Elephaants  
ಚಾಮರಾಜನಗರ

ಹಲಸು, ಮಾವಿಗಾಗಿ ಲಗ್ಗೆ ಇಟ್ಟ ಕಾಡಾನೆಗಳು

ಹನೂರು: ತಾಲೂಕಿನ ಇಂಡಿಗನತ್ತ ಗ್ರಾಮ ಸಮೀಪದ ಅರಣ್ಯ ಪ್ರದೇಶದಲ್ಲಿ ಚಿರತೆ ಕಾರ್ಯಾಚರಣೆ ನಡೆಯುತ್ತಿರುವ ಬೆನ್ನಲ್ಲೇ ಮಂಗಳವಾರ ರಾತ್ರಿ ಕಾಡಾನೆಗಳು ಹಲಸು ಹಾಗೂ ಮಾವಿಗಾಗಿ ಗ್ರಾಮದತ್ತ ಲಗ್ಗೆ ಇಟ್ಟಿದ್ದು, ಗ್ರಾಮಸ್ಥರಲ್ಲಿ ಭಯಭೀತಿಯನ್ನು ಉಂಟು ಮಾಡಿದೆ.
ಗ್ರಾಮ ಸಮೀಪದ ಅರಣ್ಯ ಪ್ರದೇಶದಲ್ಲಿ ಕಾಲ್ನಡಿಗೆ ಮೂಲಕ ನಾಗಮಲೆಗೆ ತೆರಳುತ್ತಿದ್ದ ಬಾಲಕನ ಮೇಲೆ ದಾಳಿ ನಡೆಸಿ ಸಾಯಿಸಿದ್ದ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಳೆದ 4 ದಿನಗಳಿಂದ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ. ಚಿರತೆ ಭಯ ಗ್ರಾಮಸ್ಥರಲ್ಲೂ ಮನೆ ಮಾಡಿದೆ. ಹೀಗಿರುವಾಗ ರಾತ್ರಿ ಗ್ರಾಮದ ಸಿದ್ದರಾಜು ಎಂಬುವರಿಗೆ ಮನೆ ಬಳಿಯಿರುವ ಹಲಸಿನ ಮರಕ್ಕೆ ಕಾಡಾನೆಗಳು ಆಗಮಿಸಿವೆ. ಅಲ್ಲದೆ ಮಾವಿನ ಮರವಿರುವೆಡೆ ಸಂಚರಿಸಿವೆ. ಇದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದು, ಕಾಡಾನೆಗಳು ಗ್ರಾಮದತ್ತ ಆಗಮಿಸದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.