ಹನೂರು ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ಕಚೇರಿಗೆ ಜಿಪಂ ಸಿಇಒ ಮೋನಾರೋತ್ ಗುರುವಾರ ಭೇಟಿ ನೀಡಿ ಹಾಜರಾತಿ ಪರಿಶೀಲಿಸಿದರು. ಉಮೇಶ್, ಲೋಕೇಶ್ ಇದ್ದರು.  
ಚಾಮರಾಜನಗರ

ಹಲವು ಗ್ರಾಮಗಳಿಗೆ ಜಿಪಂ ಸಿಇಒ ಭೇಟಿ

ಕಿರಣ್ ಮಾದರಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ಕುಡಿವ ನೀರು, ಗ್ರಾಪಂ ಕಾರ್ಯನಿರ್ವಹಣೆ ಪರಿಶೀಲನೆ
  • ಕುಡಿಯುವ ನೀರಿನ ಸಮಸ್ಯೆ ಹಾಗೂ ಗ್ರಾಮ ಪಂಚಾಯಿತಿ ಕಾರ್ಯನಿರ್ವಹಣೆ ಬಗ್ಗೆ ಪರಿಶೀಲಿಸಿದರು.
ಹನೂರು: ತಾಲೂಕಿನ ಹಲವು ಗ್ರಾಮಗಳಿಗೆ ಬುಧವಾರ ಜಿಲ್ಲಾ ಪಂಚಾಯಿತಿ ಸಿಇಒ ಮೋನಾರೋತ್ ಅವರು ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಗ್ರಾಮ ಪಂಚಾಯಿತಿ ಕಾರ್ಯನಿರ್ವಹಣೆ ಬಗ್ಗೆ ಪರಿಶೀಲಿಸಿದರು.
ತಾಲೂಕಿನ ಕಾಡಂಚಿನ ಗ್ರಾಮ ಪೊನ್ನಾಚಿ ಗ್ರಾಪಂ ಕಚೇರಿಗೆ ಭೇಟಿ ನೀಡಿದ ಸಿಇಒ ಅವರು ಸಿಬ್ಬಂದಿ ಹಾಜರಾತಿ ಹಾಗೂ ಕಡತಗಳ ನಿರ್ವಹಣೆಯನ್ನು ಪರಿಶೀಲಿಸಿ, ಅಗತ್ಯ ನಿರ್ದೇಶನ ನೀಡಿದರು. ಬಳಿಕ ಗ್ರಾಮದ ಬಡಾವಣೆ ಹಾಗೂ ಸಮೀಪದ ಅಸ್ತೂರು ಗ್ರಾಮಕ್ಕೆ ತೆರಳಿ ಜನರ ಸಮಸ್ಯೆ ಆಲಿಸಿ ಕುಡಿಯುವ ನೀರಿನ ಸಮಸ್ಯೆ ಸಂಬಂಧ ಪರಿಶೀಲಿಸಿದರು. ಕುಡಿವ ನೀರಿಗೆ ಯಾವುದೇ ಕಾರಣಕ್ಕೂ ಸಮಸ್ಯೆಯಾಗದ ರೀತಿಯಲ್ಲಿ ಅಗತ್ಯ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸಾರ್ವಜನಿಕರಿಗೆ ಸಿಗುತ್ತಿರುವ ಚಿಕಿತ್ಸೆ ಹಾಗೂ ಮೂಲ ಸೌಕರ್ಯದ ಬಗ್ಗೆ ಮಾಹಿತಿ ಪಡೆದು ಉತ್ತಮ ಸೇವೆ ನೀಡುವಂತೆ ಅಲ್ಲಿನ ಸಿಬ್ಬಂದಿಗೆ ಸೂಚಿಸಿದರು.
ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಬಂಡಳ್ಳಿ, ಮಣಗಳ್ಳಿ ಹಾಗೂ ಭೈರನತ್ತ ಗ್ರಾಮಕ್ಕೆ ತೆರಳಿದ ಸಿಇಒ ಅವರು ಜನರೊಂದಿಗೆ ಚರ್ಚಿಸಿದರು. ನೀರಿನ ಘಟಕಗಳ ಸಮರ್ಪಕ ನಿರ್ವಹಣೆ ಹಾಗೂ ನೀರು ಪೂರೈಕೆಯಲ್ಲಿನ ಸಮಸ್ಯೆಯನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಬಂಡಳ್ಳಿ ಗ್ರಾಪಂ ಕಚೇರಿಗೆ ತೆರಳಿ ಹಾಜರಾತಿ ಹಾಗೂ ಕಡತಗಳನ್ನು ಪರಿಶೀಲಿಸಿ ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವಂತೆ ಹಾಗೂ ಸಾರ್ವಜನಿಕರ ಕೆಲಸಗಳನ್ನು ನಿಗದಿತ ಅವಧಿಯೊಳಗೆ ಮಾಡಿಕೊಂಡುವಂತೆ ಪಿಡಿಒ ವಿಶ್ವನಾಥ್ ಅವರಿಗೆ ಸೂಚಿಸಿದರು.
ತಾಪಂ ಇಒ ಉಮೇಶ್, ಪಿಡಿಒ ಲೋಕೇಶ್ ಹಾಗೂ ಇನ್ನಿತರರು ಇದ್ದರು.