ಕೊಳ್ಳೇಗಾಲ ತಾಲೂಕಿನ ಸುಪ್ರಸಿದ್ಧ ಭರಚುಕ್ಕಿ ಜಲಪಾತ ಕಳೆಗಟ್ಟಿರುವುದು. 
ಚಾಮರಾಜನಗರ

ಕಳೆಗಟ್ಟಿದ ಭರಚುಕ್ಕಿ ಜಲಪಾತ

ಎಂ.ರವಿ

ಕೊಳ್ಳೇಗಾಲ:

ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಚುರುಕುಗೊಂಡಿದ್ದು ಅಣೆಕಟ್ಟುಗಳಿಂದ ನದಿಗೆ ಸಾವಿರಾರು ಕ್ಯೂಸೆಕ್ ನೀರು ಹರಿಬಿಟ್ಟಿರುವ ಹಿನ್ನೆಲೆಯಲ್ಲಿ ಭರಚುಕ್ಕಿ ಜಲಪಾತ ಕಳೆಕಟ್ಟಿದೆ.

ಪ್ರತಿ ವರ್ಷ ಜೂನ್, ಜುಲೈನಲ್ಲಿ ಮುಂಗಾರು ಮಳೆ ಅಬ್ಬರಿಸಿ ಕಾವೇರಿ ಮೈದುಂಬಿ ಹರಿದು ಭರಚುಕ್ಕಿ ಬೋರ್ಗರೆದು ಎಲ್ಲರನ್ನು ಆಕರ್ಷಿಸುವುದು ವಾಡಿಕೆಯಾಗಿದೆ. ಈ ಬಾರಿ ಮುಂಗಾರು ಅಭಾವದಿಂದ ಜೂನ್, ಜುಲೈ ತಿಂಗಳಲ್ಲಿ ಭರಚುಕ್ಕಿ ಭಣಗುಡುತ್ತಿತ್ತು. ಆದರೀಗ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದ್ದು ಕೆಆರ್‌ಎಸ್ ಮತ್ತು ಕಬಿನಿ ಅಣೆಕಟ್ಟಿನಿಂದ ನೀರು ಹರಿಸಲಾಗಿದ್ದು ಕಾವೇರಿ ನದಿಯಲ್ಲಿ ನೀರು ಹೆಚ್ಚಾಗಿ ಭರಚುಕ್ಕಿ ಬೋರ್ಗರೆಯಲು ಆರಂಭಿಸಿದೆ.
ಇಲ್ಲಿಯವರೆಗೆ ನೀರಿಲ್ಲದ ಕಾರಣ ಮಳೆಗಾಲ ಇದ್ದರೂ ಪ್ರವಾಸಿಗರು ಇತ್ತ ಸುಳಿಯುತ್ತಿರಲಿಲ್ಲ. ಆದರೀಗ ಭರಚುಕ್ಕಿ ಧುಮ್ಮಿಕ್ಕುತ್ತಿದ್ದು ಈ ವಾರಾಂತ್ಯದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಬಹುದು. ಸ್ಥಳೀಯ ಸಣ್ಣಪುಟ್ಟ ವ್ಯಾಪಾರಿಗಳ ಮೊಗದಲ್ಲಿ ಮಂದಹಾಸ ಮೂಡಿದ್ದು ಭರಚುಕ್ಕಿಯ ರುದ್ರರಮಣೀಯ ದೃಶ್ಯ ನೋಡಲು ನಾನಾ ಕಡೆಗಳಿಂದ ಪ್ರವಾಸಿಗರು ಆಗಮಿಸುತ್ತಿರುವುದರಿಂದ ಸ್ಥಳೀಯರ ವ್ಯಾಪಾರವು ಚೇತರಿಕೆ ಕಾಣಲಿದೆ.