ಯಳಂದೂರು ಪಟ್ಟಣದ ಐತಿಹಾಸಿಕ ಭೂಲಕ್ಷ್ಮಿ ವರಾಹಸ್ವಾಮಿ ದೇಗುಲಕ್ಕೆ ಮಂಗಳವಾರ ಕ್ರೇನ್ ಮೂಲಕ ಕಲ್ಲಿನ ಗರುಡಗಂಬವನ್ನು ಅಳವಡಿಸುತ್ತಿರುವುದು.
ಯಳಂದೂರು: ಪಟ್ಟಣದಲ್ಲಿರುವ ಐತಿಹಾಸಿಕ ಶ್ರೀಲಕ್ಷ್ಮೀ ಭೂವರಹಾಸ್ವಾಮಿ ದೇಗುಲಕ್ಕೆ ಕಲ್ಲಿನ ಗರುಡಗಂಬವನ್ನು ಮಂಗಳವಾರ ಬೃಹತ್ ಕ್ರೇನ್ ಮೂಲಕ ಅಳವಡಿಸುವ ಕಾರ್ಯ ಸಾಂಗವಾಗಿ ನೆರವೇರಿತು.
2 ಶತಮಾನಗಳ ಹಿಂದೆ ದಿವಾನ್ ಪೂರ್ಣಯ್ಯ ಅವರ ಕಾಲದಲ್ಲಿ ನೂರಾರು ವರ್ಷಗಳ ಹಿಂದಿನ ಶ್ರೀಲಕ್ಷ್ಮೀ ಸಮೇತ ವರಹಾಸ್ವಾಮಿಯ ಮೂರ್ತಿಯನ್ನು ಮರು ಪ್ರತಿಷ್ಠಾಪಿಸಲಾಗಿತ್ತು. ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಗೆ ಸೇರಿದ ಈ ದೇಗುಲ ಶಿಥಿಲಗೊಂಡಿದ್ದರಿಂದ ಸಾರ್ವಜನಿಕರ ಸಹಯೋಗದೊಂದಿಗೆ ಪಟ್ಟಣದ ಪ್ರಸಿದ್ಧ ವೈದ್ಯ ಕುಟುಂಬವಾಗಿರುವ ಡಾ.ರಮೇಶ್ ಉಡುಪ, ಡಾ.ಶಶಿಕಲಾ ರಮೇಶ್ ಅವರು ಜೀರ್ಣೋದ್ಧಾರಗೊಳಿಸಲು ಮುಂದಾದರು. ಅದರಂತೆಯೇ ದೇಗುಲವನ್ನು 2025ರ ಆಗಸ್ಟ್‌ನಲ್ಲಿ ಜೀರ್ಣೋದ್ಧಾರ ಮಾಡಿ ಅನೇಕ ಧಾರ್ಮಿಕ ವಿಧಿಗಳೊಂದಿಗೆ ಮತ್ತೆ ಲೋಕಾರ್ಪಣೆಗೊಳಿಸಲಾಗಿತ್ತು.
ಈಗ ಇದಕ್ಕೆ ಗರುಡಗಂಬವನ್ನು ಅಳವಡಿಸುವ ಕಾರ್ಯ ಬಾಕಿ ಇದ್ದು ಅದನ್ನೂ ಕಲ್ಲಿನಲ್ಲಿ ಕೆತ್ತಿಸಿ ಬೃಹತ್ ಕ್ರೇನ್ ಮೂಲಕ ಅಳವಡಿಸುವ ಕಾರ್ಯ ನೆರವೇರಿದೆ.
ಯಳಂದೂರು ಪಟ್ಟದ ಸಮೀಪ ಇರುವ ಯರಿಯೂರು ಎಂಬ ಗ್ರಾಮದ ಜಮೀನೊಂದರಲ್ಲಿ ಶಿಥಿಲವಾದ ದೇವಾಲಯಯವೊಂದು ಹೂತು ಹೋಗಿತ್ತು. ಕ್ರಿ.ಶ.1807ರ ಡಿಸೆಂಬರ್ 27ರಂದು ಅಂದಿನ ಬ್ರಿಟಿಷ್ ಸರ್ಕಾರ ಮತ್ತು ಮೈಸೂರು ಮಹಾರಾಜರು ಹಾಗೂ ದಿವಾನ್ ಪೂರ್ಣಯ್ಯ ಅವರು ಆ ದೇವಾಲಯದಲ್ಲಿನ ಶ್ರೀಲಕ್ಷ್ಮೀ ಭೂವರಹಾಸ್ವಾಮಿ ಮೂರ್ತಿಯನ್ನು ಅಲ್ಲಿಂದ ತಂದು ಪಟ್ಟಣದ ಹೃದಯಭಾಗದಲ್ಲಿದ್ದ ಜೈನ ಬಸದಿಯಲ್ಲಿ ಪ್ರತಿಷ್ಠಾಪನೆ ಮಾಡಿದ್ದರು. ಧಾರ್ಮಿಕ ಕಾರ್ಯಕ್ರಮ, ಉತ್ಸವಗಳಿಗೆ ಪೂರ್ಣಯ್ಯ ಅವರೇ ಚಾಲನೆ ನೀಡುತ್ತಿದ್ದರು. ಅಂದಿನಿಂದ ಇಂದಿನವರೆಗೂ ಈ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದುಕೊಂಡು ಬರುತ್ತಿವೆ.
ಇಲ್ಲಿ ಅಲ್ಲದೇ, ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಕಲ್ಲಹಳ್ಳಿ ಹಾಗೂ ನೆರೆಯ ಆಂಧ್ರಪ್ರದೇಶದ ತಿರುಪತಿಯಲ್ಲಿ ಸಹ ಲಕ್ಷ್ಮೀ ಸಮೇತ ಭೂವರಹಾಸ್ವಾಮಿ ಮೂರ್ತಿ ದೇಗುಲ ನೋಡಬಹುದು. ಈ ದೇಗುಲದಲ್ಲಿ ಪೂಜಾ ಕೈಂಕರ್ಯ ನೆರವೇರಿಸಿದರೆ ಭೂ ವ್ಯಾಜ್ಯ, ರಾಹು ದೋಷ, ಕೇತು ದೋಷ, ವಿವಾಹ ಯೋಗ, ಸಂತಾನ ಭಾಗ್ಯ ಹೀಗೆ ಸರ್ವ ಸಂಕಷ್ಟಗಳನ್ನು ದೂರವಾಗುತ್ತದೆ ಎನ್ನುವ ನಂಬಿಕೆ ಭಕ್ತರಲ್ಲಿದೆ.