ಕಳೆದ ವರ್ಷ ಜಿಲ್ಲಾ ದಸರಾ ಆಯೋಜನೆ ಮಾಡುವುದಿಲ್ಲವೆಂದಿದ್ದ ಆಗಿನ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಖಂಡಿಸಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ ವತಿಯಿಂದ ಪ್ರತಿಭಟನೆ ನಡೆಸಲಾಗಿತ್ತು.
- ಕಳೆದ ವರ್ಷ ಆಚರಣೆ ಕೈಬಿಟ್ಟಿದ್ದ ರಾಜ್ಯಸರ್ಕಾರ
- ಸಿಡಿದೆದ್ದು ಸಾರ್ವಜನಿಕರೇ ಆಯೋಜಿಸಿದ್ದ ಜನತಾ ದಸರಾ
- ಈ ಸಲ ಚಾ.ನಗರದಲ್ಲಿ ಜಿಲ್ಲಾಡಳಿತದಿಂದಲೇ ನಡೆಯುವುದೇ ನಾಡಹಬ್ಬ
ಚಾಮರಾಜನಗರ: ರಾಜ್ಯ ಸರ್ಕಾರ ಈ ಬಾರಿ ಚಾಮರಾಜನಗರ ದಸರಾ ಆಯೋಜನೆ ವಿಚಾರದಲ್ಲಿ ಕಳೆದ ವರ್ಷ ಎದುರಿಸಿದ್ದ ಮುಜುಗರದಿಂದ ಪಾಗುರಾವುದೇ..?
ಮೈಸೂರು ಅರಸರ ಆಳ್ವಿಕೆಗೆ ಒಳಪಟ್ಟಿದ್ದ ಜಿಲ್ಲೆ ಚಾಮರಾಜನಗರ. ಚಾಮರಾಜ ಒಡೆಯರ್ ಜನಿಸಿದ ಸ್ಥಳ ಮತ್ತು ಇದರ ನೆನಪಿಗಾಗಿ ಇವರ ಪುತ್ರ ಮುಮ್ಮಡಿ ಕೃಷ್ಣರಾಜ ಒಡೆಯರ್ ಶ್ರೀಚಾಮರಾಜೇಶ್ವರ ದೇಗುಲ ಸ್ಥಾಪಿಸಿರುವ ನೆಲೆಬೀಡಾಗಿದೆ. ಜಿಲ್ಲೆಯಲ್ಲಿ ಹಿಂದಿನ ವರ್ಷಗಳಲ್ಲಿ ರಾಜ್ಯ ಸರ್ಕಾರದಿಂದ ದಸರಾ ಆಯೋಜನೆ ಮಾಡಲಾಗುತ್ತಿತ್ತು. ಆದರೆ ಕಳೆದ ವರ್ಷ ಏಕಾಏಕಿ ಆಚರಣೆಯನ್ನು ಕೈಬಿಡಲಾಗಿತು.
ಇದರಿಂದ ಆಕ್ರೋಶಗೊಂಡ ಜಿಲ್ಲೆಯ ಜನತೆ ಸ್ವತಃ ತಾವೇ ದಸರಾ ಆಯೋಜನೆ ಮಾಡಿ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದರು. ‘ಚಾಮರಾಜನಗರದಲ್ಲಿ ದಸರಾ ಮಾಡಲ್ಲ’ವೆಂದಿದ್ದ ಅಂದಿನ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತಪಡಿಸಿದ್ದರು. ದಸರಾ ಆಯೋಜನೆ ಮಾಡಬೇಕೆಂದು ಒತ್ತಾಯಿಸಿ ಮನವಿಗಳನ್ನು ಸಲ್ಲಿಸಿದ್ದರು. ಬೀದಿಗಿಳಿದು ಪ್ರತಿಭಟನೆಗಳನ್ನು ಮಾಡಿದರು. ಇಷ್ಟಾದರೂ ಸರ್ಕಾರ ದಸರಾ ಆಯೋಜನೆ ಮಾಡದೆ ಇದ್ದಾಗ ಜಿಲ್ಲಾ ಚಿತ್ರ ಕಲಾವಿದರ ಸಂಘದಿಂದ ಚಿತ್ರ ದಸರಾ ಆಯೋಜನೆ ಮಾಡಲಾಯಿತು. ಜಿಲ್ಲಾ ಲೇಖಕರ ಸಂಘದವರು ದಸರಾ ಕವಿಗೋಷ್ಠಿ ಹಮ್ಮಿಕೊಂಡರು.
ಜಿಲ್ಲಾ ಯುವ ಕಲಾವಿದರ ಬಳಗದಿಂದ ದಸರಾ ಮಹೋತ್ಸವ ಆಚರಣೆ ನಡೆಯಿತು. ಅಖಿಲ ಕರ್ನಾಟಕ ಕನ್ನಡ ಮಹಾಸಭಾದಿಂದಲೂ ದಸರಾ ಮಹೋತ್ಸವ ಆಯೋಜನೆಯಾಗಿತ್ತು. ಧಾರ್ಮಿಕ ಪೂಜಾ ಕಾರ್ಯಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ಜಿಲ್ಲೆಯಲ್ಲಿ ದಸರಾ ವಾತಾವರಣವನ್ನೇ ಸೃಷ್ಟಿ ಮಾಡಿದ್ದವು. ಇದನ್ನೆಲ್ಲ ಮಾಡಬೇಕಿದ್ದ ಜಿಲ್ಲಾಡಳಿತ ಜನರೇ ಮಾಡಿದ ಜನತಾ ದಸರಾವನ್ನು ಕಣ್ಣರಳಿಸಿ ಮೌನವಾಗಿ ನೋಡುತ್ತಾ ಕುಳಿತಿತ್ತು.
ಕಳೆದ ಸಲದಂತೆ ಈ ಬಾರಿ ಆಗಬಾರದು ಎಂದರೆ ಮತ್ತು ಮೈಸೂರು ದಸರಾದೊಂದಿಗೆ ಭಾವನಾತ್ಮಕ ನಂಟನ್ನು ಹೊಂದಿರುವ ಚಾಮರಾಜನಗರ ಜಿಲ್ಲೆಯಲ್ಲೂ ನಾಡಹಬ್ಬ ಆಚರಣೆ ಮಾಡಲು ರಾಜ್ಯ ಸರ್ಕಾರ ಮನಸ್ಸು ಮಾಡಬೇಕು. ಈ ಮೂಲಕ ಜನಾಪೇಕ್ಷೆಗೆ ಬೆಲೆ ಕೊಡಬೇಕಾಗಿದೆ.
ಮೈಸೂರು ಜಿಲ್ಲೆಯ ಭಾಗವಾಗಿದ್ದ ಚಾಮರಾಜನಗರ 1997ರ ಆ.15ರಂದು ಪತ್ಯೇಕ ಜಿಲ್ಲೆಯಾಗಿ ಅಸ್ವಿತ್ವಕ್ಕೆ ಬಂತು. 2007ರಿಂದ ಗ್ರಾಮೀಣ ದಸರಾ ಹೆಸರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿತ್ತು. ಬಳಿಕ 2013ರಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್.ಮಹದೇವ ಪ್ರಸಾದ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರ ಕಾಳಜಿಯ ಲವಾಗಿ ಚಾಮರಾಜನಗರ ದಸರಾ ಹೆಸರಿನಲ್ಲಿ ಉತ್ಸವಗಳು ಆಯೋಜನೆಗೊಂಡವು. 2015ರ ಪ್ರವಾಹ ಮತ್ತು ಕೋವಿಡ್ ಸಂದರ್ಭದಲ್ಲಿ ಬಿಟ್ಟರೆ ಉಳಿದಂತೆ ನಿರಂತರವಾಗಿ ನಡೆಯುತ್ತಾ ಬಂದಿದ್ದ ಜಿಲ್ಲಾ ದಸರಾವನ್ನು ಕಳೆದ ವರ್ಷ ಕೈಬಿಡಲಾಗಿತ್ತು. ಜಿಲ್ಲೆಯಲ್ಲಿ ದಸರಾ ಆರಂಭಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಚಾಮರಾಜನಗರದಲ್ಲಿ ದಸರಾ ಮಾಡಲ್ಲ ಎಂದು ಹೇಳಿ ಬೇಸರ ಮೂಡಿಸಿದರು. ಪ್ರಸ್ತುತ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ವಿಪತ್ತು ನಿರ್ವಹಣೆ ಸಂಬಂಧ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾರೆ. ಇವರಾದರೂ ಜಿಲ್ಲಾ ದಸರಾ ಆಯೋಜನೆಗೆ ಮಾಡಿಸುವಲ್ಲಿ ಕಾರಣಕರ್ತರಾಗುತ್ತಾರಾ ಕಾದುನೋಡಬೇಕಾಗಿದೆ.
ಸಿದ್ದು ಹೇಳಿಕೆಗೆ ವ್ಯಕ್ತವಾಗಿದ್ದ ಆಕ್ರೋಶ:
‘ಚಾಮರಾಜನಗರದಲ್ಲಿ ಯಾವಾಗಲಾದರೂ ದಸರಾ ನಡೆಯುತ್ತಿತ್ತಾ, ನಾವು ಅಲ್ಲಿ ದಸರಾ ಮಾಡಲ್ಲ, ದಸರಾ ನಡೆಯೋದು ಮೈಸೂರಿನಲ್ಲಿ. ಚಾಮರಾಜನಗರದಲ್ಲಿ ಅರಸರು ಇದ್ದರಾ, ನಾನು ಜಿಲ್ಲಾ ಮಂತ್ರಿಯಾಗಿದ್ದಾಗ ದಸರಾ ಮಾಡಿಸಿರಲಿಲ್ಲ. ಈ ಸಲ ಒತ್ತಾಯ ಮಾಡಬೇಡಿ. ಚಾಮರಾಜನಗರದವರೆಲ್ಲ ಮೈಸೂರು ದಸರಾಗೆ ಬನ್ನಿ’... ಇದು ಕಳೆದ ವರ್ಷದ ಜಿಲ್ಲಾ ದಸರಾ ಕುರಿತು ನಿರ್ಗಮಿತ ಸಿಎಂ ಸಿದ್ದರಾಮಯ್ಯ ಹೇಳಿದ್ದ ಮಾತುಗಳು. 2013ರಲ್ಲಿ ಸಿದ್ದರಾಮಯ್ಯ ಸಿಎಂ ಆದಾಗ ಶುರು ಮಾಡಿದ ಜಿಲ್ಲಾ ದಸರಾ ಬಗ್ಗೆ ಅವರೇ ತದ್ವಿರುದ್ಧದ ಮಾತುಗಳನ್ನಾಡಿ ಬಿಟ್ಟರು. ಈ ಹೇಳಿಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿ ಭಾರಿ ವಿರೋಧ ವ್ಯಕ್ತವಾಗಿತ್ತು.
ಜಿಲ್ಲಾ ದಸರಾ ಕೈಬಿಟ್ಟ ಬಳಿಕ ಸರ್ಕಾರದಿಂದ ಮಲೆ ಮಹದೇಶ್ವರ ಬೆಟ್ಟದಲ್ಲಿ ರಾಜ್ಯಮಟ್ಟದ ಜಾನಪದ ಉತ್ಸವ ಮಾಡಲಾಗುತ್ತದೆ. ಈ ವೇಳೆ ಜಿಲ್ಲೆಯ ಕಲಾವಿದರಿಗೆ ವೇದಿಕೆ ನೀಡಲಾಗುತ್ತದೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದ್ದರು. ಆದರೆ ಸರ್ಕಾರದಲ್ಲಿ ಆದ ಬೆಳವಣಿಗೆಗಳ ನಂತರ ಉತ್ಸವ ಆಯೋಜನೆಯಾಗಲೇ ಇಲ್ಲ.
ಸಿಎಂ ಡಿ.ಕೆ.ಶಿವಕುಮಾರ್ ಮೈಸೂರು ದಸರಾವನ್ನು ವಿಜೃಂಭಣೆಯಿಂದ ಆಚರಣೆ ಮಾಡುವುದಾಗಿ ತಿಳಿಸಿದ್ದಾರೆ. ಚಾಮರಾಜನಗರ ದಸರಾಗೂ ಅನುದಾನ ಕೊಟ್ಟು ಸಂಭ್ರಮದಿಂದ ಆಚರಣೆ ಮಾಡಲು ಅವಕಾಶ ಮಾಡಿಕೊಡಬೇಕು.
ಸಿ.ಎನ್.ಸಂಪತ್‌ಕುಮಾರ್, ಗೌರವಾಧ್ಯಕ್ಷ, ಜಿಲ್ಲಾ ಚಿತ್ರ ಕಲಾವಿದರ ಸಂಘ, ಚಾಮರಾಜನಗರ
ಈ ಸಲ ರಾಜ್ಯ ಸರ್ಕಾರದಿಂದ ಜಿಲ್ಲಾ ದಸರಾ ಮಾಡದೆ ಇದ್ದರೆ ಅನಿರ್ದಿಷ್ಟಾವಧಿ ಧರಣಿ ಮಾಡಲಾಗುವುದು. ಮುಂಬರುವ ಚುನಾವಣೆಯಲ್ಲಿ ಕಲಾವಿದರೆಲ್ಲ ಒಗ್ಗೂಡಿ ಮತದಾನ ಬಹಿಷ್ಕಾರ ಮಾಡಲಾಗುತ್ತದೆ.
ಶಿವಶಂಕರ್ ಚಟ್ಟು, ಖಜಾಂಚಿ, ಆತ್ಮೀಯ ರಂಗ ಪ್ರಯೋಗಾಲಯ, ಚಾಮರಾಜನಗರ
ಸಿಎಂ ಡಿ.ಕೆ.ಶಿವಕುಮಾರ್ ಅವರೊಂದಿಗೆ ಮಾತನಾಡಿದ್ದೇನೆ. ಚಾಮರಾಜನಗರ ಜಾನಪದ ಕಲೆಗಳ ತವರೂರು. ಶ್ರೀಚಾಮರಾಜ ಒಡೆಯರ್ ಜನಿಸಿದ ಸ್ಥಳ. ಹಿಂದಿನ ವರ್ಷಗಳಲ್ಲಿ ಅದ್ಧೂರಿಯಾಗಿ ಜಿಲ್ಲಾ ದಸರಾ ಆಯೋಜನೆ ಮಾಡುತ್ತಿದ್ದೇವು. ಕಳೆದ ವರ್ಷ ದಸರಾ ಮಾಡಲು ಅವಕಾಶ ಕೊಟ್ಟಿಲ್ಲ. ಈ ಸಲ ಆಯೋಜನೆ ಮಾಡಬೇಕೆಂದು ಕೇಳಿಕೊಂಡಿದ್ದೇನೆ. ಅವರು ಇದರ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ಸಿ.ಪುಟ್ಟರಂಗಶೆಟ್ಟಿ, ಶಾಸಕ, ಚಾಮರಾಜನಗರ
ಚಾಮರಾಜನಗರ ದಸರಾ ಮಾಡದಿದ್ದರೆ ಜಿಲ್ಲೆಯ ಭಾವನೆಗೆ ಧಕ್ಕೆಯಾಗುತ್ತದೆ. ರಾಜ್ಯ ಸರ್ಕಾರ ಈ ಸಲವಾದರೂ ದಸರಾ ಆಯೋಜನೆ ಮಾಡಲಿ. ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ತಂದು ನಾಡಹಬ್ಬ ಆಚರಣೆ ಮಾಡಿಸಬೇಕು. ಇಲ್ಲದಿದ್ದರೆ ನಾವಂತೂ ಜಿಲ್ಲಾ ದಸರಾ ನಿಲ್ಲುವುದಕ್ಕೆ ಬಿಡುವುದಿಲ್ಲ. ಜನರೆಲ್ಲ ಒಟ್ಟುಗೂಡಿ ತೀರ್ಮಾನ ಕೈಗೊಂಡು ದಸರಾ ಮಾಡಬೇಕಾಗುತ್ತದೆ.
ಚಾ.ರಂ.ಶ್ರೀನಿವಾಸಗೌಡ, ಅಧ್ಯಕ್ಷ, ಅಖಿಲ ಕರ್ನಾಟಕ ಕನ್ನಡ ಮಹಾಸಭಾ, ಚಾಮರಾಜನಗರ