ಕೊಳ್ಳೇಗಾಲ ಪಟ್ಟಣದ ಜೆಎಸ್‌ಎಸ್ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಜೆಎಸ್’ಬಿ ಪ್ರತಿಷ್ಠಾನದ ವತಿಯಿಂದ ಕನ್ನಡ ಮಾ ಸಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ತ್ರಿಪುರಾಂತಕ, ಮಂಜುನಾಥ್, ಶಶಿಕುಮಾರ್, ಎನ್.ಮಹದೇವಸ್ವಾಮಿ ಇತರರು ಇದ್ದರು.  
ಚಾಮರಾಜನಗರ

ಕನ್ನಡ ಕಟ್ಟುವ ಕೆಲಸ ನಿರಂತರವಾಗಿ ಸಾಗಲಿ

ಸಾಹಿತಿ ತ್ರಿಪುರಾಂತಕ ಸಲಹೆ

ಕೊಳ್ಳೇಗಾಲ: ಕನ್ನಡದ ಮನಸುಗಳಿಂದ ಕನ್ನಡವನ್ನು ಕಟ್ಟುವ ಕೆಲಸವಾಗಬೇಕು ಎಂದು ಸಾಹಿತಿ ತ್ರಿಪುರಾಂತಕ ಸಲಹೆ ನೀಡಿದರು.

ಪಟ್ಟಣದ ಜೆಎಸ್‌ಎಸ್ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಜೆಎಸ್‌ಬಿ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಕನ್ನಡ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಿರಿ-ಸಂಪತ್ತು ಸಂಮೃದ್ಧವಾಗಿರುವ ಕನ್ನಡ ನಾಡು, ನುಡಿ, ಸಂಸ್ಕೃತಿಗೆ ತನ್ನದೇ ಆದ ಪರಂಪರೆ, ಇತಿಹಾಸವಿದ್ದು, ನಾಡಿನ ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು. ಕನ್ನಡ ರಾಜ್ಯೋತ್ಸವ ನಿತ್ಯೋತ್ಸವವಾಗಬೇಕು. ಪ್ರಾದೇಶಿಕ ಭಾಷೆಗಳ ಮೇಲೆ ಜಾಗತೀಕರಣದ ಪ್ರಭಾವ ಬೀರುತ್ತಿದ್ದು, ಕನ್ನಡಿಗರು ಉದ್ಯೋಗವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಹೇಳಿದರು.

ನಾಡು-ನುಡಿಯ ಬೆಳವಣಿಗೆಗೆ ಸಾಮಾನ್ಯ ಜನರು ಕೈ ಜೋಡಿಸಬೇಕು. ಕನ್ನಡ ನಾಡಿನ ಸಮಗ್ರ ಅಭಿವೃದ್ಧಿಗೆ ಎಲ್ಲ ವರ್ಗದವರು ಶ್ರಮಿಸಬೇಕು. ಮಕ್ಕಳು ಶಾಲಾ ಹಂತದಲ್ಲೇ ನಾಡು-ನುಡಿ-ನೆಲ-ಜಲದ ಬಗ್ಗೆ ಅಭಿಮಾನ ಬೆಳಿಸಿಕೊಳ್ಳಬೇಕು. ಕನ್ನಡ ಸಾಹಿತ್ಯವನ್ನು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಗಡಿ ಭಾಗವಾಗಿದ್ದರೂ ಕನ್ನಡವನ್ನು ಬೆಳೆಸಿ ಶ್ರೀಮಂತಗೊಳಿಸುವ ಜನರು ಚಾಮರಾಜನಗರ ಜಿಲ್ಲೆಯಲ್ಲಿದ್ದಾರೆ. ನಾವೆಲ್ಲರೂ ಸಹಜವಾಗಿ, ಸರಳವಾಗಿ ಬದುಕಿ, ನಮ್ಮ ಆಚಾರ ವಿಚಾರಗಳನ್ನು ಗೌರವಿಸಿ, ಆಹಾರ ಪದ್ಧತಿಯನ್ನು ಉಳಿಸಿಕೊಂಡು ನಾಡಿನ ಕೀರ್ತಿಯನ್ನು ಬೆಳೆಸಬೇಕಿದೆ ಎಂದರು.

ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಕಾರ್ಯದರ್ಶಿ ಮಂಜುನಾಥ್ ಮಾತನಾಡಿ, ಅನೇಕರ ದೂರದೃಷ್ಟಿಯ ಫಲವಾಗಿ, ಕನ್ನಡ ನಾಡು ಉದಯವಾಯಿತು, ನಾಡು, ನುಡಿ, ಸಂಸ್ಕೃತಿಯ ರಕ್ಷಣೆಗೆ ಎಲ್ಲೇ ಇದ್ದರೂ ನಾವೆಲ್ಲಾ ಶ್ರಮಿಸಬೇಕು ಎಂದು ಹೇಳಿದರು.

ಜೆಎಸ್‌ಬಿ ಪ್ರತಿಷ್ಠಾನದ ಶಶಿಕುಮಾರ್ ಮಾತನಾಡಿ, ಈಗಾಗಲೇ ಜಿಲ್ಲಾದ್ಯಂತ ಎಲ್ಲ ಶಾಲೆ-ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಪ್ರತಿಯೊಬ್ಬರಲ್ಲೂ ಕನ್ನಡದ ಬಗ್ಗೆ ಅಭಿಮಾನ ಬೆಳೆಸುವ ಕಾರ್ಯವನ್ನು ಪ್ರತಿಷ್ಠಾನವು ಮಾಡುತ್ತಿದ್ದು, ಮುಂದಿನ ದಿನಗಳಲ್ಲೂ ನಿರಂತರವಾಗಿ ನಾಡು-ನುಡಿಯ ಸೇವೆ ಮುಂದುವರಿಯಲಿದೆ ಎಂದು ತಿಳಿಸಿದರು.

ಬಳಿಕ ರಸ ಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪುಸ್ತಕಗಳ ಬಹುಮಾನ ನೀಡಲಾಯಿತು ಹಾಗೂ ಕನ್ನಡ ಓದನ್ನು ಉತ್ತೇಜಿಸಲು ಕಾಲೇಜಿನ ಎಲ್ಲ ವಿದ್ಯಾರ್ಥಿಗಳಿಗೆ ಕನ್ನಡ ಕಿರುಪುಸ್ತಕ ನೀಡಲಾಯಿತು. ಜೆಎಸ್‌ಎಸ್ ಪಿಯು ಕಾಲೇಜಿನ ಪ್ರಾಂಶುಪಾಲ ಎನ್.ಮಹದೇವಸ್ವಾಮಿ ಇತರರು ಇದ್ದರು.