ಯಳಂದೂರು: ಮದ್ದೂರು ಹಾಗೂ ಅಗರ ಕೆರೆಗಳಿಗೆ ಕಾವೇರಿ ನದಿಯಿಂದ ನೀರು ತುಂಬಿಸಿ ಅಲ್ಲಿಂದ ಡಾಬಸ್ ಪೇಟೆ ಕೈಗಾರಿಕಾ ಪ್ರದೇಶಕ್ಕೆ ನೀರು ಕೊಂಡೊಯ್ಯಲು ನಾನೇ ಸಾಕ್ಷಿಯಾಗಿದ್ದು, ಇದರಿಂದ ಈ ಭಾಗದ ರೈತರಿಗೆ ಅನುಕೂಲವಾಗಲಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ಕೆಐಎಡಿಬಿ, ನೀರಾವರಿ ಇಲಾಖೆ ಅಧಿಕಾರಿಗಳು, ರೈತರು ಹಾಗೂ ಗ್ರಾಮಸ್ಥರೊಂದಿಗೆ ತಾಲೂಕಿನ ಅಗರ ಗ್ರಾಮದ ಟಿ.ಎಸ್.ಸುಬ್ಬಣ್ಣ ಪ್ರೌಢಶಾಲೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. 839 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು, ಮದ್ದೂರು ಹಾಗೂ ಅಗರ ಕೆರೆಗಳ ಹೂಳು ತೆಗೆದು, ಬಂಡ್‌ನ ಎತ್ತರ ಹೆಚ್ಚಿಸಿ ಪಕ್ಕದ ಕಾವೇರಿ ನದಿಯಿಂದ ಕೆರೆಗಳಿಗೆ ನೀರು ತುಂಬಿಸಲಾಗುವುದು. ಈ ನೀರನ್ನು ಇಲ್ಲಿನ ರೈತರಿಗೆ ನೀಡಿ ನಂತರ ಡಾಬಸ್ ಪೇಟೆಯ ಕೈಗಾರಿಕಾ ವಲಯಕ್ಕೆ ನೀರು ಕೊಂಡೊಯ್ಯುವ ಯೋಜನೆ ಇದಾಗಿದೆ. ನಾನು ಈ ವಿಷಯವಾಗಿ ದನಿಯಾಗಿದ್ದೆ. ಅಂದಿನ ಸಚಿವ ಎಂ.ಬಿ.ಪಾಟೀಲ್ ಕರೆದಿದ್ದ ಸಭೆಯಲ್ಲಿ ಭಾಗವಹಿಸಿ ಈ ಬಗ್ಗೆ ಮನವರಿಕೆ ಮಾಡಿದ್ದೆ. ರೈತರಿಗೆ ವಾರ್ಷಿಕ 2 ಬಾರಿ ಬೆಳೆಗಳಿಗೆ ನೀರು ಬಿಡಲಾಗುವುದು ಎಂದು ಸಚಿವರು ಹೇಳಿದ್ದರು. ಇದಕ್ಕೆ ನಾನೇ ಸಾಕ್ಷಿ ಎಂದ ಅವರು, ಪೈಪ್ ಅಳವಡಿಸಲು ಯಾವುದೇ ಭೂ ಸ್ವಾಧೀನ ಮಾಡುವುದಿಲ್ಲ. ಕೃಷಿ ಚಟುವಟಿಕೆಗಳಿಗೆ ಧಕ್ಕೆಯಾಗುವುದಿಲ್ಲ. ಅಂತರ್ಜಲವೂ ವೃದ್ಧಿಯಾಗಲಿದ್ದು, ಈ ಬಗ್ಗೆ ಇಲಾಖೆಯವರು ಲಿಖಿತವಾಗಿ ಭರವಸೆ ನೀಡಲಿದ್ದಾರೆ ಎಂದರು.
ಕೆಐಎಡಿಬಿ ಮುಖ್ಯ ಅಧೀಕ್ಷಕ ವೀರಭದ್ರಯ್ಯ ಮಾತನಾಡಿ, ಈ ಯೋಜನೆಯಿಂದ 4 ಟಿಎಂಸಿ ನೀರು ಸಂಗ್ರಹಿಸುವ ಗುರಿ ಹೊಂದಲಾಗಿದೆ. ಇದಕ್ಕೆ 1500 ಎಕರೆ ಜಮೀನು ಬೇಕಾಗುತ್ತದೆ. ಅದಕ್ಕಾಗಿ ಕೆರೆಗಳನ್ನು ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಮದ್ದೂರು ಹಾಗೂ ಅಗರ ಕೆರೆ ಒಂದೂವರೆ ಸಾವಿರಕ್ಕೂ ಹೆಚ್ಚು ಎಕರೆ ವ್ಯಾಪ್ತಿ ಹೊಂದಿದ್ದು, ಇಲ್ಲಿ ಎರಡರಿಂದ ಎರಡೂವರೆ ಮೀಟರ್ ಹೂಳು ತೆಗೆದು ಬಂಡ್‌ಗಳನ್ನು ಎತ್ತರ ಮಾಡಲಾಗುವುದು ಎಂದರು.
ಇಲ್ಲಿನ ರೈತರಿಗೆ ವಾರ್ಷಿಕ ಎರಡು ಬೆಳೆಗಳಿಗೆ ನೀರು ನೀಡಲಾಗುವುದು. ಬಳಿಕ ಇಲ್ಲಿಂದ 2.5 ಟಿಎಂಸಿ ನೀರನ್ನು ಕೈಗಾರಿಕಾ ವಲಯಕ್ಕೆ ಬಳಸಿಕೊಳ್ಳಲಾಗುವುದು. ನೀರಿನ ಪೈಪ್‌ಲೈನ್ ಅನ್ನು ರಸ್ತೆ ಮೂಲಕವೇ ಕೊಂಡೊಯ್ಯಲಾಗುವುದು. ನೀರು ಸೋರಿಕೆಯಾಗದಂತೆ ವೈಜ್ಞಾನಿಕವಾಗಿ ಕೆಲಸ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಕೆರೆಗಳಿಗೆ ನೀರು ತುಂಬಿಸುವ ಕುರಿತು ಗಮನ ಸೆಳೆಯಲಾಗಿದೆ. ಕಣ್ಣೇಗಾಲ ಪಿಕಪ್ ಹಾಗೂ ಗುಂಡಾಲ್ ವ್ಯಾಪ್ತಿಯಲ್ಲಿ ಈಗಾಗಲೇ ಕಾಮಗಾರಿ ಆರಂಭಿಸಲಾಗಿದ್ದು, ಕೆಲವು ಕೆರೆಗಳ ಹೂಳು ತೆಗೆಯುವ ಕೆಲಸ ಪ್ರಗತಿಯಲ್ಲಿದೆ. ಈ ವಿಷಯವಾಗಿ ನಾನು ಮತ್ತೆ ರೈತರ ಜತೆ ಸಭೆ ನಡೆಸಲಿದ್ದೇನೆ ಎಂದು ಎಆರ್‌ಕೆ ತಿಳಿಸಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು, ಜಿಪಂ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್, ನೀರಾವರಿ ಇಲಾಖೆಯ ಎಸ್‌ಇ ರಘುಪತಿ ಮಾತನಾಡಿದರು. ಕೆಆರ್‌ಐಡಿಎಲ್‌ನ ಎಸ್‌ಇ ಸುನಿಲ್, ಆದರ್ಶ, ಅಲೋಕ್‌ಶೆಟ್ಟಿ, ನಾಡಗೌಡರಾದ ರಮೇಶ್, ಪುಟ್ಟಸುಬ್ಬಪ್ಪ, ಮುಖಂಡರಾದ ಮಾಂಬಳ್ಳಿ ನಂಜುಂಡಸ್ವಾಮಿ, ಕಂದಹಳ್ಳಿ ನಂಜುಂಡಸ್ವಾಮಿ, ಕಮರವಾಡಿ ರೇವಣ್ಣ, ಬಸವರಾಜು, ಮಾಂಬಳ್ಳಿ ಪರಶಿವಮೂರ್ತಿ, ಅಗರ ವೆಂಕಟೇಶ್, ಪ್ರಕಾಶ್, ಮುದ್ದನಾಯಕ ಅನೇಕರು ಇದ್ದರು.
.