ಚಾಮರಾಜನಗರ: ಅಕ್ಷರ, ಅನ್ನದಾಸೋಹದ ಮೂಲಕ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ನಗರದ ಜೆಎಸ್ಎಸ್ ಮಹಿಳಾ ಕಾಲೇಜು ಆವರಣದಲ್ಲಿ ಸಂಘ ಸಂಸ್ಥೆಗಳು, ಭಕ್ತವೃಂದ, ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳು ಹಾಗೂ ಜೆಎಸ್ಎಸ್ ಆಸ್ಪತ್ರೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 111ನೇ ಜಯಂತಿ ಮಹೋತ್ಸವದಲ್ಲಿ ಮಾತನಾಡಿದರು.
ರಾಜೇಂದ್ರ ಶ್ರೀಗಳು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಲೆ, ವಸತಿ ನಿಲಯಗಳನ್ನು ತೆರೆದು ಶಿಕ್ಷಣ ನೀಡಿದರು. ಅದರಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳು ಇಂದು ಬದುಕು ಕಟ್ಟಿಕೊಂಡಿದ್ದಾರೆ ಎಂದು ತಿಳಿಸಿದರು.
ಕಲಾ ಕ್ಷೇತ್ರದಲ್ಲಿ ಡಾಲಿ ಧನಂಜಯ ಹೆಸರು ಮಾಡಿದ್ದಾರೆ. ವರನಟ ಡಾ.ರಾಜ್ಕುಮಾರ್ ಅವರು ಕನ್ನಡದ ಮೇರು ನಟ. ನಯ, ವಿನಯ ರೂಡಿಸಿಕೊಂಡಿದ್ದ ಅವರನ್ನು ಮೈಸೂರಿನಲ್ಲಿ ಹಿರಿಯ ಶ್ರೀಗಳು ಆಶೀರ್ವದಿಸಿದ್ದರು. ಆಗ ಮಾತನಾಡಿದ್ದ ರಾಜಕಮಾರ್, ಸ್ವರ್ಗ ಇಲ್ಲೇ ಇದೆ. ಪರಮೇಶ್ವರ ಇಲ್ಲೇ ಇದ್ದಾನೆ ಎಂದು ಗುರುಗಳನ್ನು ಮನದುಂಬಿ ಕೊಂಡಾಡಿದ್ದರು. ಅಂತಹ ಮೇರು ನಟನ ಮೇಲೆ ಪ್ರಭಾವ ಬೀರಿದ್ದವರು ರಾಜೇಂದ್ರ ಶ್ರೀಗಳು ಎಂದು ಸ್ಮರಿಸಿದರು.
ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ರಾಜೇಂದ್ರ ಶ್ರೀಗಳು ತಮಗಾಗಿ ಏನನ್ನೂ ಬಯಸದೇ ಸಮಾಜಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಅಕ್ಷರ, ಅನ್ನದಾಸೋಹ ಮೂಲಕ ಶಿಕ್ಷಣ ಕ್ರಾಂತಿಯ ಹರಿಕಾರರಾಗಿದ್ದರು. ತೆರೆದ ಪುಸ್ತಕದಂತಿದ್ದ ರಾಜೇಂದ್ರ ಶ್ರೀಗಳು ಸಾಂಸ್ಕೃತಿಕ, ಧಾರ್ಮಿಕ ಕ್ಷೇತ್ರದಲ್ಲಿ ತಮ್ಮದೇ ಕೊಡುಗೆ ನೀಡಿದ್ದಾರೆ ಎಂದರು.
ಚಲನಚಿತ್ರನಟ ಡಾಲಿ ಧನಂಜಯ ಮಾತನಾಡಿ, ಪ್ರತಿಯೊಬ್ಬರಿಗೂ ಶಿಕ್ಷಣ, ಆರೋಗ್ಯ ಸೇವೆಗಳು ದೊರಕಬೇಕು ಎಂಬ ದೂರದೃಷ್ಟಿಯನ್ನು ಹೊಂದಿದ್ದ ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ ಸೇವಾ ಕಾರ್ಯವನ್ನು ನಾವು ಮರೆಯುವಂತಿಲ್ಲ. ಹೆಣ್ಣು ಮಕ್ಕಳು ತಮ್ಮ ಭವಿಷ್ಯವನ್ನು ಕಟ್ಟಿಕೊಂಡಾಗ ದೇಶ ಪ್ರಗತಿಯಾಗುತ್ತದೆ. ಇಲ್ಲಿ ಓದುತ್ತಿರುವ ಹೆಣ್ಣು ಮಕ್ಕಳು ಓದು ಮೊಟಕುಗೊಳಿಸದೆ ನಿಮ್ಮ ಗುರಿ ತಲುಪಿ, ಉನ್ನತ ವ್ಯಾಸಂಗ ಮಾಡಿ ಎಂದು ಕಿವಿಮಾತು ಹೇಳಿದರು.
ನಟ ಎನ್.ಎಸ್.ನಾಗಭೂಷಣ ಮಾತನಾಡಿ, ನಾನು ಚಾಮರಾಜನಗರ ಜಿಲ್ಲೆಯವನೇ. ನಾನು ಚಾ.ನಗರ ಸಮೀಪದ ನವೋದಯ ವಿದ್ಯಾಲಯದಲ್ಲಿ ಓದಿದೆ. ಇಲ್ಲಿನ ಪಚ್ಚಪ್ಪ ಸರ್ಕಲ್ನಲ್ಲಿ ಬಸ್ಗಾಗಿ ಕಾಯುತ್ತಿದ್ದೆ ಎಂದು ಸ್ಮರಿಸಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಜಾಲಹಳ್ಳಿಹುಂಡಿ ಗೌರಮ್ಮ ಅವರನ್ನು ಸನ್ಮಾನಿಸಲಾಯಿತು. ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಇದಕ್ಕೂ ಮೊದಲು ರಾಜೇಂದ್ರ ಶ್ರೀಗಳ ಮೆರವಣಿಗೆ ವಿವಿಧ ಕಲಾತಂಡಗಳೊಂದಿಗೆ ಶ್ರೀ ಚಾಮರಾಜೇಶ್ವರ ದೇವಸ್ಥಾನದಿಂದ ಆರಂಭವಾಗಿ ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಅಂತ್ಯವಾಯಿತು.
ಹರವೆ ವಿರಕ್ತ ಮಠದ ಶ್ರೀ ಸರ್ಪಭೂಷಣ ಸ್ವಾಮೀಜಿ, ಚಾ.ನಗರ ಸಿದ್ದಮಲ್ಲೇಶ್ವರ ವಿರಕ್ತಮಠದ ಚೆನ್ನಬಸವ ಸ್ವಾಮೀಜಿ, ಮಾಜಿ ಎಂಎಲ್ಸಿ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರು, ಚಾಮುಲ್ ಅಧ್ಯಕ್ಷ ಎಂ. ನಂಜುಂಡಸ್ವಾಮಿ, ಡಿವೈಎಸ್ಪಿ ಸ್ನೇಹರಾಜ್, ನಿವೃತ್ತ ಪ್ರಾಧ್ಯಾಪಕ ಪ್ರೊ.ಜಿ.ಎಂ.ತಿಪ್ಪೇಸ್ವಾಮಿ, ಜೆಎಸ್ಎಸ್ ಸಂಸ್ಥೆಗಳ ಪಿಆರ್ಓ ಆರ್.ಎಂ.ಸ್ವಾಮಿ, ಮುಖಂಡರಾದ ಎಂ.ರಾಮಚಂದ್ರ, ಬಿ.ಕೆ.ರವಿಕುಮಾರ್, ದೊಡ್ಡರಾಯಪೇಟೆ ಗಿರೀಶ್ ಇತರರು ಇದ್ದರು.
ವೇದಿಕೆಯಲ್ಲಿ ಡಾಲಿ ಕ್ರೇಜ್!
ವೇದಿಕೆಯಲ್ಲಿ ನಟ ಡಾಲಿ ಧನಂಜಯ ಅವರು ಭಾಷಣಕ್ಕೂ ಮೊದಲು ತಮ್ಮ ಚಲನಚಿತ್ರದ ಓ ಪುಟ್ಟ ಮಲ್ಲಿ ಹಾಡಿಗೆ ವಿದ್ಯಾರ್ಥಿನಿಯರೊಂದಿಗೆ ಹೆಜ್ಜೆ ಹಾಕಿ ರಂಜಿಸಿದರು. ಇಡೀ ಕಾರ್ಯಕ್ರಮದಲ್ಲಿ ಡಾಲಿ ಕ್ರೇಜ್ ಜೋರಾಗಿತ್ತು. ಪ್ರತಿಯೊಬ್ಬ ಅತಿಥಿ ಮಾತನಾಡಲು ನಿಂತಾಗಲೂ ಸಾವಿರಾರು ವಿದ್ಯಾರ್ಥಿನಿಯರು ಓ ಡಾಲಿ ಎಂದು ಕೂಗುತ್ತಿದ್ದರು.