ಗುಂಡ್ಲುಪೇಟೆ: ಸಂಘದ ಸದಸ್ಯರು ತಮ್ಮ ತೋಟಗಾರಿಕೆಗೆ ಅಗತ್ಯವಾದ ಎಲ್ಲ ಪದಾರ್ಥಗಳನ್ನು ಹಾಪ್‌ಕಾಮ್ಸ್‌ನಲ್ಲಿಯೇ ಖರೀದಿಸುವ ಮೂಲಕ ಬೆಂಬಲಿಸಬೇಕು ಎಂದು ಗುಂಡ್ಲುಪೇಟೆ ತಾಲೂಕು ತೋಟದ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಂಘದ ಅಧ್ಯಕ್ಷ ಎಂ.ನಾಗೇಶ್ ಹೇಳಿದರು.
ಪಟ್ಟಣದ ಲ್ಯಾಂಪ್ಸ್ ಸೊಸೈಟಿ ಆವರಣದಲ್ಲಿ ಆಯೋಜಿಸಿದ್ದ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು. ಪಟ್ಟಣದ ಹಾಪ್‌ಕಾಮ್ಸ್ ಮಾರಾಟ ಮಳಿಗೆಯಲ್ಲಿ ಗುಣಮಟ್ಟದ ಬಿತ್ತನೆ ಬೀಜ, ಕ್ರಿಮಿನಾಶಕಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಪ್ರಸ್ತುತ ವ್ಯಾಪಾರ ಕುಸಿದಿದೆ. ಇದರಿಂದ ಪ್ರಮುಖ ಆದಾಯದ ಮೂಲಕ್ಕೆ ಹೊಡೆತ ಬಿದ್ದಿದೆ. ಆದ್ದರಿಂದ ಸಹಕಾರ ತತ್ವದಡಿ ಸ್ಥಾಪಿಸಲಾದ ಸಂಸ್ಥೆಗೆ ತನ್ನದೇ ಇತಿಹಾಸವಿರುವ ಕಾರಣ ಎಲ್ಲರೂ ಬಿತ್ತನೆ ಬೀಜ, ಕ್ರಿಮಿನಾಶಕ ಮುಂತಾದ ಪದಾರ್ಥಗಳನ್ನು ಖಾಸಗಿ ಅಂಗಡಿಗಳ ಬದಲು ಹಾಪ್‌ಕಾಮ್ಸ್ ಮಾರಾಟ ಮಳಿಗೆಯಲ್ಲಿ ಖರೀದಿಸುವ ಮೂಲಕ ವ್ಯಾಪಾರ ಚಟುವಟಿಕೆಗೆ ಪ್ರೋತ್ಸಾಹ ನೀಡಬೇಕು. ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಪಿ.ಪ್ರಕಾಶ್ 2025-26 ನೇ ಸಾಲಿನಲ್ಲಿ ಸಂಘದ ವತಿಯಿಂದ ವ್ಯಾಪಾರ ಇತರೆ ವಾರ್ಷಿಕ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಚಿಕ್ಕರಾಜು, ನಿರ್ದೇಶಕರಾದ ನೀಲಕಂಠಪ್ಪ, ಬಸವಣ್ಣ, ಬೋರೇಗೌಡ, ಶಿವಕಂಠಮೂರ್ತಿ, ಮಾದನಾಯ್ಕ, ಕೆ.ಎಂ.ಬಸವಣ್ಣ, ಶಿವಸ್ವಾಮಿ, ಮಲ್ಲಿಕಾರ್ಜುನಪ್ಪ, ಶಿವಮ್ಮ, ನಾಗಮಣಿ ಇತರರಿದ್ದರು.