ಹನೂರಿನ ಶ್ರೀ ಬೆಟ್ಟಳ್ಳಿ ಮಾರಮ್ಮನ ದೇಗುಲಕ್ಕೆ ದೀಪಾವಳಿ ಅಮಾವಾಸ್ಯೆ ಪ್ರಯುಕ್ತ ಆಗಮಿಸಿದ ಭಕ್ತರು ದೇೀವರ ದರ್ಶನ ಪಡೆದರು.  
ಚಾಮರಾಜನಗರ

ಬೆಟ್ಟಳ್ಳಿ ಮಾರಮ್ಮ ದೇಗುಲದಲ್ಲಿ ಅಮಾವಾಸ್ಯೆ ಪೂಜೆ

ನಿಂಬೆಹಣ್ಣಿನ ತುಪ್ಪದ ಆರತಿ ಸೇವೆ

ಹನೂರು: ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮ ದೇಗುಲ ಸೇರಿದಂತೆ ತಾಲೂಕಿನ ವಿವಿಧ ದೇಗುಲಗಳಲ್ಲಿ ಸೋಮವಾರ ದೀಪಾವಳಿ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ ನೆರವೇರಿಸಲಾಯಿತು.

ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮನಿಗೆ ಪನ್ನೀರು, ಎಳನೀರು, ಅರಿಶಿಣ, ಕುಂಕುಮ, ಜೇನುತುಪ್ಪ, ಹಾಲು, ಮೊಸರು ಹಾಗೂ ಗಂಧದ ಅಭಿಷೇಕವನ್ನು ನೆರವೇರಿಸಲಾಯಿತು. ವಿಗ್ರಹಕ್ಕೆ ವಿವಿಧ ಪುಷ್ಪಗಳಿಂದ ಸಿಂಗರಿಸಿ ದೀಪ, ಧೂಪದಾರತಿ ಸೇವೆಯೊಂದಿಗೆ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಬೆಳಗಿಸಲಾಯಿತು. ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಹರಕೆ ಹೊತ್ತ ಭಕ್ತರು ದೇಗುಲ ಮುಂಭಾಗ ಉಪ್ಪು ಸುರಿದು ನಮಿಸಿದರು. ಕೆಲ ಭಕ್ತರು ನಿಂಬೆಹಣ್ಣಿನ ತುಪ್ಪದ ಆರತಿ ಸೇವೆ ನೆರವೇರಿಸಿದರು.

ಹನೂರಿನ ಶ್ರೀ ಬೆಟ್ಟಳ್ಳಿ ಮಾರಮ್ಮ, ವೈಶಂಪಾಳ್ಯದ ಶ್ರೀ ಶಿವಾಲಂಕಾರೇಶ್ವರ, ಶಾಗ್ಯದ ಜಲಕಂಠೇಶ್ವರ, ಹುಲ್ಲೇಪುರದ ದಿಂಬಾದಳೇಶ್ವರ, ಮಂಗಲದ ಕೋಣನ ಮಾರಮ್ಮ, ಲೊಕ್ಕನಹಳ್ಳಿಯ ದೊಡ್ಡ ಸಂಪಿಗೇಶ್ವರ, ಆರ್.ಎಸ್.ದೊಡ್ಡಿ, ಕೌದಳ್ಳಿ ಹಾಗೂ ವಡಕೆಹಳ್ಳದ ಮಹದೇಶ್ವರ ದೇಗುಲ ಸೇರಿದಂತೆ ತಾಲೂಕಿನ ಇನ್ನಿತರ ದೇಗುಲಗಳಲ್ಲಿ ಅಮಾವಾಸ್ಯೆ ವಿಶೇಷ ಪೂಜೆ ನೆರವೇರಿಸಲಾಯಿತು.

ಎಲ್ಲ ದೇಗುಲಗಳಲ್ಲಿ ತಳಿರು, ತೋರಣ ಹಾಗೂ ವಿವಿಧ ಪುಷ್ಪಗಳಿಂದ ಸಿಂಗಾರ ಮಾಡಲಾಗಿತ್ತು. ಪ್ರಸಾದ ವಿನಿಯೋಗ ಮಾಡಲಾಯಿತು. ಭಕ್ತರು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.