ಚಾಮರಾಜನಗರ

ಅದೃಷ್ಟದ ಮೇಲೆ ಅಳಿವು-ಉಳಿವು ನಿರ್ಧಾರ

- ಮಳೆಯ ಅಬ್ಬರಕ್ಕೆ ಶಿಥಿಲ ಮನೆಗಳ ಗೋಡೆ ಕುಸಿತ - ವಿಧಿ ಕೃಪೆ ಜೀವ ಹಾನಿಯಾಗದಿರುವುದೇ ಸಮಾಧಾನ - ಸೆ.1ರಿಂದ ಈವರೆಗೆ 14 ಗೃಹಗಳಿಗೆ ಹಾನಿ

ಚಾಮರಾಜನಗರ: ಹಳೆಯ ಮನೆಗಳಲ್ಲಿ ವಾಸಿಸುತ್ತಿರುವವರ ಪಾಡು ಹೇಗಿದೆ ಎಂದರೆ, ಮಳೆಯಾಗದಿದ್ದರೆ ಒಂದು ರೀತಿಯ ಕಷ್ಟ. ಮಳೆಯಾದರೆ ಮತ್ತೊಂದು ರೀತಿಯ ನಷ್ಟ. ಈ ಕಷ್ಟ-ನಷ್ಟಗಳ ಸುಳಿಯಲ್ಲಿ ಜೋರು ಮಳೆಗೆ ಮನೆಯ ಗೋಡೆ ಕುಸಿದರೆ ಅದೃಷ್ಟದ ಅಡಿಪಾಯದ ಮೇಲೆ ಜೀವಗಳ ಅಳಿವು-ಉಳಿವು ಅಡಗಿ ಕುಳಿತಿದೆ.

ಮಳೆಯಾಗದೆ ಬರ ಆವರಿಸಿದೆ. ಕೃಷಿ ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದೆ ಮನೆಯಲ್ಲೇ ಉಳಿಯುವಂತಾಗಿ ಕಷ್ಟಗಳು ಎದುರಾಗಿವೆ. ಕೆಲವು ದಿನಗಳಿಂದ ವರುಣ ಕೃಪೆ ತೋರಿ ಉತ್ತಮ ಮಳೆಯಾಗುತ್ತಿದೆ. ಪರಿಣಾಮ ಹಲವು ಕಡೆಗಳಲ್ಲಿ ಅವಘಡಗಳು ಸಂಭವಿಸಿ ನಷ್ಟ ಉಂಟಾಗಿದೆ. ಇವುಗಳಲ್ಲಿ ಶಿಥಿಲಗೊಂಡಿರುವ ಮನೆಗಳ ಗೋಡೆಗಳು ನೆಲಕ್ಕುರುಳಿರುವುದು, ಇಲ್ಲಿನ ನಿವಾಸಿಗಳು ಬೀದಿಪಾಲಾಗಬೇಕಾಗಿರುವುದು ಬೇಸರದ ವಿಚಾರ. ಆದರೆ ಗೋಡೆ ಕುಸಿದಾಗ ಯಾರಿಗೂ ಪ್ರಾಣಾಪಾಯವಾಗಿಲ್ಲ ಎನ್ನುವುದು ಸಮಾಧಾನದ ಸಂಗತಿಯಾಗಿದೆ.

14 ಮನೆಗಳಿಗೆ ಹಾನಿ: ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ನೀಡಿರುವ ಮಾಹಿತಿ ಪ್ರಕಾರ, ಸೆ.1ರಿಂದ ಬಿದ್ದಿರುವ ಮಳೆಯಿಂದ ಆಗಿರುವ ಅನಾಹುತಗಳಲ್ಲಿ ಒಟ್ಟು 14 ಮನೆಗಳ ಗೋಡೆ ಕುಸಿದಿವೆ. ಕೊಳ್ಳೇಗಾಲ ತಾಲೂಕಿನಲ್ಲಿ 6, ಹನೂರು ತಾಲೂಕಿನಲ್ಲಿ 6, ಚಾಮರಾಜನಗರ ತಾಲೂಕಿನಲ್ಲಿ 2 ಮನೆಗಳು ಗೋಡೆ ಕುಸಿದಿದೆ. ಕೊಳ್ಳೇಗಾಲ ತಾಲೂಕಿನ ಹೊಸ ಹಂಪಾಪುರದ ಚಿಕ್ಕಮಂಗಳಮ್ಮ, ಲಿಂಗನಪುರದ ನಿವಾಸಿ ಸಣ್ಣಮ್ಮ, ಸಿದ್ದಯ್ಯನಪುರದ ಮಲ್ಲಿಕಾರ್ಜುನ ಮತ್ತು ಇತರರ ಮನೆಗಳು ಹಾನಿಯಾಗಿವೆ. ಮಳೆಯ ರಭಸಕ್ಕೆ ಗೋಡೆ ಕುಸಿತ, ಛಾವಣಿ ಕೆಳಗೆ ಬಿದ್ದು ಹೋಗಿವೆ. ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ. ಹಾನಿ ಸಂಬಂಧ ಜಿಲ್ಲಾಡಳಿತದಿಂದ ಸೂಕ್ತ ಪರಿಹಾರ ನೀಡಲು ಕ್ರಮವಹಿಸಲಾಗುತ್ತಿದೆ. ಈ ಮಳೆಯಿಂದ ಮನೆಗಳು ಮಾತ್ರ ಹಾನಿಗೊಳಗಾಗಿಲ್ಲ. ಬೆಳೆ ನಷ್ಟವೂ ಉಂಟಾಗಿದೆ. ಇಷ್ಟು ದಿನ ರೈತರು ಬರದಿಂದ ನಷ್ಟ ಅನುಭವಿಸುತ್ತಿದ್ದರು. ದುರಾದೃಷ್ಟವೆಂದರೆ ಅಬ್ಬರದ ಮಳೆಯಿಂದಲೂ ಅಪಾಯ ಎದುರಿಸುತ್ತಿದ್ದಾರೆ. ಹನೂರು ತಾಲೂಕಿನಲ್ಲಿ ಮಳೆಯ ಆರ್ಭಟ ಜೋರಾಗಿದೆ. ಕೆರೆ-ಕಟ್ಟೆಗಳು ಭರ್ತಿಯಾಗುತ್ತಿವೆ. ಇದರ ನಡುವೆ 3.53 ಎಕರೆ ತೋಟಗಾರಿಕೆ ಬೆಳೆ ಹಾನಿಯಾಗಿರುವುದಾಗಿ ವರದಿಯಾಗಿದೆ.

ಆತಂಕದ ನೆಲೆಗಳಾದ ಶಿಥಿಲ ಮನೆಗಳು: ಜಿಲ್ಲೆಯಲ್ಲಿ ಶಿಥಿಲ ಮನೆಗಳಲ್ಲಿ ವಾಸ ಮಾಡುತ್ತಿರುವ ಬಡಜನರು ಮಳೆಯ ಅಬ್ಬರ ಹೆಚ್ಚಾದರೆ ಆತಂಕದಲ್ಲೇ ಕಾಲ ಕಳೆಯಬೇಕಾಗಿದೆ. ಅಪಾಯದ ಅಂದಾಜು ಇರುವವರು ಮಳೆಗಾಲಕ್ಕೂ ಮೊದಲೇ ಮನೆಗಳ ರಿಪೇರಿ ಕೆಲಸ ಮಾಡಿಕೊಳ್ಳುತ್ತಾರೆ. ಬರದ ಪರಿಣಾಮ ಮಳೆ ಬರುವುದಿಲ್ಲವೆಂದು ತೀರ್ಮಾನಿಸಿರುವವರು ಈಗ ಸಂಕಷ್ಟಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಬಹು ವರ್ಷಗಳ ಹಳೆಯ ಮನೆಗಳಲ್ಲಿ ಇರಬೇಕಾದಷ್ಟು ಜನರಿಗಿಂತಲೂ ಅಧಿಕ ಜನರು ವಾಸ ಮಾಡುತ್ತಿದ್ದಾರೆ. ಮಳೆಯ ಹೊಡೆತಕ್ಕೆ ಮನೆಗೆ ಹಾನಿಯಾದರೆ ಜೀವಪಾಯ ಎದುರಾಗುತ್ತದೆ. ಮಳೆ ನೀರು ಸೋರುವ ಕಡೆಗಳಿಗೆ ಟಾರ್ಪಲ್ ವಿತರಣೆ ಮಾಡಬೇಕಾಗಿದೆ. ಕುಗ್ರಾಮಗಳಲ್ಲಿ ಶಿಥಿಲ ಮನೆಗಳ ಸರ್ವೆ ನಡೆಸಿ ರಾಜ್ಯ ಸರ್ಕಾರದಿಂದ ವಸತಿ ಸೌಲಭ್ಯ ನೀಡುವಾಗ ಈ ಮನೆಗಳ ಲಾನುಭವಿಗಳನ್ನು ಮೊದಲ ಆದ್ಯತೆಯಾಗಿ ಪರಿಗಣಿಸಬೇಕಾಗಿದೆ.

ಸೋಲಿಗರಿಗೆ ತಪ್ಪದ ಸಂಕಷ್ಟ: ಜಿಲ್ಲೆಯಲ್ಲಿರುವ ಆದಿವಾಸಿಗಳ ಮನೆಗಳು ಸಂಪೂರ್ಣ ಶಿಥಿಲಾವಸ್ಥೆಯಲ್ಲಿವೆ. ಮಳೆಗಾಲ ಬಂದಾಗ ಸೋಲಿಗರು ಹಲವಾರು ಸವಾಲುಗಳನ್ನು ಎದುರಿಸುತ್ತಾರೆ. ಒಂದೆಡೆ ಅರಣ್ಯ ಕಿರು ಉತ್ಪನ್ನಗಳ ಸಂಗ್ರಹ ಮಾಡಲು ಸಾಧ್ಯವಾಗುವುದಿಲ್ಲ. ಮತ್ತೊಂದೆಡೆ ಸೋರುವ ಮನೆಗಳಲ್ಲಿ ದಿನ ಕಳೆಯಬೇಕಾದ ಪರಿಸ್ಥಿತಿ ಇದೆ. ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ 2995 ಮನೆಗಳ ಅವಶ್ಯಕತೆ ಇದೆ ಎಂದು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಶ್ರೀರೂಪಾ ಅವರ ಅಧ್ಯಕ್ಷತೆಯಲ್ಲಿ ಶೀಘ್ರದಲ್ಲೇ ಸಭೆ ಕರೆಯಲಾಗಿದೆ.

ಮಳೆಯಿಂದ ಹಾನಿಯಾದ ಮನೆಗಳ ಮಾಲೀಕರಿಗೆ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಪರಿಹಾರ ನೀಡಲಾಗುತ್ತದೆ. ಮನೆಗಳಿಲ್ಲದ ಸೋಲಿಗರಿಗೆ ವಸತಿ ಸೌಲಭ್ಯ ಕಲ್ಪಿಸುವ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಸಭೆ ಕರೆಯಲಾಗಿದೆ.

ಶ್ರೀರೂಪಾ, ಜಿಲ್ಲಾಧಿಕಾರಿ, ಚಾಮರಾಜನಗರ