತಹಸಿಲ್ದಾರ್ ಬಸವರಾಜು ಅವರನ್ನು ಪುರಸ್ಕರಿಸಲಾಯಿತು. 72ನೇ ವನ್ಯ ಜೀವಿ ಸಪ್ತಾಪ ಅಂಗವಾಗಿ ಆಯೋಜಿಸಿದ್ದ ಮ್ಯಾರಥಾನ್ ಹಾಗೂ ಇನ್ನಿತರ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದರಿಗೆ ಬಹುಮಾನ ನೀಡಲಾಯಿತು.
ಕಣ್ಣಿನ ತಪಾಸಣೆಗೆ ಒಳಪಟ್ಟಿದ್ದ ಗಿರಿಜನರಿಗೆ ಕನ್ನಡಕ ವಿತರಣೆ ಮಾಡಲಾಯಿತು. ದಸರಾ ಹಬ್ಬದ ಪ್ರಯುಕ್ತ ಅರಣ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುವ ನೌಕರರಿಗೆ ಕಿಟ್ ವಿತರಿಸಲಾಯಿತು. ನಂಜದೇವನಪುರದಲ್ಲಿ ಐದು ಹುಲಿಗಳ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಚಾಮರಾಜನಗರ, ಪುಣಜೂರು ವಲಯದ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗೆ ಸನ್ಮಾನ ಮಾಡಿ ಪ್ರಮಾಣ ಪತ್ರ ವಿತರಿಸಲಾಯಿತು.
ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ ಡಿಸಿಎಫ್ ಬಿ.ಎಸ್.ಶ್ರಿಪತಿ, ಚಾಮರಾಜನಗರ ಸಾಮಾಜಿಕ ಅರಣ್ಯ ವಿಭಾಗ ಉಪಅರಣ್ಯ ಸಂರಕ್ಷಣಾಧಿಕಾರಿ ವಿ.ಸಭ್ಯಶ್ರೀ, ಮಲೆ ಮಹದೇಶ್ವರ ವನ್ಯಜೀವಿ ಧಾಮದ ಪ್ರಭಾರ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ವಿರಾಜ್ ಶ್ರೀಕಾಂತ್ ಹೊಸೂರ್, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಶುಭ್ ಸಿಂಗ್ ತನ್ವಾರ್, ಕಾವೇರಿ ವನ್ಯ ಜೀವಿ ಧಾಮದ ಪ್ರಭಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಂ.ಮರಿಸ್ವಾಮಿ, ಚಾಮರಾಜನಗರ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪವನ್ ಕುಮಾರ್ ಮೀನಾ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರುದ್ರೇಶ್, ತಹಸೀಲ್ದಾರ್ ಬಸವರಾಜು, ಚಾಮರಾಜನಗರ ವೃತ್ತದ ಸಾಮಾಜಿಕ ಅರಣ್ಯ ಇಲಾಖೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್, ಯಳಂದೂರು ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹಾಲಕ್ಷ್ಮೀ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಇತರರು ಇದ್ದರು.