ಯಳಂದೂರು ಪಟ್ಟಣದಲ್ಲಿರುವ ಸಂತೆಮೈದಾನದಲ್ಲಿ ಉಪಯೋಗಕ್ಕೆ ಬಾರದಂತಿರುವ ಅಂಗಡಿ ಮಳಿಗೆಗಳು. 
ಚಾಮರಾಜನಗರ

ಯಳಂದೂರು ಸಂತೆ ಮೈದಾನದಲ್ಲಿಲ್ಲ ಸೌಕರ್ಯ

ಯಳಂದೂರು: ಪಟ್ಟಣದ ಕೇಂದ್ರದ ಸ್ಥಾನದಲ್ಲಿರುವ ಸಂತೆ ಮೈದಾನ ಮೂಲಸೌಲಭ್ಯಗಳಿಂದ ವಂಚಿತವಾಗಿದ್ದು, ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಇದರಿಂದ ಪರದಾಡುವಂತಾಗಿದೆ.
ಪ್ರತಿ ಭಾನುವಾರ ಇಲ್ಲಿ ಸಂತೆ ನಡೆಯುವುದು ವಾಡಿಕೆ. ಈ ಹಿಂದೆ ಪಟ್ಟಣದ ದಿವಾನ್ ಪೂರ್ಣಯ್ಯ ಬಂಗಲೆ ಮುಂಭಾಗದಲ್ಲಿ ಸಂತೆ ನಡೆಯುತ್ತಿತ್ತು. ಆದರೆ ಸ್ಥಳದ ಕೊರತೆಯಿಂದಾಗಿ ಹಾಗೂ ರಸ್ತೆಯ ಬದಿಗಳಲ್ಲಿ ತರಕಾರಿ ವ್ಯಾಪಾರ ಹೆಚ್ಚಾದ್ದರಿಂದ ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆ ಆಗುತ್ತಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಪಟ್ಟಣದ ಅಗ್ರಹಾರ ಬಡಾವಣೆ ಸಮೀಪ 2005ರಲ್ಲಿ ಮಾರುಕಟ್ಟೆ ನಿರ್ಮಾಣ ಕಾಮಗಾರಿ ಆರಂಭವಾಯಿತಾದರೂ ಪೂರ್ಣಗೊಳ್ಳಲು ಸಮಯ ಹಿಡಿಯಿತು. ಇದೀಗ ಅಲ್ಲಿ ಮಾರುಕಟ್ಟೆ ಆರಂಭಗೊಂಡರೂ ಮೂಲಸೌಲಭ್ಯ ಮಾತ್ರ ಮರೀಚಿಕೆಯಾಗಿದೆ.
ಮುಚ್ಚಿರುವ ಅಂಗಡಿ ಮಳಿಗೆಗಳು: 500ಕ್ಕೂ ಹೆಚ್ಚು ವ್ಯಾಪಾರಿಗಳು ಪ್ರತಿ ಭಾನುವಾರ ಪಟ್ಟಣದ ಮಾರುಕಟ್ಟೆಯಲ್ಲಿ ತರಕಾರಿ, ಹಣ್ಣು, ಸೊಪ್ಪು, ಸೇರಿದಂತೆ ಇತರ ವಸ್ತುಗಳನ್ನು ಮಾರಾಟ ಮಾಡುತ್ತಿದ್ದು, ಅವರಿಗೆ ಉಪಯುಕ್ತವಾಗುವ ನಿಟ್ಟಿನಲ್ಲಿ 12 ಕ್ಕೂ ಹೆಚ್ಚು ಅಂಗಡಿಗಳನ್ನು ನಿರ್ಮಿಸಲಾಗಿದೆ. ಅಲ್ಲದೆ ಅವುಗಳನ್ನು ವ್ಯಾಪಾರಿಗಳಿಗೆ ಬಾಡಿಗೆಗೆ ನೀಡದೆ ಖಾಲಿ ಬಿಟ್ಟಿರುವುದರಿಂದ ಅಂಗಡಿಗಳು ದುಸ್ಥಿತಿ ತಲುಪಿವೆ. ಪಟ್ಟಣ ಪಂಚಾಯಿತಿ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಈ ಮಾರುಕಟ್ಟೆಯು ನಿರುಪಯುಕ್ತವಾಗಿದೆ ಎಂದರೆ ತಪ್ಪಾಗಲಾರದು.
ಮಾರುಕಟ್ಟೆಗೆ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸ್ಥಳೀಯ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈವರೆಗೂ ಮನಸ್ಸು ಮಾಡಿಲ್ಲ. ಇಲ್ಲಿನ ಮಾರುಕಟ್ಟೆಯಲ್ಲಿ ಕುಡಿಯುವ ನೀರು, ಶೌಚಗೃಹ ವ್ಯವಸ್ಥೆ ಇಲ್ಲ. ಪರಿಣಾಮ ಮಾರುಕಟ್ಟೆಯ ಸುತ್ತಮುತ್ತಲಿನ ವಾತಾವರಣ ಅನೈರ್ಮಲ್ಯದಿಂದ ಕೂಡಿದೆ. ಇಷ್ಟೆಲ್ಲ ಸಮಸ್ಯೆಗಳ ನಡುವೆಯೂ ವ್ಯಾಪಾರಿಗಳು ಪಟ್ಟಣ ಪಂಚಾಯಿತಿಗೆ ತೆರಿಗೆ ಕಟ್ಟುತ್ತಿದ್ದು, ತೆರಿಗೆ ಹಣದಿಂದಾದರೂ ಅಲ್ಲಿನ ವ್ಯಾಪಾರಿಗಳಿಗೆ ಸೌಲಭ್ಯ ಕಲ್ಪಿಸುವ ಹೊಣೆಗಾರಿಕೆ ಪಟ್ಟಣ ಪಂಚಾಯಿತಿಗೆ ಇದ್ದಂತೆ ಕಾಣುತ್ತಿಲ್ಲ.
ಸಾರ್ವಜನಿಕರು ಹಾಗೂ ವ್ಯಾಪಾರಿಗಳಿಗೆ ಅನುಕೂಲವಾಗುವ ಮಾರುಕಟ್ಟೆಗೆ ಮುಂದಿನ ದಿನಗಳಲ್ಲಾದರೂ ಅಗತ್ಯ ಸೌಲಭ್ಯ ಕಲ್ಪಿಸುವ ಮೂಲಕ ಸಂಬಂಧಪಟ್ಟವರು ತಮ್ಮ ಜವಾಬ್ದಾರಿಯನ್ನು ಪ್ರದರ್ಶಿಸುವವರೇ ಎಂಬುದನ್ನು ಕಾದು ನೋಡಬೇಕಾಗಿದೆ.
ತರಕಾರಿ ತ್ಯಾಜ್ಯ ವಿಲೇವಾರಿ ಸಮಸ್ಯೆ: ಪಟ್ಟಣದಲ್ಲಿ ಪ್ರತಿ ಭಾನುವಾರ ಸಂತೆ ನಡೆಯಲಿದ್ದು, ವ್ಯಾಪಾರ ಮಾಡಿ ಹೋಗುವ ಸಮಯದಲ್ಲಿ ಕೊಳೆತ ತರಕಾರಿಗಳನ್ನು ವ್ಯಾಪಾರಿಗಳು ಪಕ್ಕದಲ್ಲಿ ರಾಶಿ ಮಾಡಿ ಬಿಟ್ಟು ಹೋಗುತ್ತಾರೆ. ಇದನ್ನು ವಿಲೇವಾರಿ ಮಾಡಬೇಕಾದ ಪಟ್ಟಣದ ಪಂಚಾಯಿತಿ ಸಿಬ್ಬಂದಿ ಮಾತ್ರ ತಮಗೂ, ಇದಕ್ಕೂ ಸಂಬಂಧವಿಲ್ಲವೇನೋ ಎಂಬಂತೆ ಕೆಲವೊಮ್ಮ ವರ್ತಿಸುತ್ತಾರೆ. ಅಲ್ಲದೆ ಸಂತೆಯ ಮರುದಿನ ಕಸವನ್ನು ವಿಲೇವಾರಿ ಮಾಡುವ ಗೋಜಿಗೆ ಹೋಗುತ್ತಿಲ್ಲ. ಇದರಿಂದ ಮೈದಾನದಲ್ಲಿ ತರಕಾರಿಗಳು ಕೊಳೆತು ಗಬ್ಬುನಾರುವ ಮೂಲಕ ಇಡೀ ಪ್ರದೇಶದಲ್ಲಿ ಅನೈರ್ಮಲ್ಯ ಸೃಷ್ಟಿಗೆ ಕಾರಣವಾಗುತ್ತಿದೆ. ಈ ನಡುವೆ ಅಕ್ಕಪಕ್ಕದ ನಿವಾಸಿಗಳಿಗೂ ಇದರಿಂದ ತೊಂದರೆ ಎದುರಾಗಿದ್ದು, ರೋಗ ಉಲ್ಬಣಿಸುವ ಸಾಧ್ಯತೆ ಹೆಚ್ಚಿದೆ. ಸಮಸ್ಯೆಯಿದ್ದರೂ ಪಟ್ಟಣದ ಪಂಚಾಯಿತಿ ಅಧಿಕಾರಿಗಳು ಬಡಾವಣೆಗಳಿಗೆ ಭೇಟಿ ನೀಡುವುದಿಲ್ಲ ಎಂಬ ಆರೋಪವೂ ಇದೆ.
ಪಟ್ಟಣದ ಅಗ್ರಹಾರ ಬಡಾವಣೆಯಲ್ಲಿ ನಿರ್ಮಿಸಿರುವ ಮಾರುಕಟ್ಟೆಯಲ್ಲಿ ಕುಡಿಯುವ ನೀರು, ಶೌಚಗೃಹ ವ್ಯವಸ್ಥೆ ಇಲ್ಲ. ಮಾರುಕಟ್ಟೆಯಲ್ಲಿನ ಅಂಗಡಿಗಳ ಬಾಗಿಲು ತೆರೆದಿಲ್ಲ. ಅನೇಕ ಸಮಸ್ಯೆಗಳ ನಡುವೆಯೂ ವ್ಯಾಪಾರ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಶೀಘ್ರ ಸೌಲಭ್ಯ ಕಲ್ಪಿಸುವ ಕೆಲಸ ಮಾಡಲಿ.
ಮಹೇಶ್ ಪಟ್ಟಣ ನಿವಾಸಿ
ಪಟ್ಟಣದ ಸಂತೆ ಮೈದಾನದಲ್ಲಿರುವ ಮಳಿಗೆಗಳಿಗೆ ನಾಲ್ಕು ಬಾರಿ ಟೆಂಡರ್ ಕರೆದಿದ್ದು ಯಾರೂ ಬಂದಿಲ್ಲ. ಇಲ್ಲಿನ ವರ್ತಕರು ಹಾಗೂ ಗ್ರಾಹಕರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಶೌಚಗೃಹ, ತೊಂಬೆ ಮೂಲಕ ನೀರಿನ ವ್ಯವಸ್ಥೆ ಮಾಡಲಾಗಿದೆ. ಆದರೆ ಕೆಲವು ಜನರು ಸಾರ್ವಜನಿಕ ಆಸ್ತಿಯನ್ನು ಹಾನಿ ಮಾಡುತ್ತಿದ್ದಾರೆ. ಈ ಬಗ್ಗೆ ಮತ್ತೊಮ್ಮೆ ಗಮನಹರಿಸಿ ಸಂತೆ ಮೈದಾನಕ್ಕೆ ಸೌಲಭ್ಯ ಒದಗಿಸುವುದರ ಜತೆಗೆ ನಿಗದಿತ ಸಮಯದಲ್ಲಿ ಕಸ ವಿಲೇವಾರಿ ಮಾಡುವತ್ತ ಗಮನ ಹರಿಸಲಾಗುವುದು.
ಎಂ.ಪಿ.ಮಹೇಶ್‌ಕುಮಾರ್ ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ. ಯಳಂದೂರು