ಚಾಮರಾಜನಗರ ತಾಲೂಕಿನ ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬಿಜೆಪಿ ರೈತ ಮೋರ್ಚಾದಿಂದ ಮಂಗಳವಾರ ಆಯೋಜಿಸಿದ್ದ ನೈಸರ್ಗಿಕ ಮತ್ತು ಸಾವಯವ ಕಾರ್ಯಗಾರದಲ್ಲಿ ಕೆವಿಕೆ ಮುಖ್ಯಸ್ಥ ಡಾ.ಎನ್.ಟಿ.ನರೇಶ್ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್‌ಕುಮಾರ್, ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಡಾ. ಪಂಪನಗೌಡ, ಡಾ. ಶೃತಿ, ಯೋಗೇಶ್ ಇದ್ದರು.
- ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಎನ್.ಟಿ.ನರೇಶ್ ಸಲಹೆ
- ನೈಸರ್ಗಿಕ ಮತ್ತು ಸಾವಯವ ಕಾರ್ಯಗಾರ ಆಯೋಜನೆ
ಚಾಮರಾಜನಗರ: ರೈತರು ಶೂನ್ಯ ಹಾಗೂ ಸಾವಯವ ಕೃಷಿಯನ್ನು ಅವಲಂಬಿಸಿಕೊಂಡು ಕೃಷಿ ವಿಜ್ಞಾನಿಗಳ ಸಲಹೆ ಮಾರ್ಗದರ್ಶನದೊಂದಿಗೆ ಬೇಸಾಯ ಮಾಡಿದರೆ, ಹೆಚ್ಚಿನ ಲಾಭವನ್ನು ಗಳಿಸಲು ಸಾಧ್ಯವಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಎನ್.ಟಿ.ನರೇಶ್ ಎಂದು ತಿಳಿಸಿದರು.
ತಾಲೂಕಿನ ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬಿಜೆಪಿ ರೈತ ಮೋರ್ಚಾದಿಂದ ಮಂಗಳವಾರ ಆಯೋಜಿಸಿದ್ದ ನೈಸರ್ಗಿಕ ಮತ್ತು ಸಾವಯವ ಕಾರ್ಯಗಾರದಲ್ಲಿ ಅವರು ಮಾತನಾಡಿದರು. ಆಸಕ್ತ ರೈತರು ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕ ಮಾಡಿದರೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್‌ಕುಮಾರ್ ಮಾತನಾಡಿ, ರೈತರು ಹಾಗೂ ಯುವಕರು ಶೂನ್ಯ ಬಂಡಾವಳವುಳ್ಳ ಸಾವಯವ ಮತ್ತು ನೈಸಗಿಕ ಕೃಷಿಯಿಂದ ವಿಷದಿಂದ ಮುಕ್ತ ಆಹಾರವನ್ನು ದೇಶಕ್ಕೆ ನೀಡುವ ಜತೆಗೆ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಿದಂತಾಗುತ್ತದೆ. ಸ್ವಾತಂತ್ಯದ ಬಳಿಕ ದೇಶದಲ್ಲಿ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡ ಪರಿಣಾಮ ದೇಶವು ಬಹಳಷ್ಟು ಸಂಕಷ್ಟವನ್ನು ಅನುಭವಿಸುವಂತಾಗಿದೆ. ದೇಶದ 140 ಕೋಟಿ ಜನರಿಗೆ ನಾವೇ ವಿಷ ಆಹಾರವನ್ನು ನೀಡುವಂತಹ ಪರಿಸ್ಥಿತಿ ಉದ್ಭವಾಗಿದೆ ಎಂದರು.
ಇದನ್ನು ತಪ್ಪಿಸಲು, ಆರೋಗ್ಯವಂತ ಜೀವನ ನಡೆಸಲು ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾವಯವ ಹಾಗೂ ನೈಸರ್ಗಿಕ ಕೃಷಿಯತ್ತ ರೈತರಿಗೆ ಉತ್ತೇಜನ ನೀಡಲು ಮುಂದಾಗಿದ್ದಾರೆ. ಸಾವಯವ ಕೃಷಿಯನ್ನು ಅವಲಂಬಿಸಿಕೊಳ್ಳಲು ರೈತರಿಗೆ ಕೇಂದ್ರ ಸರ್ಕಾರದಿಂದ ಯೋಜನೆಗಳನ್ನು ರೂಪಿಸಿದ್ದಾರೆ. ಸಾವಯವ ಉತ್ಪನ್ನಗಳ ಮಾರಾಟಕ್ಕೆ ಮಾರುಕಟ್ಟೆ ವ್ಯವಸ್ಥೆ, ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆಯನ್ನು ಕೊಡಿಸಲು ಇ-ಮಾರುಕಟ್ಟೆ ವ್ಯವಸ್ಥೆ, ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ನೈಸರ್ಗಿಕ ಕೃಷಿಗೆ ಉತ್ತೇಜನ, ಕೃಷಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಭೋಧನೆ ಮಾಡುವ ಜತೆಗೆ ರೈತರ ತಾಕುಗಳನ್ನು ಶೂನ್ಯ ಕೃಷಿ ಅಳವಡಿಸಿಕೊಳ್ಳುವ ಬಗ್ಗೆ ಪಾತ್ಯಾಕ್ಷತೆ ಹಾಗೂ ಪರಿಚಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದೆ. ಇದರ ಭಾಗವಾಗಿ ಬಿಜೆಪಿ ರೈತ ಮೋರ್ಚಾದಿಂದ ಒಂದು ತಿಂಗಳು ಸಾವಯವ ಕೃಷಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಮಾತನಾಡಿ, ರಾಸಾಯನಿಕ ಆಹಾರವನ್ನು ಸೇವಿಸುತ್ತಿರುವ ಪರಿಣಾಮ ಮನುಷ್ಯನ ಆಯುಷ್ಯ, ಆರೋಗ್ಯವು ಕಡಿಮೆಯಾಗುತ್ತದೆ. ಕ್ಯಾನ್ಸರ್‌ರಂತಹ ಮಾರಕ ಕಾಯಿಲೆಗಳು ಹೆಚ್ಚಾಗಿವೆ. ಇದನ್ನು ತಡೆಯಲು ಹಿಂದಿನ ವ್ಯವಸಾಯ ಪದ್ಧತಿಯನ್ನು ಆಳವಡಿಸಿಕೊಳ್ಳಲು ರೈತರು ಮುಂದಾಗಿದ್ದಾರೆ. ಪಿಎಂ ನರೇಂದ್ರ ಮೋದಿ ಅವರು ಸಾವಯವ ಹಾಗೂ ನೈಸರ್ಗಿಕ ಕೃಷಿಯತ್ತ ರೈತರನ್ನು ಮರಳುವಂತೆ ಮಾಡಲು ಮುಂದಾಗಿದ್ದಾರೆ. ರೈತರು ಸಹ ಇದರ ಪ್ರಯೋಜವನ್ನು ಪಡೆದುಕೊಲ್ಳಬೇಕು ಎಂದರು.
ಕಾರ್ಯಗಾರದಲ್ಲಿ ಕೃಷಿ ವಿಜ್ಞಾನಿಗಳಾದ ಡಾ. ಪಂಪನಗೌಡ, ಡಾ. ಶೃತಿ ಹಾಗೂ ಯುವ ರೈತ ಯೋಗೇಶ್ ಸಾವಯವ ಕೃಷಿ ಬಗ್ಗೆ ಮಾಹಿತಿ ನೀಡಿದರು. ಕಾರ್ಯಗಾರದಲ್ಲಿ ಬಿಜೆಪಿ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಬೇಡರಪುರ ಬಸವಣ್ಣ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ವೃಷಬೇಂದ್ರಪ್ಪ, ರೈತ ಮೊರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಹೊನ್ನಹಳ್ಳಿ ಪುರುಷೋತ್ತಮ್, ಚಂದ್ರಶೇಖರ್, ಕಾರ್ಯದರ್ಶಿ ಮರಿಯಾಲ ಮಹೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಚ್.ಎಂ. ಬಸವಣ್ಣ, ಚುಡಾ ಮಾಜಿ ಅಧ್ಯಕ್ಷ ಕುಲಗಾಣ ಶಾಂತಮುರ್ತಿ, ಹೊಸೂರು ಮಹೇಶ್, ಕುಮಾರಸ್ವಾಮಿ ಹಾಗೂ ರೈತ ಮುಖಂಡರು ಇದ್ದರು.