ಚಾಮರಾಜನಗರದ ರೈಲು ನಿಲ್ದಾಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶ್ರೀರೂಪಾ ದೀಪ ಬೆಳಗಿಸಿ, ಪುನರಾಭಿವೃದ್ಧಿಯಾಗಿರುವ ಚಾಮರಾಜನಗರ ಅಮೃತ ನಿಲ್ದಾಣದ ನಾಮಫಲಕ ಅನಾವರಣಗೊಳಿಸಿದರು. 
ಚಾಮರಾಜನಗರ

ಅಮೃತ ನಿಲ್ದಾಣದಿಂದ ಪ್ರವಾಸೋದ್ಯಮ ಅಭಿವೃದ್ಧಿ

ಜಿಲ್ಲಾಧಿಕಾರಿ ಶ್ರೀರೂಪಾ ಅಭಿಮತ

ಚಾಮರಾಜನಗರ: ಅಮೃತ್ ಭಾರತ್ ರೈಲು ನಿಲ್ದಾಣ ಯೋಜನೆಯಡಿ ಅಭಿವೃದ್ಧಿ ಮಾಡಿರುವ ಚಾಮರಾಜನಗರ ಅಮೃತ ನಿಲ್ದಾಣವನ್ನು ವರ್ಚುವಲ್ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ಉದ್ಘಾಟಿಸಿದರು.

ಕರ್ನಾಟಕದಲ್ಲಿ ರೈಲ್ವೆ ಸಂಪರ್ಕ ವ್ಯವಸ್ಥೆ ಮತ್ತು ಪ್ರಯಾಣಿಕರ ಸೌಲಭ್ಯಗಳನ್ನು ಮತ್ತಷ್ಟು ಸುಧಾರಿಸುವ ಮಹತ್ವದ ಉಪಕ್ರಮವಾಗಿ ಬೆಂಗಳೂರಿನ ಐಐಎಂ ಸಭಾಂಗಣದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರು-ಮಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರುವ ಜತೆಗೆ ವಿವಿಧ ರೈಲ್ವೆ ಯೋಜನೆಗಳನ್ನು ರಿಮೋಟ್ ಬಟನ್ ಒತ್ತುವ ಮೂಲಕ ರಾಷ್ಟ್ರಕ್ಕೆ ಸಮರ್ಪಿಸಿದರು.

ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಕರ್ನಾಟಕದ ನಾಲ್ಕು ಪ್ರಮುಖ ರೈಲು ನಿಲ್ದಾಣಗಳಾದ ಚಾಮರಾಜನಗರ, ಸಕಲೇಶಪುರ, ಚಿಕ್ಕಮಗಳೂರು ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿಗಳು ಹಾಗೂ ಸಕಲೇಶಪುರ-ಸುಬ್ರಹ್ಮಣ್ಯ ಮಾರ್ಗದ ವಿದ್ಯುದ್ದೀಕರಣ ಕಾಮಗಾರಿಗಳು ಸೇರಿವೆ.

ಕರ್ನಾಟಕದ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಮಹತ್ವದ ಮೈಲಿಗಲ್ಲಾಗಿರುವ ಈ ಯೋಜನೆಗಳಿಂದ ಪ್ರಯಾಣಿಕರಿಗೆ ಆಧುನಿಕ ಸೌಲಭ್ಯಗಳು, ರೈಲು ಕಾರ್ಯಾಚರಣೆಯ ದಕ್ಷತೆ ಮತ್ತು ರೈಲ್ವೆ ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಲಿದೆ. ಸುರಕ್ಷಿತ, ದಕ್ಷ, ಆಧುನಿಕ ಹಾಗೂ ಪ್ರಯಾಣಿಕ ಸ್ನೇಹಿ ರೈಲ್ವೆ ಸೇವೆಗಳನ್ನು ಒದಗಿಸುವ ಭಾರತೀಯ ರೈಲ್ವೆಯ ನಿರಂತರ ಬದ್ಧತೆಯನ್ನು ಈ ಕಾರ್ಯಕ್ರಮಗಳು ಪ್ರತಿಬಿಂಬಿಸಲಿವೆ.

ನಗರದ ರೈಲು ನಿಲ್ದಾಣದಲ್ಲಿ ಆಯೋಜಿಸಿದ್ದ ಸ್ಥಳೀಯ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಶ್ರೀರೂಪಾ ದೀಪ ಬೆಳಗಿಸಿ, ಪುನರಾಭಿವೃದ್ಧಿಯಾಗಿರುವ ಚಾಮರಾಜನಗರ ಅಮೃತ ನಿಲ್ದಾಣದ ನಾಮಫಲಕ ಅನಾವರಣ ಮಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶ್ರೀರೂಪಾ ಮಾತನಾಡಿ, ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಚಾಮರಾಜನಗರ ಅಮೃತ ನಿಲ್ದಾಣ ಉದ್ಘಾಟನೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಜಿಲ್ಲೆಯ ಆರ್ಥಿಕತೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಉತ್ತೇಜನವಾಗಲಿದೆ. ಜಿಲ್ಲೆಯ ಧಾರ್ಮಿಕ ಕೇಂದ್ರಗಳು, ಪ್ರವಾಸಿ ತಾಣಗಳು ಹಾಗೂ ವನ್ಯಜೀವಿ ಅಭಯಾರಣ್ಯಗಳನ್ನು ಜನರು ವೀಕ್ಷಿಸಲು ಜಿಲ್ಲೆಗೆ ಉತ್ತಮ ರೈಲು ಸಂಪರ್ಕ ವ್ಯವಸ್ಥೆ ಅಗತ್ಯವಾಗಿದೆ. ಸ್ಥಳೀಯವಾಗಿಯೂ ಉದ್ಯೋಗ ಸೃಷ್ಟಿಯಾಗಲಿದೆ. ಜಿಲ್ಲಾಡಳಿತವು ರೈಲ್ವೆ ಇಲಾಖೆಗೆ ಅಗತ್ಯ ಸಹಕಾರ ನೀಡಲಿದೆ ಎಂದರು.

ಮೈಸೂರು ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಶಿರೀಶ್ ಸದಾಶಿವ ಕಾಂಬ್ಳೆ ಮಾತನಾಡಿ, ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಯ ಪಯಣದಲ್ಲಿ ಅಮೃತ ನಿಲ್ದಾಣ ಯೋಜನೆಯು ಐತಿಹಾಸಿಕ ಮೈಲಿಗಲ್ಲಾಗಿದೆ. ಪ್ರಯಾಣಿಕರಿಗೆ ಸುರಕ್ಷಿತ ತಂಗುದಾಣ, ಫ್ಲಾಟ್‌ಫಾರ್ಮ್ ವಿಸ್ತರಣೆ, ಉತ್ತಮ ವಿನ್ಯಾಸದ ಪ್ರವೇಶದ್ವಾರ, ಸಿಸಿ ಟಿವಿ ಅಳವಡಿಕೆ ಹಾಗೂ ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಈ ರೈಲು ನಿಲ್ದಾಣದಲ್ಲಿ ಅಭಿವೃದ್ದಿಪಡಿಸಲಾಗಿದೆ ಎಂದು ತಿಳಿಸಿದರು. ಆರಂಭದಲ್ಲಿ ನಗರದ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ನಗರಸಭೆ ಪೌರಾಯುಕ್ತ ಪರಶುರಾಮ್ ಛಲವಾದಿ, ರೈಲ್ವೆ ಇಲಾಖೆ ಡಿಯುಆರ್‌ಸಿಸಿ ವಿ. ಪ್ರಭಾಕರ್ ಸೇರಿದಂತೆ ರೈಲ್ವೆ ಇಲಾಖೆಯ ಅಧಿಕಾರಿಗಳು ಇದ್ದರು.