ಮಹದೇಶ್ವರ ಬೆಟ್ಟದ ದೇಗುಲದಲ್ಲಿರುವ ಬೇಡರ ಕಣ್ಣಪ್ಪನ ಮೂರ್ತಿಗೆ ಪೂಜೆ ಸಲ್ಲಿಸಿರುವುದು.
- ಶಿವ ಮೆಚ್ಚಿನ ಕಣ್ಣಪ್ಪನ ಜಯಂತಿ ಆಚರಣೆ
- ಮಹದೇಶ್ವರ ಬೆಟ್ಟದಲ್ಲಿ ಬೇಡಗಂಪಣರಿಂದ ಉತ್ಸವ
ಚಾಮರಾಜನಗರ: ಶಿವನಿಗೆ ಮಾಂಸಾಹಾರವನ್ನು ನೈವೇದ್ಯವನ್ನಾಗಿ ಇಟ್ಟು, ಹರ ಕೇಳಿದನೆಂದು ತನ್ನೆರಡು ಕಣ್ಣುಗಳನ್ನು ಕೊಟ್ಟು ಮುಗ್ಧ ಭಕ್ತಿ ಮೆರೆದು ಮೆಚ್ಚಿಗೆ ಪಡೆದ ಬೇಡರ ಕಣ್ಣಪ್ಪನ ಜಯಂತಿ ಪ್ರಯುಕ್ತ ಪವಾಡ ಪುರುಷ ಮಾದಪ್ಪನಿಗೆ ಪೂಜೆ ಸಲ್ಲಿಸಲಾಯಿತು.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಶ್ರೀಬೇಡರಕಣ್ಣಪ್ಪ ಜಯಂತಿ ಆಚರಣೆ ಸಮಿತಿ ವತಿಯಿಂದ ಗುರುವಾರ ಆಯೋಜಿಸಿದ್ದ ಬೇಡರಕಣ್ಣಪ್ಪ ಜಯಂತಿ ಮಹೋತ್ಸವ ಹಾಗೂ ಶ್ರೀಮಲೆ ಮಹದೇಶ್ವರ ಸ್ವಾಮಿಗೆ ಮಹಾ ರುದ್ರಾಭಿಷೇಕ ಕಾರ್ಯಕ್ರಮದಲ್ಲಿ ಮಾದಪ್ಪನಿಗೆ ಪೂಜೆ, ಶಿವ ಮೆಚ್ಚಿದ ಕಣ್ಣಪ್ಪನ ಸ್ಮರಣೆ ನಡೆಯಿತು.
ರಾಜ್ಯದಲ್ಲಿ ಬೇಡರ ಕಣ್ಣಪ್ಪನ ಕುಲದ ಬೇಡಗಂಪಣ ಜನಾಂಗ ಇರುವುದು ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾತ್ರ. ಒಂದು ಕಾಲದಲ್ಲಿ ಶ್ರೀಶೈಲದಲ್ಲಿ ರಾಜರುಗಳಿಗೆ ಯುದ್ಧದಲ್ಲಿ ಶಸಾಸ ಪೂರೈಸುತ್ತಿದ್ದ ಬೇಡಗಂಪಣರು ಬಳಿಕ ಕತ್ತಲರಾಜ್ಯವಾಗಿದ್ದ ಮಲೆ ಮಹದೇಶ್ವರ ಬೆಟ್ಟಕ್ಕೆ ಬಂದು ನೆಲೆ ನಿಂತರು. ಕಾಡಿನಲ್ಲಿ ಬೇಟೆಯಾಡುತ್ತಿದ್ದ ಈ ಬುಡಕಟ್ಟು ಸಮುದಾಯಕ್ಕೆ ಮಹದೇಶ್ವರರ ಪರಿಚಯವಾಗಿ ಬೇಟೆಯಾಡುವುದನ್ನು ಬಿಟ್ಟು ಅನುಯಾಯಿಗಳಾದರು. ಹಾಗಾಗಿ ಬೆಟ್ಟದ ದೇಗುಲದ ಗರ್ಭಗುಡಿಯಲ್ಲಿ ಮಾದಪ್ಪನಿಗೆ ಪೂಜೆ ಮಾಡುವುದು ಬೇಡಗಂಪಣರು ಮಾತ್ರ. ಇವರ ಕುಲ ಪುರಷ ಬೇಡರ ಕಣ್ಣಪ್ಪ ಮತ್ತು ಶಿವನ ರೂಪವಾಗಿರುವ ಮಹದೇಶ್ವರರಿಗೂ ಭಕ್ತಿಯ ಸಂಬಂಧವಿದೆ. ಆದ್ದರಿಂದ ಕಣ್ಣಪ್ಪನ ಜಯಂತಿಯಂದು ಮಾದಪ್ಪನಿಗೆ ಮಹಾ ರುದ್ರಾಭಿಷೇಕ ಮಾಡಲಾಯಿತು. ದೇಗುಲದ ಗರ್ಭಗುಡಿಯ ಹೊರಗೋಡೆಯ ಬಳಿ ಬೇಡರ ಕಣ್ಣಪ್ಪ ಶಿವನಿಗೆ ಕಣ್ಣು ಕೊಡುವ ವಿಗ್ರಹವಿದ್ದು, ಇದಕ್ಕೆ ಹೂವಿನ ಅಲಂಕಾರ ಮಾಡಿ ಧೂಪ, ದೀಪ ಬೆಳಗಿ ಪೂಜೆ ಸಲ್ಲಿಸಲಾಯಿತು. ಮಾದಪ್ಪನಿಗೆ ರುದ್ರಾಭಿಷೇಕ ಮುಗಿದ ಬಳಿಕ ಬಸವ ವಾಹನ, ಹುಲಿ ವಾಹನ ರುದ್ರಾಕ್ಷಿ ಮಂಟಪ ಇತ್ಯಾದಿ ಉತ್ಸವಗಳು ನಡೆದವು.
ಮಹದೇಶ್ವರ ಬೆಟ್ಟದ ದೇಗುಲದ ಮುಂಭಾಗ ಬೇಡರ ಕಣ್ಣಪ್ಪನ ಭಾವಚಿತ್ರವಿರುವ ವಾಹನಕ್ಕೆ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ಚಾಲನೆ ನೀಡಿದರು. ಉತ್ಸವವು ಮಹದೇಶ್ವರ ಬೆಟ್ಟದ ಪ್ರಮುಖ ಬೀದಿಗಳಲ್ಲಿ ಸಾಗಿತು. ಬೇಡಗಂಪಣರು ವಿವಿಧ ವೇಷ ತೊಟ್ಟು ಮೆರವಣಿಗೆಯಲ್ಲಿ ಪಾಲ್ಗೊಂಡರು. ಮನೆಗಳ ಮುಂದೆ ನಿಂತ ಭಕ್ತರು ಬೇಡರ ಕಣ್ಣಪ್ಪನಿಗೆ ಕೈ ಮುಗಿದರು. ಬೊಮ್ಮೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಉತ್ಸವ ಮುಕ್ತಾಯಗೊಂಡಿತು. ಮೆರವಣಿಗೆಯಲ್ಲಿ ಸುತ್ತಮುತ್ತಲಿನ 48 ಹಳ್ಳಿಗಳ ಬೇಡಗಂಪಣರು ಭಾಗವಹಿಸಿದ್ದರು.