ಯಳಂದೂರು ಪಟ್ಟಣದಲ್ಲಿ ಎಬಿ ಕೇಬಲ್ ಕಾಮಗಾರಿ ಹಿನ್ನೆಲೆಯಲ್ಲಿ ವಿದ್ಯುತ್ ಸ್ಥಗಿತಗೊಳಿಸಿರುವುದು.
ಯಳಂದೂರು: ಪಟ್ಟಣದಲ್ಲಿ ವಿದ್ಯುತ್ ಪೂರೈಕೆಯಲ್ಲಿ ಕಳೆದ ಹಲವು ದಿನಗಳಿಂದ ನಿರಂತರವಾಗಿ ಬೆಳಗ್ಗೆಯಿಂದ ಸಂಜೆವರೆಗೂ ವಿದ್ಯುತ್ ಕಡಿತ ಮಾಡುತ್ತಿರುವ ಪರಿಣಾಮ ಸಮಸ್ಯೆ ಉಂಟಾಗುತ್ತಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಕಣ್ಣಾಮುಚ್ಚಲೆ ಆಟವಾಡುತ್ತಿದೆ, ಬಿಸಿಲಿನಿಂದ ಬಸವಳಿಯುತ್ತಿರುವ ಜನರಿಗೆ ವಿದ್ಯುತ್ ಪದೇ ಪದೆ ಕೈ ಕೊಡುತ್ತಿರುವುದು ಜತೆಗೆ ಈ ಬಗ್ಗೆ ಸಾರ್ವಜನಿಕರಿಗೆ ವಿದ್ಯುತ್ ಕಡಿತ ಮಾಡುತ್ತಿರುವ ಬಗ್ಗೆ ಯಾವುದೇ ಮಾಹಿತಿ ನೀಡದೆ ನಿರಂತರವಾಗಿ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ಸೆಸ್ಕ್ ವಿರುದ್ಧ ಆಕ್ರೋಶ ಹೆಚ್ಚಾಗಲು ಕಾರಣವಾಗಿದೆ. ಇದರಿಂದ ಹೋಟೆಲ್, ಆಸ್ಪತ್ರೆಯ ರೋಗಿಗಳಿಗೆ, ಬೇಕರಿ, ಬ್ಯಾಂಕ್, ಅಂಚೆ ಕಚೇರಿ ಸೇರಿದಂತೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ಪಟ್ಟಣ ಸೇರಿದಂತೆ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಕಡಿತದಿಂದ ಕುಡಿಯುವ ನೀರಿಗೂ ಹಾಹಾಕಾರಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅನಿಯಮಿತ ವಿದ್ಯುತ್ ಕಡಿತದಿಂದಾಗಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗುತ್ತಿದೆ. ಸಂಬಂಧಪಟ್ಟ ಇಲಾಖೆ ಇದರ ಬಗ್ಗೆ ಪರಿಗಣಿಸಿ ಸಮರ್ಪಕ ವಿದ್ಯುತ್ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ಕಳೆದ ಹಲವು ದಿನಗಳಿಂದ ವಿದ್ಯುತ್‌ನ್ನು ಸಾರ್ವಜನಿಕರಿಗೆ ಯಾವುದೇ ಮಾಹಿತಿಯನ್ನು ಸೆಸ್ಕ್ ನೀಡದೆ ವಿದ್ಯುತ್ ನಿರಂತರವಾಗಿ ಕಡಿತ ಮಾಡುತ್ತಿರುವುದರಿಂದ ಕುಡಿಯುವ ನೀರು ಸೇರಿದಂತೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಇಲಾಖೆ ಮೇಲಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ.
ಪಟ್ಟಣ ವ್ಯಾಪ್ತಿಯಲ್ಲಿ ಕಳೆದ ಹಲವು ದಿನಗಳಿಂದ ಎಬಿ ಕೇಬಲ್ ಕಾಮಗಾರಿ ಕೈಗೊಂಡಿರುವ ಪರಿಣಾಮ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಆದರಿಂದ ಮುಂದಿನ ದಿನಗಳಲ್ಲಿ ಶನಿವಾರ ಹಾಗೂ ಭಾನುವಾರ ಕಡಿತ ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡಲಾಗುವುದು.
ಲಿಂಗರಾಜು, ಎಇಇ, ಸೆಸ್ಕ್, ಯಳಂದೂರು