ಚಾಮರಾಜನಗರ ತಾಲೂಕಿನ ಮಸಣಾಪುರ ಗ್ರಾಮ ಪಂಚಾಯಿತಿ ಸಮೀಪದ ರಸ್ತೆಯಲ್ಲಿ ಚರಂಡಿ ನೀರು ಹರಿಯುತ್ತಿರುವುದು. 
ಚಾಮರಾಜನಗರ

ರಸ್ತೆಯಲ್ಲೇ ಹರಿಯುತ್ತಿದೆ ಕೊಳಚೆ ನೀರು

ಮಸಣಾಪುರದಲ್ಲಿ ಚರಂಡಿ ಅವ್ಯವಸ್ಥೆ

ಯಳಂದೂರು: ಚಾಮರಾಜನಗರ ತಾಲೂಕಿನ ಮಸಣಾಪುರ ಗ್ರಾಮ ಪಂಚಾಯಿತಿ ಸಮೀಪದ ಬಡಾವಣೆಯಲ್ಲಿ ಚರಂಡಿ ಅವ್ಯವಸ್ಥೆಯಿಂದ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದೆ.

ಪಂಚಾಯಿತಿ ಕೇಂದ್ರ ಸ್ಥಳದಲ್ಲಿ ಈ ಚರಂಡಿಯಲ್ಲಿ ಕಸ, ಪ್ಲಾಸ್ಟಿಕ್ ತ್ಯಾಜ್ಯ ತುಂಬಿಕೊಂಡಿರುವುದರಿಂದ ಮಳೆ ನೀರು ಹಾಗೂ ಮನೆಗಳ ಕೊಳಚೆ ನೀರು ರಸ್ತೆಯಲ್ಲೇ ನಿಂತು ದುರ್ನಾತ ಬೀರುತ್ತಿದೆ. ಇದರಿಂದ ಮುಖ್ಯವಾಗಿ ನಾಯಕ ಮತ್ತು ಲಿಂಗಾಯತ ಸಮುದಾಯದ ಬಡಾವಣೆ ನಿವಾಸಿಗಳಿಗೆ ತೊಂದರೆಯಾಗಿದೆ.

ಜತೆಗೆ ಕೊಳಚೆ ನೀರಿನಿಂದ ಸೊಳ್ಳೆಗಳ ಕಾಟ ಹೆಚ್ಚಾಗಿ ಡೆಂೆ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಈ ಬಗ್ಗೆ ಹಲವು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಚರಂಡಿಯನ್ನು ಸ್ವಚ್ಛಗೊಳಿಸಿ, ರಸ್ತೆ ಮೇಲೆ ಹರಿಯುವ ಚರಂಡಿ ನೀರನ್ನು ನಿಲ್ಲಿಸಲು ಶಾಶ್ವತವಾಗಿ ಪರಿಹಾರ ಕಲ್ಪಿಸಬೇಕೆಂದು ನಾಯಕ ಹಾಗೂ ಲಿಂಗಾಯತ ಸಮುದಾಯ ಬಡಾವಣೆ ನಿವಾಸಿಗಳು ಒತ್ತಾಯಿಸಿದ್ದಾರೆ.

ಮಸಣಾಪುರ ಗ್ರಾಮದ ಪ್ರಮುಖ ಬೀದಿಯ ಬಡಾವಣೆಯಲ್ಲಿ ರಸ್ತೆಯಲ್ಲಿ ಚರಂಡಿ ನೀರು ಹರಿಯುತ್ತಿರುವುದರಿಂದ ತಾತ್ಕಾಲಿಕವಾಗಿ ಕಸ ವಿಲೇವಾರಿ ಮಾಡಿಸಲಾಗುವುದು. ಜತೆಗೆ ಚರಂಡಿ ಮೇಲೆ ಮನೆ ನಿರ್ಮಾಣ ಮಾಡಿರುವ ಕಾರಣ ಆ ಸ್ಥಳದಿಂದ ನೀರು ಹರಿಯುತ್ತಿಲ್ಲ. ಆ ಮನೆಯವರಿಗೆ ನೋಟಿಸ್ ಜಾರಿ ಮಾಡಲಾಗುವುದು. ತೆರವುಗೊಳಿಸಿದ ನಂತರ 16ನೇ ಹಣಕಾಸಿನ ಯೋಜನೆ ಮೂಲಕ ಕ್ರಿಯಾ ಯೋಜನೆ ಪಟ್ಟಿಗೆ ಸೇರಿಸಿ ಚರಂಡಿ ನಿರ್ಮಾಣ ಕಾಮಗಾರಿ ನಡೆಸಲಾಗುವುದು.

ಮಮತಾ ಪಿಡಿಒ, ಮಸಣಾಪುರ ಗ್ರಾಮ ಪಂಚಾಯಿತಿ, ಚಾಮರಾಜನಗರ