ಚಾಮರಾಜನಗರ

ಸ್ವಾತಂತ್ರೃ ಸಂಗ್ರಾಮದ ಕ್ರಾಂತಿ ಕಿಚ್ಚು ಹಬ್ಬಿಸಿದ ಭಗತ್‌ಸಿಂಗ್

ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಋಗ್ವೇದಿ ಅಭಿಮತ

ಚಾಮರಾಜನಗರ: ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಯ ಕಿಚ್ಚು ಹಬ್ಬಿಸಿದ ಶ್ರೇಷ್ಠ ಕ್ರಾಂತಿಕಾರಿ ಭಗತ್‌ಸಿಂಗ್ ಅವರ ತ್ಯಾಗ, ಬಲಿದಾನ, ಸ್ಥೈರ್ಯ, ಸಾಹಸವನ್ನು ಯುವಕರು ಆದರ್ಶವಾಗಿರಿಸಿಕೊಂಡರೆ ಸದೃಢ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಋಗ್ವೇದಿ ತಿಳಿಸಿದರು.

ತಾಲೂಕಿನ ಅಮಚವಾಡಿ ಗ್ರಾಮದಲ್ಲಿ ಜೈ ಹಿಂದ್ ಪ್ರತಿಷ್ಠಾನ ಮತ್ತು ಅಮಚವಾಡಿ ಯುವಕರ ಸಂಘ ಮತ್ತು ಅಮಚವಾಡಿ ರೆಡ್‌ಬುಲ್ಸ್ ಕಬಡ್ಡಿ ತಂಡದ ವತಿಯಿಂದ ಆಯೋಜಿಸಿದ್ದ ಭಗತ್‌ಸಿಂಗ್ ಜನ್ಮದಿನಾಚರಣೆಯಲ್ಲಿ ಮಾತನಾಡಿದರು. ಭಗತ್‌ಸಿಂಗ್ ಬಾಲ್ಯದಲ್ಲಿಯೇ ಬ್ರಿಟಿಷರ ದೌರ್ಜನ್ಯವನ್ನು ಕಣ್ಣಾರೆ ಕಂಡವರು. ಜಲಿಯನ್ ವಾಲಾಬಾಗ್‌ನ ದುರಂತದ ಸಾವು, ನೋವುಗಳು ಭಗತ್‌ಸಿಂಗ್‌ಗೆ ಬ್ರಿಟಿಷರ ಬಗ್ಗೆ ದ್ವೇಷ ಭಾವನೆ ಮೂಡಿ ನಂತರ ಕ್ರಾಂತಿಕಾರಿಯಾಗಿ, ವಿದ್ಯಾರ್ಥಿ ಜೀವನದಲ್ಲಿಯೇ ಕ್ರಾಂತಿಕಾರಿ ಗುಪ್ತ ಸಂಘಗಳ ಸದಸ್ಯರಾಗಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದರು. ಕ್ರಾಂತಿಕಾರಿ ಪತ್ರಿಕೆ ಪ್ರತಾಪ್‌ನಲ್ಲಿ ಕ್ರಾಂತಿಕಾರಿ ಲೇಖನಗಳನ್ನು ಬರೆದು ಯುವ ಜನಾಂಗಕ್ಕೆ ಸ್ಫೂರ್ತಿ ತುಂಬಿದವರು ಎಂದರು.

ಚಂದ್ರಶೇಖರ ಆಜಾದ್, ಕುಂದನ್ ಲಾಲ್ ಸಂಪರ್ಕ ಪಡೆದ ಭಗತ್ ಸಿಂಗ್ ನವ ಜವಾನ್ ಭಾರತ್ ಸಭಾ ಕ್ರಾಂತಿಕಾರಿ ಸಂಘವನ್ನು ಸೇರಿದರು. ಪಂಜಾಬಿನ ಸಿಂಹ ಎಂದೇ ಖ್ಯಾತರಾದ ಲಾಲಾ ಲಜಪತ್ ರಾಯ್ ಅವರ ಮೇಲೆ ಬ್ರಿಟಿಷರು ದೌರ್ಜನ್ಯದಿಂದ ಮರಣ ಹೊಂದಿದ ಘಟನೆಯಿಂದ ನೊಂದ ಭಗತ್ ಸಿಂಗ್ ಬ್ರಿಟಿಷ್ ಅಧಿಕಾರಿಗಳನ್ನು ಹತ್ಯೆ ಮಾಡುವ ಸಂಚು ಹೂಡಿದರು. ಬ್ರಿಟಿಷ್ ಅಧಿಕಾರಿ ಸ್ಯಾಂಡರ್ಸ್‌ನನ್ನು ಗಾಯಗೊಳಿಸಿದರು. ಸೆಂಟ್ರಲ್ ಹಾಲ್ ಮೇಲೆ ಬಾಂಬ್ ಸ್ಫೋಟಿಸಿದರು. ತಪ್ಪಿಸಿಕೊಳ್ಳಲು ಪ್ರಯತ್ನಿಸದೆ ಬಂಧನಕ್ಕೆ ಒಳಗಾಗಿ, ಸೆರೆಮನೆಯಲ್ಲಿ ಕೈದಿಗಳಿಗೆ ನೀಡುತ್ತಿದ್ದ ಚಿತ್ರ ಹಿಂಸೆ ಮತ್ತು ಅವ್ಯವಸ್ಥೆಯ ಬಗ್ಗೆ ಗಮನ ಸೆಳೆದು ಉಪವಾಸ ಸತ್ಯಾಗ್ರಹ ಮಾಡಿ ಭಾರತೀಯ ಹೋರಾಟಗಾರರಿಗೆ ಸ್ಫೂರ್ತಿಯಾದರು ಎಂದರು.

ಭಗತ್‌ಸಿಂಗ್ ಜತೆಗೆ ರಾಜಗುರು ಮತ್ತು ಸುಖದೇವ್ ಅವರನ್ನು ಗಲ್ಲಿಗೇರಿಸಿದ ಬ್ರಿಟಿಷರ ಕ್ರೂರ ದಬ್ಬಾಳಿಕೆ ಅಂತಿಮಗೊಳ್ಳಲು ನಂತರ ನಡೆದ ಸ್ವಾತಂತ್ರ್ಯ ಚಳವಳಿ ಭಗತ್ ಸಿಂಗ್‌ಅವರಂತಹ ಕ್ರಾಂತಿಕಾರಿಗಳ ಸ್ಫೂರ್ತಿಯೇ ಕಾರಣ ಎಂದು ತಿಳಿಸಿದರು.

ಅಮಚವಾಡಿಯ ರೆಡ್ ಬುಲ್ಸ್ ಕಬಡ್ಡಿ ತಂಡದ ನಾಯಕ ಪ್ರಸಾದ್ ಅವರನ್ನು ಭಗತ್‌ಸಿಂಗ್ ಜನ್ಮದಿನದ ಅಂಗವಾಗಿ ಸನ್ಮಾನಿಸಲಾಯಿತು. ಜಿಲ್ಲಾ ಯುವ ಸಂಘ ಸಂಸ್ಥೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ದೊಡ್ಡಮೋಳೆ, ಅಮಚವಾಡಿ ಕಬಡ್ಡಿ ತಂಡದ ಕುಮಾರ್, ಸಂಜು, ಮಹೇಂದ್ರ, ಪ್ರಸಾದ್, ಗಜೇಂದ್ರ, ಮನು, ಕೆಂಪರಾಜು, ಸುರೇಶ್, ಶಿವರಾಮ್, ಬಸವಣ್ಣ, ರಮೇಶ್ ಇತರರು ಇದ್ದರು.