ಗುಂಡ್ಲುಪೇಟೆ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಮೇವು ನೀರಿನ ಕೊರತೆಯಿಂದ ಜಾನುವಾರುಗಳು ನಿತ್ರಾಣವಾಗಿರುವುದು. 
ಚಾಮರಾಜನಗರ

ಮೇವಿಲ್ಲದೆ ಜಾನುವಾರುಗಳು ನಿತ್ರಾಣ

ಮಾದೇಶ್ ತಿ.ನರಸೀಪುರ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಡಳಿತ ಗೋಶಾಲೆ ತೆರೆಯದ ಹಿನ್ನೆಲೆ
  • ಸಂಕಷ್ಟದಲ್ಲಿ ಹೈನುಗಾರಿಕೆ ಅವಲಂಬಿತರು

ಗುಂಡ್ಲುಪೇಟೆ:

ತೀವ್ರ ಬರಗಾಲ ಎದುರಾಗಿದ್ದರೂ ಜಿಲ್ಲಾಡಳಿತ ಗೋಶಾಲೆ ತೆರೆಯದ ಕಾರಣ ಜಾನುವಾರುಗಳು ನಿತ್ರಾಣವಾಗುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ.

ಕಾಡಂಚಿನ ಗ್ರಾಮಗಳಲ್ಲಿ ಮೇವಿನ ಜತೆಗೆ ಜಾನುವಾರುಗಳಿಗೆ ಕುಡಿಯುವ ನೀರೂ ದೊರಕದಂತಾಗಿದ್ದು ಜೀವನೋಪಾಯಕ್ಕೆ ಹೈನುಗಾರಿಕೆಯನ್ನೇ ಅವಲಂಬಿಸಿದ ಬಡಕುಟುಂಬಗಳು ಇದೀಗ ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ತಾಲೂಕಿನ ಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಬಂಡೀಪುರ ಕಾಡಂಚಿನಲ್ಲಿದ್ದರೂ ಜಾನುವಾರುಗಳನ್ನು ಕಾಡಿನೊಳಗೆ ಹೋಗಲು ಬಿಡದ ಪರಿಣಾಮ ಮೇವಿನ ಕೊರತೆ ಎದುರಾಗಿದೆ. ಸಮರ್ಪಕ ಮಳೆಬೀಳದ ಕಾರಣ ಕೆರೆಕಟ್ಟೆಗಳಲ್ಲಿ ನೀರಿಲ್ಲದೆ ಜಾನುವಾರುಗಳು ದಾಹದಿಂದ ಬಳಲುತ್ತಿವೆ. ಇತ್ತ ಬಫರ್ ವಲಯದ ಕೆರೆಗಳಲ್ಲಿಯೂ ನೀರಿಲ್ಲದೆ ಬತ್ತಿಹೋಗಿವೆ. ಹುಲಿಗಿನಮೊರಡಿ ವೆಂಕಟರಮಣಸ್ವಾಮಿ ಬೆಟ್ಟದ ತಪ್ಪಲಿಗೆ ಹೋಗುವ ಕಿಲಗೆರೆ ಗ್ರಾಮದಲ್ಲಿನ ಜಾನುವಾರುಗಳಿಗೆ ಸಮರ್ಪಕ ಮೇವು-ನೀರು ದೊರಕದೆ ದಿನೇ ದಿನೆ ಬಡಕಲಾಗುತ್ತಿವೆ. ಬೆಳಗ್ಗೆ ಮೇಯಲು ಹೋದ ಎಷ್ಟೋ ರಾಸುಗಳು ಮನೆಗಳಿಗೆ ಹಿಂದುರಗದೆ ಅಲ್ಲಿಯೇ ಸಾಯುತ್ತಿವೆ. ಕೂಡಲೇ ಪಶುವೈದ್ಯರನ್ನು ಕರೆಸಿ ಅವುಗಳಿಗೆ ಗ್ಲೂಕೋಸ್ ಹಾಗೂ ಔಷಧ ಕೊಡಿಸಿ ಮನೆಯಲ್ಲಿಯೇ ಹೆಚ್ಚಿನ ಮೇವು ನೀಡಬೇಕಾಗುತ್ತಿದೆ. ಇದರಿಂದ ನಿತ್ರಾಣವಾದ ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸುವುದು ಹೈನುಗಾರರಿಗೆ ದುಬಾರಿಯಾಗಿ ಪರಿಣಮಿಸುತ್ತಿದೆ.
ಕಳೆದ ವರ್ಷ ಸಮರ್ಪಕ ಮಳೆ ಬಿಳದೆ ಜಾನುವಾರುಗಳ ಮೇವಿಗೆ ಮೂಲವಾದ ಜೋಳ, ಮುಸುಕಿನಜೋಳ, ರಾಗಿ, ಹುರುಳಿ, ನೆಲಗಡಲೆ ಮುಂತಾದ ಬೆಳೆಗಳನ್ನು ಬೆಳೆಯಲು ಸಾಧ್ಯವಾಗಿಲ್ಲ. ಪರಿಣಾಮ ತಾಲೂಕಿನ ರೈತರು ಹಾಗೂ ಜಾನುವಾರು ಮಾಲೀಕರಲ್ಲಿ ಮೇವಿನ ಸಂಗ್ರಹ ಇಲ್ಲದಂತಾಗಿದೆ. ಸುತ್ತಮುತ್ತಲೂ ಗೋಮಾಳಗಳಲ್ಲಿ ಮೇವಿಲ್ಲದ ಪರಿಣಾಮ ಜಾನುವಾರುಗಳ ಮೇವಿಗೆ ತೀವ್ರ ತತ್ವಾರವುಂಟಾಗಿದೆ. ಇಷ್ಟಾದರೂ ಸರ್ಕಾರ ಹಾಗೂ ಜಿಲ್ಲಾಡಳಿತ ಜಾನುವಾರುಗಳಿಗೆ ಮೇವು ಪೂರೈಸಲು ಗೋಶಾಲೆ ಆರಂಭಿಸಿಲ್ಲ. ಅಲ್ಲದೆ ಜಾನುವಾರುಗಳಿಗೆ ಮೇವು ಪೂರೈಸಲು ಕ್ರಮಕೈಗೊಂಡಿಲ್ಲ. ಇದರಿಂದ ಜಾನುವಾರು ಮಾಲೀಕರು ದುಬಾರಿ ಬೆಲೆ ತೆತ್ತು ಮುಸುಕಿನ ಜೋಳದ ಕಡ್ಡಿ ಹಾಗೂ ಭತ್ತದ ಹುಲ್ಲುಗಳನ್ನು ಖರೀದಿಸುತ್ತಿದ್ದಾರೆ.
ನೆರೆರಾಜ್ಯಗಳಿಗೆ ಸಾಗಣೆ
ತಾಲೂಕಿನಲ್ಲಿ ಜಾನುವಾರು ಮೇವಿಗೆ ತತ್ವಾರವಾಗಿದ್ದರೂ ಮಧ್ಯವರ್ತಿಗಳು ಕೇರಳ ಹಾಗೂ ತಮಿಳುನಾಡಿಗೆ ಮೇವು ಸಾಗಿಸುವ ಮೂಲಕ ಹಣ ಮಾಡಿಕೊಳ್ಳುತ್ತಿದ್ದಾರೆ. ಮುಸುಕಿನ ಜೋಳದ ಕಡ್ಡಿ ಹಾಗೂ ಭತ್ತದ ಹುಲ್ಲಿನ ಬೆಲೆ ತೀವ್ರ ಪ್ರಮಾಣದಲ್ಲಿ ಏರಿಕೆಯಾಗಿದೆ. ಕ್ವಿಂಟಾಲ್‌ಗೆ 3.5 ರಿಂದ 4.5 ಸಾವಿರಕ್ಕೇರಿದ್ದರೆ ಹಿಂದೆ ಭತ್ತ ಬೆಳೆಯುವ ಪ್ರದೇಶದಲ್ಲಿ ಉಚಿತವಾಗಿ ಸಿಗುತ್ತಿದ್ದ ಹುಲ್ಲಿನ 30 ಕೆಜಿ ತೂಕದ ಪಿಂಡಿಗೆ 300 ರೂ.ಗೆ ಬಿಕರಿಯಾಗುತ್ತಿದೆ. ಸ್ಥಳೀಯವಾಗಿ ಮುಸುಕಿನ ಜೋಳದ 7 ಕಡ್ಡಿ ಕಂತೆಗೆ 50 ರೂ. ಹಾಗೂ 10 ಕಡ್ಡಿಯಿರುವ ಕಂತೆಗೆ 100 ರೂ.ನಂತೆ ಮಾರಾಟ ಮಾಡುವ ಮೂಲಕ ಜಾನುವಾರು ಮಾಲೀಕರನ್ನು ಶೋಷಣೆಗೆ ಒಳಪಡಿಸುತ್ತಿದ್ದಾರೆ. ನೆರೆರಾಜ್ಯಗಳಿಗೆ ಮೇವು ಸಾಗಂಎ ಮಾಡುವುದನ್ನು ತಡೆಗಟ್ಟಿದರೆ ಸ್ವಲ್ಪಮಟ್ಟಿಗೆ ಮೇವಿನ ಕೊರತೆ ನೀಗಿಸಲು ಸಾಧ್ಯವಾಗುತ್ತದೆ ಎಂದು ಆಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೀಜ ವಿತರಣೆ ಬಗ್ಗೆ ಚಿಂತನೆ
ನೀರಾವರಿ ಜಮೀನು ಹೊಂದಿರುವವರಿಗೆ ಮೇವು ಬೀಜ ಕೊಡುವ ಬಗ್ಗೆ ಚಿಂತಿಸಲಾಗಿದ್ದು ಇದರಿಂದ ಒಂದೆರಡು ತಿಂಗಳಲ್ಲಿ ಮೇವು ದೊರಕುವುದರಿಂದ ಮೇವಿನ ಕೊರತೆಯ ತೀವ್ರತೆ ತಗ್ಗಿಸುವ ಚಿಂತನೆ ನಡೆಸಲಾಗಿದೆ. ತಾಲೂಕಿನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಬಾಳೆ ಬೆಳೆಯಲಾಗುತ್ತಿದೆ. ಮೇವಿನ ಕೊರತೆ ನೀಗಿಸಲು ಜಾನುವಾರು ಮಾಲೀಕರು ಸ್ವಲ್ಪ ಪ್ರಮಾಣದಲ್ಲಿ ಬಾಳೆ ಕಂದು, ಎಲೆ, ನುಗ್ಗೆ, ಅಗಸೆ, ಟೀಕ್ ಎಲೆ, ಗೊಬ್ಬರದ ಗಿಡ, ಬಸವನಪಾದ ಸಸಿಗಳನ್ನು ಮೇವಿನ ರೂಪದಲ್ಲಿ ನೀಡುವಂತೆ ತಿಳಿ ಹೇಳಲಾಗುತ್ತಿದೆ.
ಈ ಬಾರಿ ಸಕಾಲದಲ್ಲಿ ಮಳೆಯಾಗಿದ್ದರೆ ಜಾನುವಾರುಗಳಿಗೆ ಸಮರ್ಪಕ ಮೇವು ದೊರೆಯುವುದರ ಜತೆಗೆ ಹಾಲು ಉತ್ಪಾದನೆಯೂ ಹೆಚ್ಚಳವಾಗುತ್ತಿತ್ತು. ಆದರೆ ಹೆಚ್ಚಿನ ಹಾಲು ಉತ್ಪಾದಕರು ಭೂರಹಿತರೇ ಆಗಿರುವುದರಿಂದ ಜಾನುವಾರುಗಳಿಗೆ ಮೇವು ದೊರಕದೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಆದ್ದರಿಂದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಗೋಶಾಲೆ ಆರಂಭಿಸುವ ಜತೆಗೆ ಜಾನುವಾರುಗಳಿಗೆ ಮೇವಿನ ಪೂರೈಕೆಗೆ ಕ್ರಮಕೈಗೊಳ್ಳಬೇಕು.
ಎಚ್.ಎಸ್.ನಂಜುಂಡಪ್ರಸಾದ್ ನಿರ್ದೇಶಕ, ಚಾಮುಲ್
ಹವಾಮಾನ ಇಲಾಖೆಯು ಸೆಪ್ಟೆಂಬರ್, ಅಕ್ಟೋಬರ್ ದಿನಗಳಲ್ಲಿ ಮಳೆ ಕೊರತೆ ಹೆಚ್ಚಾಗಿ ಬರಪರಿಸ್ಥಿತಿ ಉಲ್ಬಣಿಸುವ ಮುನ್ಸೂಚನೆ ನೀಡಿರುವುದು ಆತಂಕ ಮೂಡಿಸಿದೆ. ಮುಂದಿನ 15 ದಿನಗಳಲ್ಲಿ ಬಂಡೀಪುರ ಭಾಗದ ಸುಮಾರು 45 ಗ್ರಾಮಗಳಲ್ಲಿ ಮೇವಿನ ಕೊರತೆ ಮತ್ತಷ್ಟು ಹೆಚ್ಚಾಗುವ ಸಂಭವವಿದೆ. ನೆರೆರಾಜ್ಯಗಳಿಗೆ ಪ್ರತಿ ದಿನವೂ ಹತ್ತಾರು ಲೋಡ್‌ಗಳಷ್ಟು ಮೇವು ಸಾಗಿಸಲಾಗುತ್ತಿದ್ದು ಇದನ್ನು ತಡೆಗಟ್ಟುವಂತೆ ಜಿಲ್ಲಾಡಳಿತಕ್ಕೆ ವರದಿ ನೀಡಲಾಗಿದೆ. ತಾಲೂಕಿನಲ್ಲಿ ಬರ ವೀಕ್ಷಣೆಗೆ ಬಂದಿದ್ದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮೇವಿನ ಕೊರತೆಯಾಗಿರುವ ಬಗ್ಗೆ ಮನವರಿಕೆ ಮಾಡಲಾಗಿದೆ.
ಡಾ.ಮಾದೇಶ್ ಸಹಾಯಕ ನಿರ್ದೇಶಕ, ಪಶುಪಾಲನಾ ಇಲಾಖೆ