ಗುಂಡ್ಲುಪೇಟೆ ತಾಲೂಕಿನ ದೇಪಾಪುರ ಗ್ರಾಮದ ಗುರುಮಲ್ಲೇಶ್ವರ ಮಠದಲ್ಲಿ ನಿರ್ಮಿಸಿದ ದಾಸೋಹಭವನವನ್ನು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರಸ್ವಾಮೀಜಿ ಉದ್ಘಾಟಿಸಿದರು. ಬಸವಣ್ಣಸ್ವಾಮೀಜಿ, ಡಿ.ಎಸ್.ಸಿದ್ದಪ್ಪ, ಟಿ.ಸಿ.ಬಸಪ್ಪದೇವರು, ಅಭಿಷೇಕ್ ಗುಡಿಮನೆ ಇದ್ದರು. 
ಚಾಮರಾಜನಗರ

ಪ್ರತಿಯೊಬ್ಬರಲ್ಲೂ ಸ್ನೇಹ ಸೌಹಾರ್ದ ಬೆಳೆಯಲಿ

May friendship and harmony grow among everyone.

ಗುಂಡ್ಲುಪೇಟೆ: ಮನಸ್ಸಿನೊಳಗಿನ ರಾಗ ದ್ವೇಷಗಳು ಹೋದರೆ ಸ್ನೇಹ ಸೌಹಾರ್ದ ಮೊಳಕೆಯೊಡೆಯುತ್ತದೆ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರಸ್ವಾಮೀಜಿ ಹೇಳಿದರು.

ತಾಲೂಕಿನ ದೇಪಾಪುರ ಗ್ರಾಮದ ಗುರುಮಲ್ಲೇಶ್ವರ ದಾಸೋಹ ಮಠದ ಆವರಣದಲ್ಲಿ ನಿರ್ಮಿಸಿರುವ ದಾಸೋಹ ಭವನವನ್ನು ಬುಧವಾರ ರಾತ್ರಿ ಉದ್ಘಾಟಿಸಿ ಮಾತನಾಡಿದರು.

ಗ್ರಾಮದಲ್ಲಿ 35 ವರ್ಷಗಳಿಂದ ಸಣ್ಣಪುಟ್ಟ ವೈಮನಸ್ಸಿನಿಂದ ಎರಡು ಗುಂಪುಗಳಾಗಿ ಇಲ್ಲಿಯವರೆಗೂ ಮುಂದುವರೆಯುತ್ತಾ ಬಂದಿತ್ತು. ಮಠದಲ್ಲಿ ದಾಸೋಹ ಭವನ ಉದ್ಘಾಟನಾ ಸಂದರ್ಭದಲ್ಲಿ ಗ್ರಾಮಸ್ಥರೆಲ್ಲ ಒಟ್ಟಾಗಿ ಸೇರಿ ಸಮಾಲೋಚಿಸಿ ಗ್ರಾಮದಲ್ಲಿ ಸಾಮರಸ್ಯದಿಂದ ಇರಬೇಕೆಂದುದನ್ನು ಮನಗಂಡು ವೈಮನಸ್ಸುಗಳನ್ನು ದೂರಮಾಡಿ ಒಂದಾದ ಪ್ರಯುಕ್ತ ಇಂಥಾ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಭೂಮಿಯಲ್ಲಿ ಬಿತ್ತನೆ ಮಾಡಿದ ಮೇಲೆ ಕಳೆಯನ್ನು ತೆಗೆಯುತ್ತ ಹೋದಂತೆ ಫಸಲು ಫಲವತ್ತಾಗಿ ಬರುತ್ತದೆ. ಹಾಗೆ ಮನಸ್ಸಿನ ರಾಗ, ದ್ವೇಷ, ಅಸೂಯೆಗಳನ್ನು ಮರೆತರೆ ಪ್ರೀತಿ, ಸ್ನೇಹ ಮತ್ತು ಸೌಹಾರ್ದತೆಗಳು ಉಂಟಾಗಿ ಗ್ರಾಮದಲ್ಲಿ ಶಾಂತಿ, ಸಮಾಧಾನ ನೆಲೆಸಲು ಸಾಧ್ಯವಾಗುತ್ತದೆ ಎಂದು ತಿಳಿಸಿ, ತಡವಾಗಿಯಾದರೂ ಒಗ್ಗೂಡಿದ ಗ್ರಾಮಸ್ಥರಿಗೆ ಶುಭ ಹಾರೈಸಿದರು.

ಇದಕ್ಕೂ ಮೊದಲು ಗ್ರಾಮಕ್ಕೆ ಆಗಮಿಸಿದ ಶ್ರೀಗಳನ್ನು ಮಂಗಳವಾದ್ಯಗಳು ಹಾಗೂ ಪೂರ್ಣಕುಂಬಗಳೊಂದಿಗೆ ಮೆರವಣಿಗೆ ಮೂಲಕ ಮಠಕ್ಕೆ ಕರೆತರಲಾಯಿತು.

ದೇಪಾಪುರ ಮಠಾಧ್ಯಕ್ಷರಾದ ಬಸವಣ್ಣಸ್ವಾಮೀಜಿ, ಮಲೆಮಹದೇಶ್ವರ ಬೆಟ್ಟದ ಧರ್ಮದರ್ಶಿ ಮಂಡಲಿಯ ಮಾಜಿ ಅಧ್ಯಕ್ಷ ಡಿ.ಎಸ್.ಸಿದ್ದಪ್ಪ, ಶರಣಸಾಹಿತ್ಯ ಪರಿಷತ್ ಅಧ್ಯಕ್ಷ ಟಿ.ಸಿ.ಬಸಪ್ಪದೇವರು, ಅಭಿಷೇಕ್ ಗುಡಿಮನೆ, ಭಾರತೀಯ ಕಿಸಾನ್ ಸಂಘದ ತಾಲೂಕು ಅಧ್ಯಕ್ಷ ಕೆ.ಎಲ್.ಮಹದೇವಸ್ವಾಮಿ, ಶಿಕ್ಷಕ ಸಿದ್ದಮಲ್ಲಪ್ಪ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ಭಕ್ತರು ಇದ್ದರು.