ಚಾಮರಾಜನಗರ

ಕಾಂಗ್ರೆಸ್ ಧೋರಣೆಗೆ ಖಂಡನೆ

ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಕಿಡಿ

ಚಾಮರಾಜನಗರ: ಕಾಂಗ್ರೆಸ್ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆಯ ಮೇಲೆ ಗೂಬೆ ಕೂರಿಸುವುದು, ಪ್ರಜಾಪ್ರಭುತ್ವದ ವಿರೋಧಿ ಮತ್ತು ಮತದಾರರ ದಿಕ್ಕು ತಪ್ಪಿಸುವ ಧೋರಣೆಯಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಹೇಳಿದರು.

ಕಾಂಗ್ರೆಸ್‌ಗೆ ಚುನಾವಣೆ ಆಯೋಗದ ವಿರುದ್ಧ ತಕರಾರು ಇದ್ದರೆ ಪ್ರಶ್ನೆ ಕೇಳಲಿ ಬದಲಾಗಿ ಬಿಜೆಪಿಯನ್ನು ಎಳೆದು ತರುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಬುಧವಾರ ಸುದ್ದಿಗೋಷ್ಟಿ ನಡೆಸಿ ಬಿಜೆಪಿ ಮೇಲೆ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಾಂಗ್ರೆಸ್‌ನ ಕೇಂದ್ರದ ನಾಯಕರ ಸೂಚನೆ ಮೇರೆಗೆ ಸಚಿವ ಸಿ.ಪುಟ್ಟರಂಗಶೆಟ್ಟಿ ಸುದ್ದಿಗೋಷ್ಠಿ ಮಾಡಿ ಜನರಲ್ಲಿ ಗೊಂದಲ ಮೂಡಿಸುವ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ 97 ಕೋಟಿ ನೊಂದಾಯಿತ ಮತದಾರರು ಇದ್ದಾರೆ. ಇವರಲ್ಲಿ 13 ಕೋಟಿ ಜನರನ್ನು ಅನರ್ಹರನ್ನಾಗಿ ಮಾಡಲಾಗಿದೆ ಎನ್ನುತ್ತಿದ್ದಾರೆ. ಮೇಲ್ನೋಟಕ್ಕೆ ಇದು ದೊಡ್ಡ ಸಮಸ್ಯೆ ಎಂದು ಕಾಣುತ್ತಿದೆ. ಇದರ ಮೂಲಕ ಜನರಲ್ಲಿ ಗೊಂದಲ ನಿರ್ಮಾಣ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಚಾಮರಾಜನಗರ ತಾಲೂಕಿನ ಸರಗೂರು ಮೋಳೆಯಲ್ಲಿ 40 ಜೀವಂತ ಮತದಾರರನ್ನು ಸತ್ತವರ ಪಟ್ಟಿಗೆ ಸೇರಿಸಲಾಗಿತ್ತು. ಬಳಿಕ ಅದನ್ನು ಸರಿಪಡಿಸಿರುವುದು ನೈಜ ಪ್ರಕ್ರಿಯೆಯಾಗಿದೆ. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ 25 ಸಾವಿರಕ್ಕೂ ಹೆಚ್ಚು ಮತಗಳನ್ನು ಡಿಲಿಟ್ ಮಾಡಲಾಗಿದೆ ಎಂದು ಕಾಂಗ್ರೆಸ್ ಹೇಳಿದೆ. ಸಂವಿಧಾನಬದ್ಧವಾಗಿ ಎಸ್‌ಐಆರ್ ನಡೆಯುತ್ತಿದ್ದು, ಅಧಿಕೃತ ಮತದಾರರ ಪಟ್ಟಿಯಿಂದ ಹೊರಗುಳಿಯುತ್ತಿಲ್ಲ, ಅನಧಿಕೃತ ಮತದಾರರ ಪಟ್ಟಿಯಲ್ಲಿ ಇರುವುದಿಲ್ಲ ಎಂದು ಹೇಳಿದರು.

ಾರಂ-7 ಅನ್ನು ಆಕ್ಷೇಪಣೆಗಾಗಿ ಸಲ್ಲಿಸಲಾಗುತ್ತದೆ. ಈ ಅರ್ಜಿಗಳು ನೂರು ಅಥವಾ ಸಾವಿರ ಸಲ್ಲಿಕೆಯಾಗಲಿ. ಇದನ್ನು ಬಿಟ್ಟು ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ಮತದಾರರ ಹೆಸರು ಹೇಳಿ ಅವರ ಹೆಸರನ್ನು ಡಿಲೀಟ್ ಮಾಡಲಾಗಿದೆ ಎಂದು ಆರೋಪ ಮಾಡಬಾರದು. ಅಲ್ಪಸಂಖ್ಯಾತರನ್ನು ಒಲೈಕೆ ಮಾಡುತ್ತಿರುವ ಕಾಂಗ್ರೆಸ್ ದಲಿತರು, ಹಿಂದುಳಿದ ವರ್ಗಗಳನ್ನು ನಾಮಕಾವಸ್ಥೆಗೆ ಮಾತಿನಲ್ಲಿ ಜೊತೆ ಸೇರಿಸಿಕೊಳ್ಳುತ್ತಿದೆ ಎಂದು ದೂರಿದರು.

ಎಸ್‌ಐಆರ್ ಪಾರದರ್ಶಕ ಮತ್ತು ಪ್ರಜಾಸತ್ತಾತ್ಮಕವಾಗಿ ಇದೆ. ಪ್ರತಿ 20 ವರ್ಷಗಳಿಗೆ ಒಮ್ಮೆ ನಡೆಯುವ ಎಸ್‌ಐಆರ್ ಬಿಜೆಪಿ ಅಧಿಕಾರಕ್ಕೆ ಬರುವ ಮೊದಲೂ ನಡೆದಿತ್ತು. ಬಿಜೆಪಿ ಚುನಾವಣೆಯ ಲಾಭಕ್ಕಾಗಿ ಇದನ್ನು ಮಾಡುತ್ತಿದೆ ಎನ್ನುವುದಾದರೆ ಕಳೆದ ಚುನಾವಣೆಯಲ್ಲಿ ರಾಜ್ಯದಲ್ಲಿ ಪಕ್ಷ ಸೋತಿತು. ಕೇರಳದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು, ತಮಿಳುನಾಡಿನಲ್ಲಿ ಟಿವಿಕೆ ಜಯ ಗಳಿಸಿತು ಎಂದು ತಿಳಿಸಿದರು.

ಕಾಂಗ್ರೆಸ್ ಎಸ್‌ಐಆರ್ ವಿರುದ್ಧ ಅನಗತ್ಯವಾಗಿ ಬೀದಿಗೆ ಇಳಿದು ಪ್ರತಿಭಟನೆ ಮಾಡಿ ಸಮಯ ವ್ಯರ್ಥ ಮಾಡಿಕೊಳ್ಳಬಾರದು. ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ. 2 ತಿಂಗಳಲ್ಲಿ 19 ದಲಿತರ ಕಗ್ಗೊಲೆಯಾಗಿದೆ. ಇದರ ಬಗ್ಗೆ ಗೃಹ ಸಚಿವರು ತಲೆ ಕೆಡಿಸಿಕೊಂಡಿಲ್ಲ ಎಂದರು.

ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್‌ಕುಮಾರ್ ಮಾತನಾಡಿ, ಎಸ್‌ಐಆರ್ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುವವರು ರಾಜ್ಯ ಸರ್ಕಾರದ ಅಧಿಕಾರಿಗಳೇ ಆಗಿದ್ದಾರೆ. ಹೀಗಿದ್ದ ಮೇಲೆ ಅವರ ಅಧಿಕಾರಗಳ ಮೇಲೆ ರಾಜ್ಯ ಸರ್ಕಾರಕ್ಕೆ ನಂಬಿಕೆ ಇಲ್ಲದಂತಾಗಿದೆ. ಜಿಲ್ಲೆಯಲ್ಲಿ 87 ಸಾವಿರ ಮತಗಳು ಡಿಲಿಟ್ ಆಗಿವೆ. ಇವರನ್ನು ವಾಪಸ್ ಸೇರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿದ್ದಾರೆ. ಹಾಗಿದ್ದರೆ 87 ಸಾವಿರ ಮತದಾರರಲ್ಲಿ ಸತ್ತವರು, ಎರಡು ಕಡೆ ಹೆಸರು ಇರುವವರನ್ನು ಸೇರ್ಪಡೆ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಎಸ್‌ಐಆರ್ ವ್ಯವಸ್ಥಿತವಾಗಿ ಸರಿಯಾದ ದಾರಿಯಲ್ಲಿ ನಡೆಯುತ್ತಿದೆ. ಕಾಂಗ್ರೆಸ್‌ನವರು ಡೂಪ್ಲಿಕೆಟ್ ಮತಗಳು, 2 ಕಡೆ ಮತ ಇರುವವರು, ಸತ್ತವರ ಹೆಸರಿನಲ್ಲಿ 2 ಕಡೆ ಮತಗಳನ್ನು ಹಾಕಿಸಿಕೊಳ್ಳುತ್ತಿದ್ದರು. ಇದು ಅವರಿಗೆ ಅಭ್ಯಾಸವಾಗಿ ಹೋಗಿದೆ ಎಂದರು.

ಗೋಷ್ಠಿಯಲ್ಲಿ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಕಾಡಾ ಮಾಜಿ ಅಧ್ಯಕ್ಷ ಜಿ.ನಿಜಗುಣರಾಜು, ಒಬಿಸಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ನೂರೊಂದುಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್, ಜಿಲ್ಲಾ ವಕ್ತಾರ ಮನೋಜ್ ಪಟೇಲ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಿ.ಬಿ.ಸೂರ್ಯಕುಮಾರ್ ಇದ್ದರು.