ಚಾಮರಾಜನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ ಅಧ್ಯಕ್ಷತೆಯಲ್ಲಿ ಜಿಲ್ಲಾ ಕ್ರೀಡಾ ಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳೊಂದಿಗೆ ಬುಧವಾರ ಸಮಾಲೋಚನೆ ಸಭೆ ನಡೆಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಭಾರ ಸಹಾಯಕಿ ನಿರ್ದೇಶಕ ಎಚ್.ಎಸ್. ಬಿಂದ್ಯಾ ಇದ್ದರು.
- ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್.ಅರುಣ್ ಮಾಚಯ್ಯ ಹೇಳಿಕೆ
- ಕ್ರೀಡೆಯ ಅಭಿವೃದ್ಧಿ ಸಂಬಂಧ ಬುಧವಾರ ಆಯೋಜಿಸಿದ್ದ ಸಮಾಲೋಚನಾ ಸಭೆ
ಚಾಮರಾಜನಗರ: ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡಾ ಪ್ರತಿಭೆಗಳು ಅಡಗಿದ್ದು, ಇದನ್ನು ಗುರುತಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್.ಅರುಣ್ ಮಾಚಯ್ಯ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ಜಿಲ್ಲಾ ಕ್ರೀಡಾ ಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳೊಂದಿಗೆ ಕ್ರೀಡೆಯ ಅಭಿವೃದ್ಧಿ ಸಂಬಂಧ ಬುಧವಾರ ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿರುವ ಕ್ರೀಡಾ ಸಂಸ್ಥೆಗಳು ನಿಯಮಾನುಸಾರ ನೋಂದಾಯಿಸಿಕೊಳ್ಳಬೇಕು. ಇದರಿಂದ ರಾಜ್ಯ ಕ್ರೀಡಾ ಸಂಸ್ಥೆಗಳಿಂದ ಮಾನ್ಯತೆ ದೊರೆಯುವುದಲ್ಲದೆ ನೆರವಾಗುವ ನಿಟ್ಟಿನಲ್ಲಿ ಎಲ್ಲ ಸಹಕಾರಿಯಾಗಲಿದೆ. ಲಭ್ಯವಿರುವ ಕ್ರೀಡಾ ಸೌಲಭ್ಯಗಳನ್ನು ನಿರ್ವಹಣೆ ಮಾಡಬೇಕಿದೆ. ಮೂಲ ಸೌಕರ್ಯಗಳು ಸಹ ಸಮರ್ಪಕವಾಗಿ ಲಭ್ಯವಾದರೆ ಆದಾಯವು ಸಹ ಬರಲಿದೆ. ಜಿಲ್ಲೆಯ ಕ್ರೀಡಾಂಗಣಗಳ ಅಭಿವೃದ್ಧಿ, ಕ್ರೀಡಾಪಟುಗಳಿಗೆ ಉತ್ತೇಜನ ಸೇರಿದಂತೆ ಕ್ರೀಡಾ ಕ್ಷೇತ್ರದ ಅಭಿವೃದ್ಧಿ ಸಂಬಂಧ ಶಾಸಕರೊಂದಿಗೂ ಸಮಾಲೋಚಿಸಲಾಗುವುದು. ಕ್ರೀಡಾ ಸಂಸ್ಥೆಗಳ ಮಾನ್ಯತೆ, ಪ್ರೋತ್ಸಾಹ ಸೇರಿದಂತೆ ಎಲ್ಲ ಕ್ರೀಡಾ ಚಟುವಟಿಕೆಗೆ ಅವಶ್ಯವಿರುವ ಸಹಕಾರ ಕ್ರೀಡಾ ಪ್ರಾಧಿಕಾರದಿಂದ ನೀಡಲಾಗುವುದು ಎಂದು ತಿಳಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಭಾರ ಸಹಾಯಕಿ ನಿರ್ದೇಶಕಿ ಎಚ್.ಎಸ್.ಬಿಂದ್ಯಾ, ರಾಜ್ಯ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಸಿದ್ದರಾಜು, ಕ್ರೀಡಾಪಟುಗಳಾದ ಶ್ರೀನಿವಾಸ ಪ್ರಸಾದ್, ಚಾ.ರಂ.ಶ್ರೀನಿವಾಸಗೌಡ, ಜಿ.ಬಂಗಾರು, ರಾಜೇಂದ್ರ, ಸಿ.ಎಂ.ನರಸಿಂಹಮೂರ್ತಿ, ನಂಜುಂಡಸ್ವಾಮಿ, ಸುಮನ್, ಚೇತನ್ ದೊರೈರಾಜು, ಮಹದೇವ ಪ್ರಸಾದ್, ಮಂಜುನಾಥ್, ಕ್ರೀಡಾ ಸಂಸ್ಥೆಗಳ ಮುಖ್ಯಸ್ಥರು, ಪದಾಧಿಕಾರಿಗಳು ಹಾಜರಿದ್ದರು.
ಸಭೆಗೂ ಮೊದಲು ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್.ಅರುಣ್ ಮಾಚಯ್ಯ ಅವರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕಿ ಎಚ್.ಎಸ್.ಬಿಂದ್ಯಾ ಅವರೊಂದಿಗೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿ ಸಿಂಥೆಟಿಕ್ ಟ್ರ್ಯಾಕ್, ಪೆವಿಲಿಯನ್ ಸೇರಿದಂತೆ ಇತರ ಕ್ರೀಡಾ ಸೌಕರ್ಯಗಳನ್ನು ಪರಿಶೀಲಿಸಿದರು.
ಸ್ಟೇಡಿಯಂ ಸಮಸ್ಯೆ ಪ್ರತಿಧ್ವನಿ:
ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದ ಅವ್ಯವಸ್ಥೆ ಮತ್ತು ಸಮಸ್ಯೆಗಳ ಕುರಿತು ಕ್ರೀಡಾ ಸಂಘಗಳ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು. ಮುಖಂಡ ಶ್ರೀನಿವಾಸ ಪ್ರಸಾದ್ ಕ್ರೀಡಾಂಗಣದಲ್ಲಿ ಕಳೆದ 20 ವರ್ಷಗಳಿಂದಲೂ ಕಾಮಗಾರಿ ನಡೆಯುತ್ತಿದೆ. ಆದರೂ ಪೂರ್ಣವಾಗಿಲ್ಲ. ಕ್ರೀಡಾ ಅಂಕಣಗಳು ನಿರ್ಮಾಣವಾದರೆ ಕ್ರೀಡಾಪಟುಗಳಿಗೆ ಅನುಕೂಲವಾಗಲಿದೆ. ಬಾಲ್ ಬ್ಯಾಡ್ಮಿಂಟನ್, ನೆಟ್ ಬಾಲ್, ಖೋ ಖೋ, ಕಬಡ್ಡಿ ಸೇರಿದಂತೆ ಇನ್ನಿತರ ಕ್ರೀಡೆಗಳಿಗೆ ಜಿಲ್ಲೆಯಲ್ಲಿ ಹೆಚ್ಚಿನ ಆಸಕ್ತರಿದ್ದಾರೆ. ಇವರಿಗೆ ಕ್ರೀಡಾ ಸೌಲಭ್ಯಗಳು ಲಭ್ಯವಾದರೆ ಹೆಚ್ಚಿನ ಸಾಧನೆಗೆ ಅನುಕೂಲವಾಗುತ್ತದೆ. ಕ್ರೀಡಾ ತರಬೇತುದಾರರನ್ನು ನೇಮಕ ಮಾಡಬೇಕಿದೆ. ಇಲಾಖೆಯ ಪ್ರಶಸ್ತಿಗಳಿಗೂ ಜಿಲ್ಲೆಯ ಸಾಧಕರನ್ನು ಗುರುತಿಸಬೇಕು ಎಂಬುದೂ ಸೇರಿದಂತೆ ಹಲವು ಅಭಿಪ್ರಾಯ ಸಮಸ್ಯೆಗಳನ್ನು ಗಮನಕ್ಕೆ ತಂದರು.