ಚಾಮರಾಜನಗರ

ಲೋಕಲ್ ಪಾಲಿಟಿಕ್ಸ್‌ನಲ್ಲಿ ಲವಲವಿಕೆ

ಜಿಪಂ, ತಾಪಂ ಚುನಾವಣೆ ವರ್ಗಾವಾರು ಮೀಸಲಾತಿ ಅಧಿಸೂಚನೆ ಪ್ರಕಟ

ಚಾಮರಾಜನಗರ: ರಾಜ್ಯ ಸರ್ಕಾರ ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳ ಸ್ಥಾನಗಳಿಗೆ ವರ್ಗಾವಾರು ಮೀಸಲಾತಿ ಅಧಿಸೂಚನೆ ಹೊರಡಿಸಿದ್ದು, ಇದು ಸ್ಥಳೀಯ ರಾಜಕಾರಣದಲ್ಲಿ ಲವಲವಿಕೆಯನ್ನು ಸೃಷ್ಟಿ ಮಾಡಿದೆ.

ಜಿಲ್ಲಾ ಪಂಚಾಯಿತಿಗೆ ಒಟ್ಟು 28( ಮಹಿಳೆ-14) ಸ್ಥಾನಗಳನ್ನು ನಿಗದಿ ಮಾಡಿದ್ದು, ಅನುಸೂಚಿತ ಜಾತಿ-7(ಮಹಿಳೆ- 4), ಅನುಸೂಚಿತ ಪಂಗಡ-3(ಮಹಿಳೆ-2), ಹಿಂದುಳಿದ ವರ್ಗ ಎ-3(ಮಹಿಳೆ- 2), ಹಿಂದುಳಿದ ವರ್ಗ ಬಿ- 1, ಸಾಮಾನ್ಯ-14( ಮಹಿಳೆ- 6) ಸ್ಥಾನಗಳನ್ನು ನಿಗದಿ ಮಾಡಿದೆ. ತಾಲೂಕು ಪಂಚಾಯಿತಿಗೆ ಒಟ್ಟು 83( ಮಹಿಳೆ- 43) ಸ್ಥಾನಗಳನ್ನು ನಿಗದಿ ಮಾಡಿದೆ. ಅನುಸೂಚಿತ ಜಾತಿ -22( ಮಹಿಳೆ- 12), ಅನುಸೂಚಿತ ಪಂಗಡ- 8(ಮಹಿಳೆ- 5) , ಹಿಂದುಳಿದ ವರ್ಗ ಎ-8(ಮಹಿಳೆ- 5) , ಹಿಂದುಳಿದ ವರ್ಗ ಬಿ- 2, ಸಾಮಾನ್ಯ- 43(ಮಹಿಳೆ- 21) ಸ್ಥಾನಗಳೆಂದು ನಿಗದಿಪಡಿಸಿ ಆದೇಶಿಸಿದೆ. ಈ ಅಧಿಸೂಚನೆ ಹೊರಬಿದ್ದ ಕೂಡಲೇ ಸ್ಥಳೀಯ ರಾಜಕಾರಣ ಮೈಕೊಡವಿ ಮೇಲೆದ್ದಿದೆ. ಬಹುದಿನಗಳಿಂದ ಜಿಪಂ ಮತ್ತು ತಾಪಂ ಚುನಾವಣೆಗಳನ್ನು ಎದುರು ನೋಡುತ್ತಿರುವ ನಾಯಕರು ಅಧಿಸೂಚನೆಯತ್ತ ಕಣ್ಣರಳಿಸಿ ನೋಡುತ್ತಿದ್ದಾರೆ.

ಆಕಾಂಕ್ಷಿಗಳಲ್ಲಿ ಲೆಕ್ಕಾಚಾರ ಆರಂಭ: ಜಿಪಂ ಮತ್ತು ತಾಪಂ ಚುನಾವಣೆಗಾಗಿಯೇ ಅನೇಕ ನಾಯಕರು ವರ್ಷಗಳಿಂದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಪಕ್ಷದ ಉನ್ನತಮಟ್ಟದ ನಾಯಕರೊಂದಿಗೆ ತಮ್ಮ ಆಕಾಂಕ್ಷಿಗಳನ್ನು ವ್ಯಕ್ತಪಡಿಸಿ, ಪಕ್ಷ ಸಂಘಟನೆ, ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ಕೆಲವರು ದೂರದೃಷ್ಟಿ ಇಟ್ಟುಕೊಂಡು ತಮಗೆ ಸೂಕ್ತ ಎನಿಸುವ ಮತ್ತು ವರ್ಗಾವರು ಮೀಸಲಾತಿ ಪ್ರಕಾರ ಅನುಕೂಲವಾಗಬಹುದು ಎಂದು ಲೆಕ್ಕಾಚಾರ ಹಾಕಿ ಕ್ಷೇತ್ರಗಳನ್ನು ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಹೊರಬಿದ್ದಿರುವ ಅಧಿಸೂಚನೆ ಅವರಿಗೆ ಅನುಕೂಲ ಕಲ್ಪಿಸಲಿದೆಯೇ ಎನ್ನುವುದನ್ನು ಗಮನಿಸಲಾರಂಭಿಸಿದ್ದಾರೆ.

ಜಿಲ್ಲೆಯಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದಿರುವ ಕಾಂಗ್ರೆಸ್, ಒಂದು ಕ್ಷೇತ್ರದಲ್ಲಿ ಗೆದ್ದಿರುವ ಜೆಡಿಎಸ್, ವಿರೋಧ ಪಕ್ಷದ ಸ್ಥಾನದಲ್ಲಿರುವ ಬಿಜೆಪಿ, ಜನ ಸಂಘಟನೆ ಉತ್ತಮವಾಗಿರುವ ಬಿಎಸ್ಪಿ ಪಕ್ಷಗಳು ಚುನಾವಣಾ ಕಣದಲ್ಲಿ ಪೈಪೋಟಿಗಿಳಿಯವುದು ವಾಡಿಕೆ. ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ನಡೆದಿರುವು ಉದಾಹರಣೆಗಳಿವೆ. ಹಾಗೆಂದು ಬೇರೆ ಪಕ್ಷಗಳನ್ನು ಕಡೆಗಣಿಸುವಂತಿಲ್ಲ. ಆಕಾಂಕ್ಷಿಗಳಿಗೆ ಯಾವ ಪಕ್ಷದಿಂದ ಟಿಕೆಟ್ ತೆಗೆದುಕೊಳ್ಳಬೇಕು ಎನ್ನುವುದು ಮುಖ್ಯವಾಗುವುದರಿಂದ ಜನ ಕೇಂದ್ರಿತ ರಾಜಕಾರಣ ಶುರುವಾಗುವ ಮೊದಲು ಪಕ್ಷ ಕೇಂದ್ರಿತ ರಾಜಕಾರಣ ಆರಂಭವಾಗಲಿದೆ. ಆಕಾಂಕ್ಷಿಗಳು ತಾವು ಇಂತಹ ಕ್ಷೇತ್ರಕ್ಕೆ ಚುನಾವಣೆಗೆ ಸ್ಪರ್ಧೆ ಮಾಡಲು ಬಯಸಿರುವುದಾಗಿ ಅಥವಾ ಇವರ ಬೆಂಬಲಿಗರು ಪಕ್ಷದಿಂದ ಟಿಕೆಟ್ ಕೊಡಬೇಕೆಂದು ಒತ್ತಾಯ ಮಾಡುವುದು ಶುರುವಾಗಲಿದೆ.

ಜಿಪಂ ಮತ್ತು ತಾಪಂ ಕ್ಷೇತ್ರಗಳು:

ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿಗೆ ಒಟ್ಟು 28(ಮಹಿಳೆ-14) ಸ್ಥಾನಗಳನ್ನು ನಿಗದಿ ಮಾಡಲಾಗಿದೆ. ತಾಲೂಕು ಪಂಚಾಯಿತಿಯಲ್ಲಿ ಯಳಂದೂರು ತಾಲೂಕಿಗೆ ಒಟ್ಟು 9(ಮಹಿಳೆ-5)ಸ್ಥಾನಗಳನ್ನು ನಿಗದಿ ಮಾಡಲಾಗಿದೆ. ಕೊಳ್ಳೇಗಾಲ ತಾಲೂಕಿಗೆ ಒಟ್ಟು 13 (ಮಹಿಳೆ-7), ಹನೂರು ತಾಲೂಕಿಗೆ 17(ಮಹಿಳೆ 9), ಗುಂಡ್ಲುಪೇಟೆ ತಾಲೂಕಿಗೆ 20(ಮಹಿಳೆ-10), ಚಾಮರಾಜನಗರ ತಾಲೂಕಿಗೆ 24(ಮಹಿಳೆ-12) ಸೇರಿ ಒಟ್ಟು 83(ಮಹಿಳೆ-43) ಸ್ಥಾನಗಳನ್ನು ಅಧಿಸೂಚನೆಯಲ್ಲಿ ನಿಗದಿ ಮಾಡಲಾಗಿದೆ.

ತುಂಬಾ ವರ್ಷಗಳ ನಂತರ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ಅಧಿಸೂಚನೆ ಹೊರಬಿದ್ದಿದೆ. ಬಹಳ ಹಿಂದೆಯೇ ಚುನಾವಣೆ ನಡೆದಿರಬೇಕಾಗಿತ್ತು. ಎರಡು ಅವಧಿಯ ಅವಕಾಶಗಳು ಕೈತಪ್ಪಿವೆ. ಈಗ ಸ್ಥಳೀಯ ಮಟ್ಟದಲ್ಲಿ ನಾಯಕತ್ವ ವೃದ್ಧಿ ಮಾಡಿಕೊಳ್ಳಲು ಅವಕಾಶ ಸಿಕ್ಕಿದೆ. ಹಳ್ಳಿಗಳ ಅಭಿವೃದ್ಧಿಗೆ ಚುನಾವಣೆ ಸಹಕಾರಿಯಾಗಲಿದೆ. ಆದರೆ ಗ್ರಾಮ ಪಂಚಾಯಿತಿ ಚುನಾವಣೆ ಬದಲು ಜಿಪಂ ಮತ್ತು ತಾಪಂ ಚುನಾವಣೆಯನ್ನು ಮೊದಲು ತರುತ್ತಿರುವುದರ ಹಿಂದಿನ ಹುನ್ನಾರವೇನು ಎಂದು ಗೊತ್ತಿಲ್ಲ. ಆದರೆ ನಾವು ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತೇವೆ.

ಸಿ.ಎಸ್.ನಿರಂಜನ್‌ಕುಮಾರ್, ಜಿಲ್ಲಾಧ್ಯಕ್ಷ, ಬಿಜೆಪಿ

ಜಿಪಂ ಮತ್ತು ತಾಪಂಗೆ ವರ್ಗಾವಾರು ಮೀಸಲಾತಿ ಅಧಿಸೂಚನೆ ಹೊರಬಿದ್ದಿದೆ. ಚುನಾವಣಗೆ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಮತ್ತು ಗೆಲ್ಲುವಂತ ಕ್ಷೇತ್ರಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯ ಪ್ರವೃತ್ತರಾಗಿದ್ದಾರೆ.

ನಾಗಯ್ಯ, ರಾಜ್ಯ ಕಾರ್ಯದರ್ಶಿ ಬಿಎಸ್ಪಿ

ಜಿಪಂ ಮತ್ತು ತಾಪಂ ಚುನಾವಣೆಗಾಗಿ ಪಕ್ಷ ಸಂಘಟನೆ ನಿರಂತರವಾಗಿ ನಡೆಯುತ್ತಲೇ ಇದೆ. ಪಕ್ಷದಲ್ಲಿ ಆಕಾಂಕ್ಷಿಗಳ ಸಂಖ್ಯೆ ಅಧಿಕಾವಾಗಿಯೇ ಇರುತ್ತದೆ. ಕಾಂಗ್ರೆಸ್ ಟಿಕೆಟ್‌ಗೆ ತುಂಬಾ ಬೇಡಿಕೆ ಇರುತ್ತದೆ. ರಾಜ್ಯದಲ್ಲಿ ಜಿಪಂ ಮತ್ತು ತಾಪಂ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ ಮಾಡಬೇಕೆಂದು ಒತ್ತಾಯಿಸುತ್ತೇನೆ.

ಯೋಗೇಶ್, ಜಿಲ್ಲಾಧ್ಯಕ್ಷ, ಕಾಂಗ್ರೆಸ್

ಸಿ.ಎಸ್.ನಿರಂಜನ್‌ಕುಮಾರ್, ನಾಗಯ್ಯ, ಯೋಗೇಶ್ ಭಾವಚಿತ್ರಗಳಿವೆ

===========