ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ ಕಾಯ್ದೆ ವಿರುದ್ಧ ಯಳಂದೂರಿನಲ್ಲಿ ಬುಧವಾರ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿ ಮನವಿ ಪತ್ರವನ್ನು ತಹಸೀಲ್ದಾರ್ ನಯನ ಅವರಿಗೆ ಸಲ್ಲಿಸಿದರು. ಮಂಡಲದ ಅಧ್ಯಕ್ಷ ಎನ್. ಅನಿಲ್ , ಮಹದೇವಸ್ವಾಮಿ, ದೊಡ್ಡರಾಜು, ಸೂರ್ಯನಾರಾಯಣ್, ರಾಜು, ಅಂಬಳೆ ರುದ್ರೇಶ್, ಕೆಂಪರಾಜು ಸೇರಿದಂತೆ ಅನೇಕರು ಇದ್ದರು.  
ಚಾಮರಾಜನಗರ

ದ್ವೇಷ ಭಾಷಣ ವಿಧೇಯಕ ವಿರುದ್ಧ ಪ್ರತಿಭಟನೆ

ಎ. ಆರ್. ರಘುರಾಮ
ಯಳಂದೂರು : ದ್ವೇಷ ಭಾಷಣ ಮತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕವು ಸಂವಿಧಾನಕ್ಕೆ ವಿರುದ್ಧವಾಗಿದ್ದು, ಇದನ್ನು ಜಾರಿಗೊಳಿಸದಂತೆ ಬಿಜೆಪಿ ಸದಸ್ಯರು ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಸ್.ಎಲ್. ನಯನ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭ ಬಿಜೆಪಿ ಯಳಂದೂರು ಮಂಡಲದ ಅಧ್ಯಕ್ಷ ಎನ್. ಅನಿಲ್ ಮಾತನಾಡಿ,
ರಾಜ್ಯ ಕಾಂಗ್ರೆಸ ಸರ್ಕಾರದ ಈ ವಿಧೇಯಕ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ. ಇದನ್ನು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತಮ್ಮ ಸರ್ಕಾರದ ವಿರುದ್ಧ ಮಾತನಾಡುವರ ಬಾಯಿ ಮುಚ್ಚಿಸುವ ಸಾಧನವಾಗಿ ಮಾಡಿಕೊಳ್ಳಲು ಹೊರಟಿದೆ. ಇದರಲ್ಲಿ ದ್ವೇಷ ಭಾಷಣದ ವ್ಯಾಖ್ಯಾನವೇ ಅಸ್ಪಷ್ಟವಾಗಿದೆ ಎಂದರು.
ಸರ್ಕಾರದ ನೀತಿಗಳ ವಿರುದ್ಧ ಟೀಕೆ, ಸಾಮಾಜಿಕ ಚರ್ಚೆ, ವ್ಯಂಗ್ಯ ಮಾಡುವುದು ಅಥವಾ ಸತ್ಯ ಹೇಳುವುದನ್ನೂ ದ್ವೇಷ ಎಂದು ಪರಿಗಣಿಸುವ ಅಪಾಯವಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಕಾನೂನಾಗಿದೆ. ಸರ್ಕಾರ ಹಾಗೂ ಪೋಲಿಸರಿಗೆ ನಿರಂಕುಶ ಅಧಿಕಾರ
ನೀಡುವ ಕಾಯ್ದೆಯಾಗುವ ಅಪಾಯವಿದೆ ಎಂದರು.
ಪ್ರತಿಭಟನೆಗಳು, ಸಭೆಗಳು, ಸಾಮಾಜಿಕ ಚಳವಳಿಗಳನ್ನು ಹತ್ತಿಕ್ಕುವ ಸಂಭವವೂ ಇದರಲ್ಲಿ ಅಡಕವಾಗಿದೆ. ಮಾಧ್ಯಮಗಳು ಹಾಗೂ ಜನರ ಧ್ವನಿಯನ್ನು ಅಡಗಿಸುವ ಕಾಯ್ದೆಯಾಗುವ ಸಂಭವೂ ಇದೆ. ಇದರ ಮೂಲಕ ಸರ್ಕಾರವು ಪ್ರತಿಪಕ್ಷಗಳು, ಮಾಧ್ಯಮದವರ ಮೇಲೆ ನಿಯಂತ್ರಣ ಹೇರುವುದು, ಬೆದರಿಸುವ ಕೆಲಸವನ್ನು ಮಾಡುತ್ತಿದೆ.
ಮಾಧ್ಯಮಗಳು ನೀಡುವ ತನಿಖಾ ವರದಿಗಳು ನ್ಯಾಯಾಲದಲ್ಲಿ ಕೇಸಿನ ತೂಗುಗತ್ತಿಯನ್ನು ಎದುರಿಸುವ ಅಪಾಯವಿದೆ, ಸಾಮಾಜಿಕ ಜಾಲತಾಣಗಳಲ್ಲಿ ಹಾಸ್ಯ ಅಥವಾ ಟೀಕೆ
ಯನ್ನು ದ್ವೇಷ ಎಂದು ಬ್ಲಾಕ್ ಮಾಡಿ ತೊಂದರೆಯನ್ನು ನೀಡಬಹುದು. ಒಟ್ಟಿನಲ್ಲಿ ಇದು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಕಾನೂನಾಗಿದೆ. ಹಾಗಾಗಿ ಕೂಡಲೇ ಇದನ್ನು ಹಿಂಪಡೆಯಬೇಕು ಎಂದರು.
ಮುಖಂಡರಾದ ಪಿ. ಮಹೇಶ್, ಮಹದೇವಸ್ವಾಮಿ, ದೊಡ್ಡರಾಜು, ಸೂರ್ಯನಾರಾಯಣ್, ರಾಜು, ಅಂಬಳೆ ರುದ್ರೇಶ್, ಕೆಂಪರಾಜು ಸೇರಿದಂತೆ ಅನೇಕರು ಇದ್ದರು.