ಚಾಮರಾಜನಗರ

ಓವರ್ ಲೋಡ್ ಟಿಪ್ಪರ್ ಹಾವಳಿ

ಕಡಿವಾಣ ಹಾಕುವ ಆರ್‌ಟಿಒದಲ್ಲಿ ಇನ್ಸ್‌ಪೆಕ್ಟರ್‌ಗಳ ಕೊರತೆ

ಚಾಮರಾಜನಗರ: ಗಣಿ ಉದ್ಯಮ ಪ್ರಧಾನವಾಗಿರುವ ಗಡಿಜಿಲ್ಲೆ ಚಾಮರಾಜನಗರದಲ್ಲಿ ನಿಯಮ ಮೀರಿ ಅಧಿಕ ಭಾರ ಹೊತ್ತು ಸಾಗುವ ಟಿಪ್ಪರ್‌ಗಳ ಹಾವಳಿ ಹೆಚ್ಚಾಗಿದೆ.

ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ ತಾಲೂಕುಗಳಲ್ಲಿ ಓವರ್‌ಲೋಡ್ ಟಿಪ್ಪರ್‌ಗಳ ಸಂಚಾರ ಯಮಸ್ವರೂಪದಲ್ಲಿ ಸಾಗುತ್ತಿದೆ. ಸರ್ಕಾರದ ನಿಯಮಾನುಸರ ನಿಗದಿ ಮಾಡಿರುವ ತೂಕಕ್ಕಿಂತ ಹೆಚ್ಚು ಭಾರದ ಸರಕನ್ನು ಸಾಗಾಣೆ ಮಾಡಲಾಗುತ್ತಿದ್ದು, ನಿಯಮ ಉಲ್ಲಂಘನೆಯನ್ನು ಗಣಿ ಮತ್ತು ಕ್ರಷರ್‌ಗಳ ಟಿಪ್ಪರ್‌ಗಳೇ ಹೆಚ್ಚಾಗಿ ಮಾಡುತ್ತಿವೆ. ಗಣಿ ಉದ್ಯಮದಲ್ಲಿ ಹೆಸರುವಾಸಿಯಾದ ಮತ್ತು ಸಮಾಜಮುಖಿ ಕಾರ್ಯ ಮಾಡುತ್ತಿರುವ ಅನೇಕರು ಇದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ಗಣಿಗಾರಿಕೆ ಮತ್ತು ಕಲ್ಲುಗಳ ಸಾಗಾಣೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಆದರೆ, ಇನ್ನು ಕೆಲವರು ಪರ್ಮಿಟ್ ಇಲ್ಲದೆ, ಅಧಿಕ ಭಾರದ ಟಿಪ್ಪರ್‌ಗಳನ್ನು ರಸ್ತೆಗಿಳಿಸುತ್ತಿದ್ದಾರೆ.

ಜಿಲ್ಲೆಯ ಮೂಲಕ ತಮಿಳುನಾಡು, ಕೇರಳ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಗಳಿವೆ. ಟಿಪ್ಪರ್‌ಗಳ ಅತಿ ವೇಗ ಮತ್ತು ಅಧಿಕ ಭಾರದ ಸಂಚಾರ ಹೆದ್ದಾರಿ ಮಾತ್ರವಲ್ಲದೆ ಸ್ಥಳೀಯ ರಸ್ತೆಗಳಲ್ಲೂ ಜೀವ ಭಯವನ್ನು ಸೃಷ್ಟಿ ಮಾಡುತ್ತಿದೆ. ಜನವಸತಿ ಪ್ರದೇಶದ ರಸ್ತೆಗಳಲ್ಲಿ ವೇಗವಾಗಿ ಟಿಪ್ಪರ್‌ಗಳ ಸಾಗುವಾಗ ಈಗಾಗಲೇ ಹಲವಾರು ಅಪಘಾತಗಳು ಸಂಭವಿಸಿರುವ ಉದಾಹರಣೆಗಳಿವೆ. ಗುಂಡ್ಲುಪೇಟೆಯಲ್ಲಿ ಶಾಲಾ ಮಕ್ಕಳು ರಸ್ತೆ ದಾಟುವುದಕ್ಕೂ ಭಯ ಪಡುವಷ್ಟು ಟಿಪ್ಪರ್‌ಗಳು ರಣವೇಗದ ಸಂಚಾರ ಮಾಡುತ್ತಿದ್ದವು. ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ವಾಹನಕ್ಕೆ ಟಿಪ್ಪರ್ ಡಿಕ್ಕಿ ಹೊಡೆದು ಜೀವಾಪಾಯ ತಂದಿತ್ತು. ಎಚ್ಚೆತ್ತ ಜಿಲ್ಲಾಡಳಿತ ಶಾಲಾ ಸಮಯದಲ್ಲಿ ಟಿಪ್ಪರ್‌ಗಳು ರಸ್ತೆಗಿಳಿಯ ಕೂಡದು ಎಂದು ಆದೇಶವನ್ನೇ ಮಾಡಿತ್ತು. ಇದು ಜಿಲ್ಲೆಯಲ್ಲಿರುವ ಟಿಪ್ಪರ್‌ಗಳ ಅಬ್ಬರ ಎಷ್ಟಿದೆ ಎನ್ನುವುದರ ನಿದರ್ಶವಾಗಿದೆ.

ಕಡಿವಾಣಕ್ಕೆ ಇನ್ಸ್‌ಪೆಕ್ಟರ್‌ಗಳ ಕೊರತೆ: ಜಿಲ್ಲೆಯ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯಲ್ಲಿ ಒಟ್ಟು 6 ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳಿವೆ. ಆದರೆ ಇವರಲ್ಲಿ ಒಬ್ಬರು ಬೆಂಗಳೂರಿನ ನೆಲಮಂಗಲದ ಪ್ರಾದೇಶಿಕ ಸಾರಿಗೆ ಕಚೇರಿಗೆ ನಿಯೋಜನೆಗೊಂಡಿದ್ದಾರೆ. ಒಬ್ಬರು ಹೊಸದಾಗಿ ನೇಮಕಗೊಂಡಿದ್ದು, ಇಲಾಖಾ ತರಬೇತಿಗೆ ನಿಯೋಜಿಸಲಾಗಿದೆ. ಒಬ್ಬರು ಕಚೇರಿಗೆ ಬರುವ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಹಾಗೂ ಅಪಘಾತ ಪರಿಶೀಲನಾ ವರದಿಯನ್ನು ನೀಡುವ ಮತ್ತು ತಪಾಸಣಾ ಕಾರ್ಯವನ್ನು ಮಾಡುತ್ತಿದ್ದಾರೆ. ಹೀಗಾಗಿ ಉಳಿದ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದ್ದು, ಅಧಿಕ ಭಾರ ಹೊತ್ತು ಸಾಗುವ ಟಿಪ್ಪರ್‌ಗಳಿಗೆ ಕಡಿವಾಣ ಹಾಕಲು ಸವಾಲು ಎದುರಾಗಿದೆ.

116 ಪ್ರಕರಣಗಳ ದಾಖಲು: ಅಧಿಕ ಭಾರ ಹೊತ್ತು ಸಾಗುವ ಟಿಪ್ಪರ್‌ಗಳು ಮತ್ತು ಲಾರಿಗಳನ್ನು ತಪಾಸಣೆ ಮಾಡಿ ಕಾನೂನಿನ ಉಲ್ಲಂಘನೆ ಕಂಡುಬಂದಲ್ಲಿ ದಂಡ ವಿಧಿಸುವುದು ಮತ್ತು ವಾಹನಗಳ ಮುಟ್ಟುಗೋಲು ಹಾಕಿಕೊಳ್ಳುವ ಕಾರ್ಯ ನಡೆಯುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಪ್ರಗತಿ ಪರಿಶೀಲನಾ ಸಭೆಗೆ ಜಿಲ್ಲಾ ಪ್ರಾದೇಶಿಕ ಸಾರಿಗೆ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, 2025-26ನೇ ಸಾಲಿನಲ್ಲಿ 116 ಪ್ರಕರಣಗಳನ್ನು ದಾಖಲಿಸಿ 29,28,500 ರೂ. ದಂಡ ವಸೂಲಿ ಮಾಡಲಾಗಿದೆ. 2026ರ ಏಪ್ರಿಲ್‌ನಿಂದ ಜುಲೈವರೆಗೆ 55 ವಾಹನಗಳ ಮೇಲೆ ಪ್ರಕರಣ ದಾಖಲಿಸಿ 11,17,500 ರೂ. ದಂಡ ಸಂಗ್ರಹಿಸಲಾಗಿದೆ. ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹ: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ಗ್ರಾಮೀಣ ರಸ್ತೆಗಳಲ್ಲಿ ಅಧಿಕ ಭಾರ ಸಾಗಿಸುವ ವಾಹನಗಳ ತಪಾಸಣೆ ಮಾಡಲು ಪೊಲೀಸ್ ಇಲಾಖೆ, ಲೋಕೋಪಯೋಗಿ ಇಲಾಖೆ, ಕಂದಾಯ ಇಲಾಖೆ, ಆರ್‌ಟಿಒ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯನ್ನೊಳಗೊಂಡ ತಂಡ ರಚಿಸಿ ತಪಾಸಣೆ ಮಾಡಲು ಜಿಲ್ಲಾಧಿಕಾರಿ ಶ್ರೀರೂಪಾ ಅವರಿಗೆ ನಿರ್ದೇಶನ ನೀಡಲು ಆರ್‌ಟಿಒದಿಂದ ಪತ್ರ ಬರೆದು ಕೋರಲಾಗಿತ್ತು. ಇದೀಗ ಈ ವಿಶೇಷ ತಂಡವೂ ನಿಯೋಜನೆಗೊಂಡಿದ್ದು, ತಪಾಸಣೆ ನಡೆಯುತ್ತಿದೆ. ಆದರೂ ಕೂಡ ಅಧಿಕ ಭಾರದ ಟಿಪ್ಪರ್‌ಗಳ ಸಂಚಾರ ಹೆಚ್ಚಾಗಿಯೇ ಇದೆ. ಓವರ್‌ಲೋಡ್ ಟಿಪ್ಪರ್‌ಗಳ ಹಾವಳಿ ನಿಯಂತ್ರಣಕ್ಕೆ ರೈತ ಸಂಘಟನೆಗಳ ಮುಖಂಡರು ಪ್ರತಿಭಟನೆಗಳಲ್ಲಿ ಒತ್ತಾಯಿಸುತ್ತಲೇ ಬಂದಿದ್ದಾರೆ. ಹಳ್ಳಿಗಳಲ್ಲಿ ರಸ್ತೆಗಳು ಹಾಳಾಗಿರುವ ಕುರಿತು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಟಿಪ್ಪರ್‌ಗಳ ವೇಗದ ಸಂಚಾರದ ಧೂಳು ಬೆಳೆಗಳನ್ನು ಹಾಳು ಮಾಡುತ್ತಿರುವುದಕ್ಕೆ ರೈತರು ಅಸಮಾಧಾನಗೊಂಡಿದ್ದಾರೆ.

ಜಿಲ್ಲೆಯಲ್ಲಿ ಅಧಿಕ ಭಾರದ ಟಿಪ್ಪರ್‌ಗಳ ಸಂಚಾರಕ್ಕೆ ಕಡಿವಾಣ ಹಾಕಲು ನಿರಂತರವಾಗಿ ತಪಾಸಣೆ ಮಾಡಲಾಗುತ್ತಿದೆ. ಓವರ್‌ಲೋಡ್ ಟಿಪ್ಪರ್‌ಗಳ ಮುಟ್ಟಗೋಲು, ದಂಡ ವಿಧಿಸಲಾಗುತ್ತಿದೆ. ಆರ್‌ಟಿಒದಲ್ಲಿ ಇನ್ಸ್‌ಪೆಕ್ಟರ್‌ಗಳ ಕೊರತೆ ಇದ್ದು, ಇದರ ನಡುವೆಯೂ ನಿಯಮ ಉಲ್ಲಂಘನೆ ವಿರುದ್ಧ ಕ್ರಮವಹಿಸಲಾಗುತ್ತಿದೆ.

ಗಾಯತ್ರಿ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಚಾಮರಾಜನಗರ