ಯಳಂದೂರು ಪಟ್ಟಣದಲ್ಲಿ ಸೋಮವಾರ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮುಖ್ಯಾಧಿಕಾರಿ ಎಂ.ಪಿ. ಮಹೇಶ್‌ಕುಮಾರ್ ಭಾಗವಹಿಸಿದ್ದರು. ಜಿಲ್ಲಾ ನಗರಾಭಿವೃದ್ದಿ ಕೋಶದ ಎಇಇ ರಾಮಚಂದ್ರು ಇತರರು ಇದ್ದರು.
ಯಳಂದೂರು : ಯಳಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಯಲ್ಲಿ ಸೋಮವಾರದ ತನಕ ಶೇ. 51 ರಷ್ಟು ಡಿಜಿಟಲೀಕರಣವಾಗಿದೆ ಎಂದು ಪಪಂ ಮುಖ್ಯಾಧಿಕಾರಿ ಎಂ.ಪಿ. ಮಹೇಶ್‌ಕುಮಾರ್ ಮಾಹಿತಿ ನೀಡಿದರು.
ಅವರು ಸೋಮವಾರ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾಗವಹಿಸಿ ಮಾತನಾಡಿದರು. ಎಸ್‌ಐಆರ್ ಒಂದು ಸಮಗ್ರ ಮತಪಟ್ಟಿ ಪರಿಷ್ಕರಣೆಯಾಗಿದೆ. ಈಗಾಗಲೇ ರಾಜ್ಯಾದ್ಯಂತ ಜೂ.30 ರಿಂದಲೇ ಇದು ಆರಂಭಗೊಂಡಿದೆ. ಈ ಬಗ್ಗೆ ಪಟ್ಟಣದಲ್ಲೂ ಸಾಕಷ್ಟು ಜಾಗೃತಿಯನ್ನು ಮೂಡಿಸಲಾಗಿದೆ ಎಂದರು.
ಪಟ್ಟಣ ವ್ಯಾಪ್ತಿಯಲ್ಲಿ ಒಟ್ಟು 6,808 ಮತದಾರರು ಇದ್ದಾರೆ. ಈಗಾಗಲೇ ಶೇ. 100 ರಷ್ಟು ಅರ್ಜಿಗಳನ್ನು ವಿತರಣೆ ಮಾಡಲಾಗಿದೆ. ಇದನ್ನು ಕಲೆ ಹಾಕುವ ಕೆಲಸ ಪ್ರಗತಿಯಲ್ಲಿದೆ. 3,477 ಮಂದಿಯ ಮಾಹಿತಿಯನ್ನು ಈಗಾಗಲೇ ಡಿಜಿಟಲೀಕರಣ ಮಾಡಲಾಗಿದೆ. ಇನ್ನೂ 3,331 ಮಂದಿ ಬಾಕಿ ಇದ್ದಾರೆ ಎಂದು ವಿವರಿಸಿದರು.
ಪ್ರತಿಯೊಂದು ಮನೆಗೂ ಬಿಎಲ್‌ಒಗಳು ಭೇಟಿ ನೀಡಿ ಮತದಾರರ ಮಾಹಿತಿಯನ್ನು ಕಲೆ ಹಾಕಿ ಗಣತಿ ನಮೂನೆ (ಎನ್ಯುಮರೇಷನ್ ಫಾರಂ) ನೀಡುತ್ತಾರೆ. ಎಲ್ಲಾ ವಯಸ್ಕ ಮಾತದಾರರೂ ಇದನ್ನು ಭರ್ತಿ ಮಾಡಿ ಒಂದು ಅರ್ಜಿಯನ್ನು ತಾವು ಇಟ್ಟುಕೊಂಡು ಮತ್ತೊಂದನ್ನು ಕಡ್ಡಾಯವಾಗಿ ನೀಡಬೇಕು. ಈ ಪ್ರಕ್ರಿಯೆ ಅತ್ಯಂತ ಮಹತ್ವದ್ದಾಗಿದೆ. ಎಲ್ಲರೂ ಇದರಲ್ಲಿ ಭಾಗವಹಿಸಬೇಕು. ಇಲ್ಲವಾದಲ್ಲಿ ಮತದಾರ ಪಟ್ಟಿಯಲ್ಲಿ ಹೆಸರು ಅಳಿಸಿ ಹೋಗುವ ಸಾಧ್ಯತೆ ಇರುತ್ತದೆ ಎಂದು ಮಹೇಶ್‌ಕುಮಾರ್ ಸೂಚಿಸಿದರು.
ಅಧಿಕಾರಿಗಳನ್ನು ಸಂಪರ್ಕಿಸಿ: ಪರಿಷ್ಕರಣೆಗೆ ಸಂಬಂಧಿಸಿದಂತೆ ಯಾವುದೇ ಗೊಂದಲಗಳಿದ್ದರೂ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು. ಸಾರ್ವಜನಿಕರ ಆದಷ್ಟು ಬೇಗ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿ ಪ್ರಕ್ರಿಯೆಗೆ ಸಹರಿಸಬೇಕು ಎಂದು ಮಹೇಶ್ ಕುಮಾರ್ ಮನವಿ ಮಾಡಿದರು. ಜಿಲ್ಲಾ ನಗರಾಭಿವೃದ್ದಿ ಕೋಶದ ಎಇಇ ರಾಮಚಂದ್ರು, ಪಪಂನ ಮಲ್ಲಿಕಾರ್ಜುನ, ಬಿಎಲ್‌ಒಗಳು ಸೇರಿದಂತೆ ಅಧಿಕಾರಿಗಳು ಇದ್ದರು.