ಕೊಳ್ಳೇಗಾಲ: ಪಟ್ಟಣದಲ್ಲಿ ಸೆ.30 ರಂದು ನಡೆಯುವ ಸರ್ಕಾರದ ಕಾರ್ಯಕ್ರಮವನ್ನು ಮುಸ್ಲಿಂ ಸಮುದಾಯ ಬಹಿಷ್ಕರಿಸುವ ತೀರ್ಮಾನ ಕೈಗೊಂಡಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅಂಜುಮಾನ್ ಎ-ಇಸ್ಲಾಮಿಯಾ ಸಂಘದ ಪದಾಧಿಕಾರಿಗಳನ್ನು ಭೇಟಿ ಮಾಡಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ನೂತನವಾಗಿ ಆಯ್ಕೆಯಾದ ಅಂಜುಮಾನ್ ಎ-ಇಸ್ಲಾಮಿಯಾ ಪದಾಧಿಕಾರಿಗಳನ್ನು ಭಾನುವಾರ ಭೇಟಿ ಮಾಡಲು ತೆರಳಿದ್ದ ಸಚಿವರ ಬಳಿ ಮುಸ್ಲಿಂ ಸಮುದಾಯದ ಮುಖಂಡರು ಸಮಸ್ಯೆ ಹೇಳಿಕೊಂಡರು.
ಮುಖಂಡ ಅನ್ಸರ್‌ಬೇಗ್ ಮಾತನಾಡಿ, ಅಂಜುಮಾನ್ ಎ-ಇಸ್ಲಾಮಿಯಾ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಸ್ಥಳೀಯ ಶಾಸಕರು ಅಗೌರವ ತೋರಿದ್ದಾರೆ. ಶಾದಿ ಮಹಲ್ ಕಟ್ಟಡ ಕಾಮಗಾರಿ ಅಪೂರ್ಣವಾಗಿದೆ. ಇದಕ್ಕೆ 1 ಕೋಟಿ ರೂ. ನೀಡಿದ್ದೇನೆ ಎಂದು ಶಾಸಕರು ತಿಳಿಸಿದರಾದರೂ 50 ಲಕ್ಷ ರೂ. ಮಾತ್ರ ಬಿಡುಗಡೆಯಾಗಿದೆ. ಇದರಿಂದ ನಮಗೆ ಅನ್ಯಾಯವಾಗಿದೆ. ಹಾಗಾಗಿ ಕಾರ್ಯಕ್ರಮದಿಂದ ದೂರ ಉಳಿಯಲು ತೀರ್ಮಾನಿಸಲಾಗಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸಿ.ಪುಟ್ಟರಂಗಶೆಟ್ಟಿ, ಸಣ್ಣ-ಪುಟ್ಟ ತಪ್ಪಾಗಿರುವ ಬಗ್ಗೆ ನನಗೆ ಗೊತ್ತಿಲ್ಲ. ಕಾಂಗ್ರೆಸ್‌ನಲ್ಲಿ ಮುಸ್ಲಿಂ ಸಮುದಾಯವು ಒಂದು ಭಾಗವಾಗಿದ್ದು, ಶಾಸಕರ ಗಮನಕ್ಕೆ ನಿಮ್ಮ ಸಮಸ್ಯೆಯನ್ನು ತರುತ್ತೇನೆ. ಜಿಲ್ಲಾ ಉಸ್ತುವಾರಿಯಾಗಿರುವ ನನಗೂ ಹೆಚ್ಚಿನ ಜವಾಬ್ದಾರಿಯಾಗಿದೆ. ಅಲ್ಲದೆ ಸಿಎಂ ಜತೆ ನಿಮ್ಮನ್ನು ಮಾತನಾಡಿಸುತ್ತೇನೆ. ಶಾದಿ ಮಹಲ್ ಕಟ್ಟಡ ಪೂರ್ಣಕ್ಕೆ ಅನುದಾನ ಕೊಡಿಸಲು ಶ್ರಮಿಸುತ್ತೇನೆ. ದಯವಿಟ್ಟು ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂದರು.
ಮಾಜಿ ಶಾಸಕ ಆರ್.ನರೇಂದ್ರ ಮಾತನಾಡಿ, ಕಾಂಗ್ರೆಸ್ ಕಾರ್ಯಕ್ರಮಮವನ್ನು ಮುಸ್ಲಿಂ ಸಮುದಾಯ ಬಹಿಷ್ಕರಿಸಿದೆ ಎಂಬುದು ಬೇರೆ ಅರ್ಥ ನೀಡುತ್ತದೆ ಎಂದು ಮನವೊಲಿಸುವ ಪ್ರಯತ್ನ ಮಾಡಿದರು. ಬಳಿಕ ಅಂಜುಮಾನ್ ಎ-ಇಸ್ಲಾಮಿಯಾ ಅಧ್ಯಕ್ಷ ಹಬೀಬ್ ಪಾಷ ಮಾತನಾಡಿ, ಶಾದಿ ಮಹಲ್ ಕಟ್ಟಡ ಕಳಪೆಯಾಗಿದೆ. ಅಲ್ಲದೆ ಕಾರ್ಯಕ್ರಮಕ್ಕೆ ಹಾಜರಾಗುವ ಕುರಿತು ಸಮುದಾಯದವರ ಜತೆ ಸಭೆ ನಡೆಸಿ ತಿಳಿಸಲಾಗುತ್ತದೆ ಎಂದು ತಿಳಿಸಿದರು. ನಂತರ ಸಚಿವ ಪುಟ್ಟರಂಗಶೆಟ್ಟಿ ಶಾದಿ ಮಹಲ್ ಕಟ್ಟಡ ವೀಕ್ಷಣೆ ಮಾಡಿ ತೆರಳಿದರು.
ಅಂಜುಮಾನ್ ಎ-ಇಸ್ಲಾಮಿಯಾ ಸಮಿತಿ ಕಾರ್ಯದರ್ಶಿ ಅಬ್ದುಲ್ ಖಾದರ್ ಪಾಷ, ವಸೀಮ್ ಅಹಮ್ಮದ್, ವಸೀಮ್ ಪಾಷ, ಅಬ್ದುಲ್ ಸಾದಿಕ್, ಅಯೂಬ್ ಖಾನ್, ಮೊಹಮ್ಮದ್ ಮುಹಿಬುಲ್ಲ, ಅನ್ಸರ್ ಬೇಗ್ ಇತರರು ಇದ್ದರು.