ಚಾಮರಾಜನಗರದ ಜಿಲ್ಲಾ ನ್ಯಾಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ಎನ್.ರವೀಂದ್ರನಾಥ ಕಾಮತ್ ಮತ್ತು ಎಚ್.ಎಲ್.ವಿಶಾಲ್ ರಘು ಅವರನ್ನು ಸನ್ಮಾನಿಸಲಾಯಿತು. ಜಿ.ಪ್ರಭಾವತಿ,ಎಸ್.ಜೆ.ಕೃಷ್ಣ, ಸಿ.ಡಿ.ಪ್ರಕಾಶ್, ಈಶ್ವರ್, ಪುಟ್ಟಸ್ವಾಮಿ, ಶಿವರಾಂ ಹಾಜರಿದ್ದರು.
- ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಜಿ.ಪ್ರಭಾವತಿ ಸಲಹೆ
- ಜಿಲ್ಲಾ ವಕೀಲರ ಸಂಘದಿಂದ ವಕೀಲರ ದಿನಾಚರಣೆ
- ವಕೀಲರ ದಿನಾಚರಣೆ ಹಾಗೂ ವಕೀಲರ ಸಂಘದ ಡೈರಿ ಬಿಡುಗಡೆ
ಚಾಮರಾಜನಗರ : ಜಿಲ್ಲಾ ನ್ಯಾಯಾಲಯದಲ್ಲಿ ಕಿರಿಯ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಹಿರಿಯ ವಕೀಲರ ಮಾರ್ಗದರ್ಶನದಲ್ಲಿ ಉತ್ತಮವಾಗಿ ಅಭ್ಯಾಸಮಾಡಿ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಜಿ.ಪ್ರಭಾವತಿ ಸಲಹೆ ನೀಡಿದರು.
ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ವಕೀಲರ ಸಂಘದ ವತಿಯಿಂದ ಸೋಮವಾರ ಆಯೋಜಿಸಿದ್ದ ವಕೀಲರ ದಿನಾಚರಣೆ ಹಾಗೂ ವಕೀಲರ ಸಂಘದ ಡೈರಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಹಿರಿಯರ ವಕೀಲರ ಮಾರ್ಗದರ್ಶನದಲ್ಲಿ ಕಿರಿಯ ವಕೀಲರು ಉತ್ತಮ ಅಭ್ಯಾಸವನ್ನು ಮಾಡಬೇಕು. ಬಿಡುವಿನ ವೇಳೆಯಲ್ಲಿ ಗ್ರಂಥಾಲಯಕ್ಕೆ ಭೇಟಿನೀಡಿ ಉತ್ತಮ ಪುಸ್ತಕಗಳ ಅಭ್ಯಾಸ ಮಾಡಬೇಕು. ಕಿರಿಯರು ಪ್ರಕರಣಗಳ ಅಧ್ಯಯನವನ್ನು ಮಾಡಬೇಕು. ಕಿರಿಯ ವಕೀಲರು ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮ ಅಭ್ಯಾಸವನ್ನು ಮಾಡಬೇಕು ಎಂದು ಹೇಳಿದರು.
ಸುಪ್ರೀಂ ಕೋರ್ಟ್ ಹಿರಿಯ ವಕೀಲ ಎನ್.ರವೀಂದ್ರನಾಥ ಕಾಮತ್ ಮಾತನಾಡಿ, ವಕೀಲರ ಹುದ್ದೆ ಅತ್ಯಂತ ಶ್ರೇಷ್ಠ ಹುದ್ದೆಯಾಗಿದೆ. ವಕೀಲರಲ್ಲಿ ಯಾವುದೇ ಗೊಂದಲಗಳು ಇದ್ದರೂ, ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಮುಂದಾಗಬೇಕು. ವಕೀಲರು ಒಗ್ಗಟ್ಟಿನಿಂದ ಸಾಗುವ ಮೂಲಕ ಮುಂದಿನ ದಿನಗಳಲ್ಲಿ ವಕೀಲರ ಸಭಾ ಭವನವನ್ನು ನಿರ್ಮಾಣ ಮಾಡಬೇಕು. ವಕೀಲರ ತಮ್ಮ ಮಕ್ಕಳಿಗೆ ಉತ್ತಮ ಅವಕಾಶಗಳನ್ನು ಕಲ್ಪಿಸಿಕೊಡಬೇಕು ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ ರಾಮಸಮುದ್ರ ಮಾತನಾಡಿ, ನ್ಯಾಯಾಲಾಯದಲ್ಲಿ ತನ್ನ ಕಕ್ಷಿದಾರರ ಪರವಾಗಿ ಹೋರಾಟ ಮಾಡುವಾಗ ತಮ್ಮ ಆರೋಗ್ಯವನ್ನು ಕಡೆಗಣಿಸುವ ವಕೀಲರ ಪಾತ್ರ ದೇಶದಲ್ಲೇ ಅಪಾರವಾಗಿದೆ. ಕಿರಿಯ ವಕೀಲರು ಹಿರಿಯ ವಕೀಲರೊಂದಿಗೆ ಗೌರವ ಭಾವಚಿಂದ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಕೀಲ ಪದವಿಯನ್ನು ಪಡೆದ ಹಿರಿಯ ವಕೀಲರ ಮಕ್ಕಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯ ವಕೀಲರ ಪರಿಷತ್ ಮಾಜಿ ಅಧ್ಯಕ್ಷ ಎಚ್.ಎಲ್.ವಿಶಾಲ್ ರಘು, ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಜೆ.ಕೃಷ್ಣ, ಮುಖ್ಯ ನ್ಯಾಯಿಕ ದಂಡಾಧಿಕಾರಿ ಸಿ.ಡಿ.ಪ್ರಕಾಶ್, ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್, ನ್ಯಾಯಾಧೀಶರಾದ ಆರ್.ಸುನೀಲ್, ಸ್ಮಿತಾ ನಾಗಪಾಪುರ, ಪ್ರತಿಭಾ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಎಂ.ಶಿವರಾಂ, ಉಪಾಧ್ಯಕ್ಷ ರಂಗಸ್ವಾಮಿ, ಖಜಾಂಚಿ ನಾಗಮ್ಮ, ಸಹಕಾರ್ಯದರ್ಶಿ ಸಿ.ಸಿ.ರಮೇಶ್, ಸದಸ್ಯರಾದ ಬಿ.ಮಮತಾ, ಎಂ.ಆರ್.ಸವಿತಾ, ಉಮೇಶ್, ಬಿ.ಪ್ರಸನ್ನಕುಮಾರ್, ಮಲ್ಲೇಶ್ ಪ್ರಭು, ಎಂ.ವಿಜಯ್ ಹಾಗೂ ಇತರರು ಹಾಜರಿದ್ದರು.
ವಕೀಲರ ವೃತ್ತಿ ಉನ್ನತ ಹುದ್ದೆಯಾಗಿದ್ದು, ಇದರಲ್ಲಿ ವಕೀಲರು ಸಲತೆಯನ್ನು ಕಾಣಬೇಕು. ಕಿರಿಯ ವಕೀಲರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಿ ಉತ್ತಮ ಸಾಧನೆಯನ್ನು ಮಾಡಬೇಕು. ಇದರಲ್ಲಿ ಹಿರಿಯ ವಕೀಲರ ಮಾರ್ಗದರ್ಶನವನ್ನು ಪಡೆದುಕೊಳ್ಳಬೇಕು.
ಪುಟ್ಟಸ್ವಾಮಿ ರಾಮಸಮುದ್ರ, ಅಧ್ಯಕ್ಷ, ಜಿಲ್ಲಾ ವಕೀಲರ ಸಂಘ, ಚಾಮರಾಜನಗರ