ಯಳಂದೂರಿನ ತಾಲೂಕು ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಜಾಪ್ರಭುತ್ವ ದಿನಾಚರಣೆಯನ್ನು ಶಾಸಕ ಎ.ಆರ್. ಕೃಷ್ಣಮೂರ್ತಿ ಉದ್ಘಾಟಿಸಿದರು. ತಹಸೀಲ್ದಾರ್ ಎಸ್.ಎಲ್. ನಯನಾ, ಇಒ ವೇಣು, ಪಪಂ ಮುಖ್ಯಾಧಿಕಾರಿ ಎಂ.ಪಿ. ಮಹೇಶ್ ಕುಮಾರ್, ಬಿಇಒ ಮಾರಯ್ಯ ಇತರರು ಇದ್ದರು.
ಯಳಂದೂರು: ದೇಶದ ಸಮಗ್ರ ಪ್ರಗತಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಸುಭದ್ರ ನೆಲೆಗಟ್ಟು ಒದಗಿಸಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ತಾಲೂಕು ಅಡಳಿತ, ತಾಲೂಕು ಪಂಚಾಯಿತಿ ಸಮಾಜ ಕಲ್ಯಾಣ ಇಲಾಖೆ, ಕಾನೂನು ಸೇವೆಗಳ ಪ್ರಾಧಿಕಾರ, ಶಿಕ್ಷನ ಹಾಗೂ ಸಾಕ್ಷರತಾ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ
ಉದ್ಘಾಟಿಸಿ ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ವಿಶ್ವದ ಅನೇಕ ದೇಶಗಳು ಅಳವಡಿಸಿಕೊಂಡಿವೆ. ಆದರೂ ಪ್ರಬಲವಾದ ಪ್ರಜಾಪ್ರಭುತ್ವ ಭಾರತದ್ದು ಎಂಬುದನ್ನು ಹೇಳಿಕೊಳ್ಳಲು ನಮಗೆ ಹೆಮ್ಮೆ ಎಂದರು. ನಮ್ಮ ದೇಶ ಇಷ್ಟೊಂದು ಪ್ರಗತಿಯನ್ನು ಸಾಧಿಸಿರುವುದು ಪ್ರಜಾಪ್ರಭುತ್ವದ ತಳಹದಿಯಲ್ಲೇ ಆಗಿದೆ. ಇಲ್ಲಿ ಒಂದೊಂದು ಮತಕ್ಕೂ ಇರುವ ಶಕ್ತಿ ಅಗಾಧವಾಗಿದೆ.
ಇದಕ್ಕೆ ನಾನು ಕೇವಲ ಒಂದು ಮತದಿಂದ ಸೋತಿದ್ದು ಒಂದು ಉದಾಹರಣೆಯಾಗಿದೆ ಎಂದರು.
ಪ್ರಜಾಪ್ರಭುತ್ವದಲ್ಲಿ ಪ್ರತಿ ವ್ಯಕ್ತಿಯೂ ಸಾರ್ವಭೌಮನಾಗಿದ್ದಾನೆ. ಇದರಲ್ಲಿ ಬರುವ ಅಧಿಕಾರ ಶ್ರೇಣಿಕೃತ ಪದ್ಧತಿಯೂ ಒಂದಕ್ಕೊಂದು ಕೊಂಡಿಯಂತೆ ಕೊಡಿಕೊಂಡಿರುತ್ತದೆ. ಜಗತ್ತಿನ ಬಹುತೇಕ ರಾಷ್ಟ್ರಗಳು ಇದನ್ನು ಅಳವಡಿಸಿಕೊಂಡು ಉತ್ತಮ ಆಡಳಿತ ನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಿದರು.
ಮುಖ್ಯ ಭಾಷಣಕಾರರಾದ ವಕೀಲ ಗೌಡಹಳ್ಳಿ ಮಹೇಶ್ ಹಾಗೂ ಉಪನ್ಯಾಸಕಿ ಶ್ವೇತಾ ಪ್ರಜಾಪ್ರಭುತ್ವದ ಮಹತ್ವ, ಬೆಳೆದು ಬಂದ ಬಗೆ, ಪ್ರಸ್ತುತ ಇದರ ಅಗತ್ಯತೆ,ನಮ್ಮ ದೇಶ ಸಾಧಿಸಿರುವ ಪ್ರಗತಿ ಕುರಿತು ಮಾತನಾಡಿದರು.
ತಹಸೀಲ್ದಾರ್ ಎಸ್.ಎಲ್. ನಯನಾ, ತಾಪಂ ಇಒ ಎ.ಬಿ. ವೇಣು, ಪಪಂ ಮುಖ್ಯಾಧಿಕಾರಿ ಎಂ.ಪಿ. ಮಹೇಶ್‌ಕುಮಾರ್, ಬಿಇಒ ಮಾರಯ್ಯ, ಬಿಳಿಗಿರಿರಂಗನಾಥಸ್ವಾಮಿ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುಂಬಳ್ಳಿ ರಾಜಣ್ಣ, ಎಇಇ ಚಂದ್ರಶೇಖರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೇಶವಮೂರ್ತಿ, ಪಪಂ ಮಾಜಿ ಸದಸ್ಯರಾದ ಮಹೇಶ್, ಲಿಂಗರಾಜಮೂರ್ತಿ, ರವಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಇದ್ದರು.