ಕೌದಳ್ಳಿ ಗ್ರಾಮದ ಅಂಗಡಿ ಮುಂಗಟ್ಟುಗಳಿಗೆ ಶಾಸಕ ಎಂ.ಆರ್ ಮಂಜುನಾಥ್ ಅವರು ಭೇಟಿ ನೀಡಿ, ಪರಿಶೀಲಿಸಿ ಮಾಲೀಕರೊಂದಿಗೆ ಮಾತುಕತೆ ನಡೆಸಿದರು. ಆಕಾಶ್, ನಾಗರಾಜು, ಇತರರಿದ್ದರು.  
ಚಾಮರಾಜನಗರ

ಮುಖ್ಯರಸ್ತೆಯಲ್ಲಿನ ಚರಂಡಿ ಅತಿಕ್ರಮಿಸಿ ವ್ಯಾಪಾರ

ಅಂಗಡಿ ಮಾಲೀಕರಿಗೆ ಬಿಸಿಮುಟ್ಟಿದ ಶಾಸಕ

ಹನೂರು: ತಾಲೂಕಿನ ಕೌದಳ್ಳಿ ಗ್ರಾಮಕ್ಕೆ ಶುಕ್ರವಾರ ಶಾಸಕ ಎಂ.ಆರ್.ಮಂಜುನಾಥ್ ದಿಢೀರ್ ಭೇಟಿ ನೀಡಿ, ಮುಖ್ಯ ರಸ್ತೆಯಲ್ಲಿನ ಚರಂಡಿಯನ್ನು ಅತಿಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿದ್ದ ಅಂಗಡಿ ಮಾಲೀಕರಿಗೆ ಹಿಂದೆ ಸರಿದು ವ್ಯಾಪಾರ ನಡೆಸುವಂತೆ ಸೂಚನೆ ನೀಡಿದರು.

ಗ್ರಾಮದ ಈ ರಸ್ತೆಯು ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುವ ಮುಖ್ಯ ರಸ್ತೆಯಾಗಿದ್ದು, ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಕಾಲ್ನಡಿಗೆಯ ಭಕ್ತರು ಹಾಗೂ ಪಾದಚಾರಿಗಳು ತೆರಳುತ್ತಾರೆ. ಆದರೆ ಇಲ್ಲಿ ಕೆಲ ಅಂಗಡಿ ಮಾಲೀಕರು ಚರಂಡಿಯನ್ನು ಅತಿಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿದ್ದರು. ಇದರಿಂದ ಚರಂಡಿಯಲ್ಲಿ ತ್ಯಾಜ್ಯ ಸಂಗ್ರಹವಾಗಿ ಕೊಳಚೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿರಲಿಲ್ಲ. ಜತೆಗೆ ಮಳೆಗಾಲದ ವೇಳೆ ಚರಂಡಿ ನೀರು ಮುಖ್ಯರಸ್ತೆಯಲ್ಲಿ ಹರಿದು ಅನೈರ್ಮಲ್ಯ ಉಂಟಾಗುತ್ತಿತ್ತು. ಈ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿತ್ತು.

ಈ ಹಿನ್ನೆಲೆಯಲ್ಲಿ ಭೇಟಿ ನೀಡಿದ ಶಾಸಕರು, ಅಂಗಡಿ ಮುಂಗಟ್ಟುಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವುದು ಎಲ್ಲರ ಆದ್ಯ ಕರ್ತವ್ಯ. ಆದರೆ ಚರಂಡಿ ಅತಿಕ್ರಮಿಸಿಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ? ಇದರಿಂದ ಕೊಳಚೆ ನೀರು ಹರಿಯಲು ಸಾಧ್ಯವಾಗದೇ ಅಶುಚಿತ್ವಕ್ಕೆ ಕಾರಣವಾಗಿದೆ. ಆದ್ದರಿಂದ ಈ ಬಗ್ಗೆ ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಂಡು ಚರಂಡಿಯಿಂದ ಹಿಂದೆ ಸರಿದು ವ್ಯಾಪಾರ ಮಾಡಬೇಕು. ಸ್ವಚ್ಛತೆಗೆ ಸಹಕರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಿದರು. ಇದಕ್ಕೆ ಅಂಗಡಿ ಮಾಲೀಕರು ಸಕಾರಾತ್ಮಕವಾಗಿ ಸ್ಪಂದಿಸಿದರು.

ಈ ಸಂದರ್ಭದಲ್ಲಿ ಪಿಡಿಒ ಆಕಾಶ್, ಮುಖಂಡರಾದ ನಾಗರಾಜು, ಮಹದೇವ ಹಾಗೂ ಇತರರಿದ್ದರು.