ಗುಂಡ್ಲುಪೇಟೆ ತಾಲೂಕಿನ ಅರೇಪುರ ಸಮೀಪ ಲಾರಿಚಕ್ರಕ್ಕೆ ಸಿಲುಕಿ ಮೃತಪಟ್ಟ ಮಹಿಳೆ.
ಗುಂಡ್ಲುಪೇಟೆ: ಬೈಕ್‌ನಲ್ಲಿ ಕುಳಿತಿದ್ದ ಮಹಿಳೆಯ ಸೀರೆ ಸೆರಗು ಹಿಂಬದಿ ಚಕ್ರಕ್ಕೆ ಸುತ್ತಿಕೊಂಡು ಕೆಳಗೆ ಬಿದ್ದ ಕೂಡಲೇ ಲಾರಿಯ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.
ನಂಜನಗೂಡು ತಾಲೂಕಿನ ಕಲ್ಲೂಪುರ ಗ್ರಾಮದ ನಿವಾಸಿ ಮಹದೇವಶೆಟ್ಟಿ ಅವರು ತಮ್ಮ ಪತ್ನಿ ಸಿದ್ದಮ್ಮ ಹಾಗೂ ಮೊಮ್ಮಗುವಿನೊಂದಿಗೆ ಬೇಗೂರು ಸಮೀಪದ ತಗ್ಗಲೂರಿನಿಂದ ಸ್ವಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಸಿದ್ದಮ್ಮನ ಸೀರೆಯ ಸೆರಗು ಬೈಕ್‌ನ ಹಿಂದಿನ ಚಕ್ರಕ್ಕೆ ಸುತ್ತಿಕೊಂಡು ಕೆಳಗೆ ಬಿದ್ದಿದ್ದಾರೆ. ಕೂಡಲೇ ಹಿಂದಿನಿಂದ ವೇಗವಾಗಿ ಬರುತ್ತಿದ್ದ ತರಕಾರಿ ಲಾರಿಯ ಚಕ್ರ ತಲೆಗೆ ಹತ್ತಿದ ಪರಿಣಾಮ ಬುರುಡೆ ಒಡೆದು ಸಿದ್ದಮ್ಮ (45) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಬೇಗೂರು ಪೊಲೀಸರು ಗಾಯಾಳುಗಳಾದ ಮಹದೇವಶೆಟ್ಟಿ ಹಾಗೂ ಮಗುವನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ. ಲಾರಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.