ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ ನ.6 ರಿಂದ 5 ದಿನಗಳ ಕಾಲ ನಡೆಯುವ ದೀಪಾವಳಿ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಅಗತ್ಯ ಸಿದ್ಧತಾ ಕಾರ್ಯ ಭರದಿಂದ ಸಾಗಿದೆ.
ಮಾದಪ್ಪನ ಸನ್ನಿಧಿಯಲ್ಲಿ ನ.6 ರಂದು ಮಾದಪ್ಪನಿಗೆ ವಿಶೇಷ ಪೂಜೆ ನೆರವೇರಿಸುವುದರ ಮೂಲಕ ದೀಪಾವಳಿ ಜಾತ್ರೆ ಆರಂಭವಾಗಲಿದ್ದು, 7ರಂದು ಸ್ವಾಮಿಗೆ ಎಣ್ಣೆಮಜ್ಜನ ಸೇವೆ ನಡೆಯಲಿದೆ. 8ರಂದು ನರಕ ಚತುರ್ದಶಿ ಅಂಗವಾಗಿ ವಿಶೇಷ ಉತ್ಸಾವಾಧಿ ಸೇವೆಗಳು, 9 ರಂದು ಅಮಾವಾಸ್ಯೆ ಪ್ರಯುಕ್ತ ಮಾದಪ್ಪನಿಗೆ ವಿಶೇಷ ಪೂಜೆ, 101 ಬಾಲೆಯರಿಂದ ಹಾಲರವಿ ಉತ್ಸವವು ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ವಿಜೃಂಭಣೆಯಿಂದ ನೆರವೇರಲಿದೆ. 10ರಂದು ಬೆಳಗ್ಗೆ 7.30 ರಿಂದ 8.40 ರವೆರೆಗೆ ಸಲ್ಲುವ ಶುಭ ಲಗ್ನದಲ್ಲಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಹಾ ರಥೋತ್ಸವ ಜರುಗಲಿದೆ. ಬಳಿಕ ಶ್ರೀಗಳ ಸಾನ್ನಿಧ್ಯದಲ್ಲಿ ದೇವಾಲಯದ ಸುತ್ತ ಗುರು ಬ್ರಹ್ಮೋತ್ಸವ ಹಾಗೂ ದೇಗುಲದ ಒಳಾಂಗಣದಲ್ಲಿ ಅನ್ನ ಬ್ರಹ್ಮೋತ್ಸವ ನೆರವೇರಲಿದೆ. ರಾತ್ರಿ 9ಗಂಟೆ ಬಳಿಕ ಶ್ರೀಗಳ ಸಾನ್ನಿಧ್ಯದಲ್ಲಿ ತೆಪ್ಪೋತ್ಸವ ಜರುಗಲಿದೆ.
ಪ್ರಾಧಿಕಾರದಿಂದ ಅಗತ್ಯ ಸೌಕರ್ಯ
ಈ ಜಾತ್ರಾ ಮಹೋತ್ಸವಕ್ಕೆ ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಮ.ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ. ಜತೆಗೆ ಈಗಾಗಲೇ ಚಾಮರಾಜನಗರ ಸೇರಿದಂತೆ ಮೈಸೂರು, ಮಂಡ್ಯ, ನರಸೀಪುರ, ಎಚ್.ಡಿ ಕೋಟೆ, ಮಳವಳ್ಳಿ ಹಾಗೂ ಇನ್ನಿತರೆ ಕಡೆಗಳಿಂದ ಸಾವಿರಾರು ಭಕ್ತರು ಕಾಲ್ನಡಿಗೆಯ ಮೂಲಕ ತೆರಳುತ್ತಿದ್ದು, ತಾಳುಬೆಟ್ಟದಲ್ಲಿ ತಂಗುವುದರ ಮೂಲಕ ಮ.ಬೆಟ್ಟಕ್ಕೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ. ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ವಿವಿಧ ಘಟಕಗಳಿಂದ 350 ಹೆಚ್ಚುವರಿ ಕೆಎಸ್ಆರ್ಟಿಸಿ ಹಾಗೂ 20 ತಮಿಳುನಾಡು ಬಸ್ ವ್ಯವಸ್ಥೆ ಮಾಡಲಾಗಿದೆ.
ಟ್ಯಾಂಕ್ ನೀರು, ನೆರಳಿನ ವ್ಯವಸ್ಥೆ
ಕಾಲ್ನಡಿಗೆಯಲ್ಲಿ ಆಗಮಿಸುವ ಭಕ್ತರಿಗೆ ತಾಳುಬೆಟ್ಟದಿಂದ ಮ.ಬೆಟ್ಟದವರೆಗೆ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಮಾಸ್ಟರ್ ಪ್ಲಾನ್ ಆವರಣದಲ್ಲಿ 8 ಕಡೆಗಳಲ್ಲಿ ನಿರ್ಮಿಸಿರುವ ಘಟಕಗಳಿಗೆ ಶುದ್ಧ ಕುಡಿವ ನೀರು ಪೂರೈಕೆ ಮಾಡಲಾಗಿದೆ. ಭಕ್ತರು ಪರ ಮಾಡುವ ಸ್ಥಳಗಳಲ್ಲಿ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ರಾಜಗೋಪುರದ ಮುಂಭಾಗದ ಎರಡು ಕಡೆ, ಭಕ್ತರು ದೇವರ ದರ್ಶನ ಪಡೆಯುವ ಸರತಿ ಸಾಲು ಹಾಗೂ ವಿಶೇಷ ದಾಸೋಹದಲ್ಲಿ ಶಾಮಿಯಾನ ಅಳವಡಿಸಿ ನೆರಳಿನ ವ್ಯವಸ್ಥೆ ಕಲ್ಪಿಸಲಾಗಿದೆ. ನಿರಂತರ ದಾಸೋಹಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮುಖ್ಯವಾಗಿ ಯಾವುದೇ ರೀತಿಯಲ್ಲೂ ಸಮಸ್ಯೆಯಾಗದಂತೆ ಭಕ್ತರ ಸುಸೂತ್ರ ದೇವರ ದರ್ಶನಕ್ಕೆ ಅಗತ್ಯ ಸಿದ್ಧತೆ ನಡೆದಿದ್ದು, ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿದೆ. ಪಾದಯಾತ್ರಿಗಳು, ಹಿರಿಯ ನಾಗರಿಕರು ಹಾಗೂ ವಿಕಲಚೇತನರಿಗೆ ದೇವರ ದರ್ಶನಕ್ಕೆ ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ. ವಾಹನಗಳ ಪಾರ್ಕಿಂಗ್ಗೆ ವ್ಯವಸ್ಥೆ ಮಾಡಲಾಗಿದೆ. ದೇಗುಲ ಸೇರಿದಂತೆ ಮಾಸ್ಟರ್ ಪ್ಲಾನ್ ಆವರಣದಲ್ಲಿ ಝಗಝಗಮಿಸುವಂತೆ ವಿದ್ಯುತ್ ದೀಪಾಲಂಕಾರ, ದೇಗುಲಕ್ಕೆ ವಿವಿಧ ಬಗೆಯ ಹೂವಿನ ಅಲಂಕಾರ ಸೇರಿದಂತೆ ಸುಸೂತ್ರ ಜಾತ್ರೆಗೆ ಪ್ರಾಧಿಕಾರದಿಂದ ಸಿದ್ಧತೆ ನಡೆದಿದೆ.
ಜವಾಬ್ದಾರಿ ಹಂಚಿಕೆ
ಜಾತ್ರೆ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿ ಶ್ರೀರೂಪಾ ಅಧ್ಯಕ್ಷತೆಯಲ್ಲಿ ಪ್ರಾಧಿಕಾರ, ಸೆಸ್ಕ್, ಅರಣ್ಯ, ಪಿಡಬ್ಲ್ಯುಡಿ, ಸಾರಿಗೆ, ಪೊಲೀಸ್, ಆರೋಗ್ಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಸುಗ, ಜಾತ್ರೆಗೆ ಅಗತ್ಯ ಕ್ರಮವಹಿಸುವಂತೆ ಸೂಚಿಸಲಾಗಿದೆ. ಮ.ಬೆಟ್ಟದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಜಿ.ಪುರುಷೋತ್ತಮ ಅವರು ನೌಕರರ ಸಭೆ ನಡೆಸಿ ಜವಬ್ದಾರಿ ಹಂಚಿಕೆ ಮಾಡಲಾಗಿದ್ದು, ಅಗತ್ಯ ನಿರ್ದೇಶನ ನೀಡಿದ್ದಾರೆ.
ಸ್ವಚ್ಛತೆಗೆ ಹೆಚ್ಚಿನ ಒತ್ತು
ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸುವುದರಿಂದ ಮ.ಬೆಟ್ಟದಲ್ಲಿ ಸ್ವಚ್ಛತೆಯನ್ನು ಕಾಪಾಡುವುದು ಪ್ರಾಧಿಕಾರಕ್ಕೆ ಸವಾಲಿನ ಕೆಲಸವಾಗಿದೆ. ಹಾಗಾಗಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿದೆ. ಮೈಸೂರು ಮಹಾನಗರ ಪಾಲಿಕೆ ಹಾಗೂ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ಕಸ ವಿಲೇವಾರಿ ವಾಹನಗಳನ್ನು ಬಳಕೆ ಮಾಡಿಕೊಳ್ಳಲಾಗಿದ್ದು, ಸ್ಚಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಇನ್ನು ಭಕ್ತರ ಆರೋಗ್ಯದ ಹಿತದೃಷ್ಠಿಯಿಂದ ಅಗತ್ಯ ವೈದ್ಯಕೀಯ ಸಿಬ್ಬಂದಿ ನಿಯೋಜಿಸಲಾಗಿದೆ. ಪರ ಮಾಡುವ ಸ್ಥಳದಲ್ಲಿ ಆಹಾರ ಪರೀಕ್ಷೆ, ಪ್ರಥಮ ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ತಾಳುಬೆಟ್ಟದಲ್ಲಿ ತಾತ್ಕಲಿಕ ಆಸ್ಪತ್ರೆ ಕಾರ್ಯನಿರ್ವಹಿಸಲಿದೆ.
ಪೊಲೀಸ್ ಬಂದೋಬಸ್ತ್
ಭಕ್ತರ ಸುಗಮ ಸಂಚಾರದ ದೃಷ್ಠಿಯಿಂದ ವಾಹನಗಳ ಏಕಮುಖ ಸಂಚಾರ, ನಿಬರ್ಂಧಿತ ಸ್ಥಳಗಳಿಗೆ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ. ಒಬ್ಬರು ಡಿವೈಎಸ್ಪಿ, 7 ಇನ್ಸ್ಪೆಕ್ಟರ್, 13 ಸಬ್ ಇನ್ಸ್ಪೆಕ್ಟರ್, 40 ಎಎಸ್ಐ, 300 ಪುರುಷ ಪೊಲೀಸರು, 30 ಮಹಿಳಾ ಪೊಲೀಸರು, 350 ಗೃಹ ರಕ್ಷಕ ದಳ ಸಿಬ್ಬಂದಿ, 5 ಡಿಆರ್ ವಾಹನ ಹಾಗೂ 3 ಕೆಎಸ್ಆರ್ಪಿ ತುಕಡಿಯನ್ನು ಜಾತ್ರೆಯಲ್ಲಿ ಬಂದೋಬಸ್ತ್ಗೆ ನಿಯೋಜಿಸಲಾಗಿದೆ.
ನಾಲ್ಕು ಲಕ್ಷ ಲಾಡು
ಮ.ಬೆಟ್ಟಕ್ಕೆ ಆಗಮಿಸುವ ಬಹುತೇಕ ಭಕ್ತರು ಇಲ್ಲಿ ಸಿಗುವ ಲಾಡು ದೇವರ ಮಹಾ ಪ್ರಸಾದವೆಂದು ಭಾವಿಸುತ್ತಾರೆ. ಹಾಗಾಗಿ ಜಾತ್ರಾ ವೇಳೆ ಲಕ್ಷಾಂತರ ಲಾಡು ಮಾರಾಟವಾಗುತ್ತದೆ. ಈ ನಿಟ್ಟಿನಲ್ಲಿ 4 ಲಕ್ಷ ಲಾಡು ತಯಾರಿಸಲು ನಿರ್ಧರಿಸಲಾಗಿದೆ. ಈಗಾಗಲೇ 2 ಲಕ್ಷ ಲಾಡು ತಯಾರಿಸಿದ್ದು, ಈ ಕಾರ್ಯ ಬಾಣಸಿಗರಿಂದ ಮುಂದುವರಿದಿದೆ.
ದೀಪಾವಳಿ ಜಾತ್ರೆ ಸಂಬಂಧ ಜಿಲ್ಲಾಧಿಕಾರಿ ಅವರು ಸಭೆ ನಡೆಸಿ ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಿದ್ದಾರೆ. ಅದರಂತೆ ಅಗತ್ಯ ಕ್ರಮ ವಹಿಸಲಾಗಿದೆ. ಭಕ್ತರಿಗೆ ದೇವರ ದರ್ಶನ, ನೆರಳು, ಕುಡಿಯುವ ನೀರು, ಶೌಚಗೃಹ, ಬಸ್ ಸೌಕರ್ಯ ಸೇರಿ ಅಗತ್ಯ ಮೂಲ ಸೌಕರ್ಯ ಒದಗಿಸಲಾಗಿದೆ. ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಜರುಗುವ ಹಾಲರವಿ ಉತ್ಸವ, ಮಹಾ ರಥೋತ್ಸವ ಹಾಗೂ ತೆಪ್ಪೋತ್ಸವಕ್ಕೆ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಾತ್ರೆಯ ಯಶಸ್ವಿಗೆ ಅಗತ್ಯ ಕ್ರಮ ವಹಿಸಲಾಗಿದೆ.
ಜಿ.ಪುರುಷೋತ್ತಮ, ಕಾರ್ಯದರ್ಶಿ, ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಮ.ಬೆಟ್ಟ