ಗುಂಡ್ಲುಪೇಟೆ ಪಟ್ಟಣದಲ್ಲಿ ಆಯೊಜಿಸಿದ್ದ ನಾನಾ ಅಭಿವೃದ್ಧಿ ಕಾರ್ಯಗಳಗೆಚಾಲನೆ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಮಾತನಾಡಿದರು. ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ, ಎಚ್.ಸಿ.ಮಹದೇವಪ್ಪ, ಡಾ.ಗೀತಾ ಮಹದೇವಪ್ರಸಾದ್, ಗಣೇಶ ಪ್ರಸಾದ್ ಇದ್ದರು.
- *ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ
- ಸಂತ್ರಸ್ತ ಕುಟುಂಬಗಳಿಗೆ ಉದ್ಯೋಗ ಭಾಗ್ಯ
ಗುಂಡ್ಲುಪೇಟೆ: ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ 33 ಸಂತ್ರಸ್ತ ಕುಟುಂಬಗಳ 25 ಫಲಾನುಭವಿಗಳಿಗೆ ಸರ್ಕಾರಿ ಉದ್ಯೋಗ ಕೊಡಿಸುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 110 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸೇರಿದಂತೆ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಕರೊನಾ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ ಆಕ್ಸಿಜನ್ ದುರಂತದಲ್ಲಿ 33 ಜನರು ಮೃತಪಟ್ಟಿದ್ದರು. ಜೀವಕ್ಕಿಂತ ಮಿಗಿಲಾದದ್ದು ನೆಮ್ಮದಿ, ನೆಮ್ಮದಿಗಿಂತ ಹೆಚ್ಚಿನದು ನಂಬಿಕೆಯಾಗಿದೆ. ಸರ್ಕಾರ ಕೇವಲ 3 ಜನರ ಸಾವು ಎಂದಿತ್ತು. ಆದರೆ ಸತ್ಯಾಂಶವನ್ನು ಪತ್ತೆಹಚ್ಚಿದ ಕಾಂಗ್ರೆಸ್ ಮೃತಪಟ್ಟವರ ಕುಟುಂಬಕ್ಕೆ ನೆರವು ನೀಡಿ, ಅವರ ಕುಟುಂಬದ ಜತೆ ನಿಲ್ಲುವ ಮೂಲಕ ಸಂತ್ರಸ್ತರ ಕುಟುಂಬದವರಿಗೆ ಅದೇ ಆಸ್ಪತ್ರೆಯಲ್ಲಿ ಸರ್ಕಾರಿ ಉದ್ಯೋಗ ಕೊಡಿಸಿದೆ. ದಾನ ಮಾಡಿದ ಕೈನಿಂದ 25 ಕುಟುಂಬಗಳಿಗೆ ಉದ್ಯೋಗ ದೊರಕಿದ್ದು, 110 ಕೆರೆಗಳಿಗೆ ನೀರು ತುಂಬಿಸಲು ಅನುದಾನ ನೀಡಿದೆ. ನಾನು ಮತ್ತು ಸಿದ್ದರಾಮಯ್ಯ ನುಡಿದಂತೆ ನಡೆದಿದ್ದೇವೆ ಎಂದರು.
ಬಿಜೆಪಿ ಕಾಲದಲ್ಲಿ ಬೊಗಳೆ ಬಿಡುವುದು ಬಿಟ್ಟರೆ ಬೇರೇನೂ ಸಾಧನೆಯಾಗಿಲ್ಲ. ಯಡಿಯೂರಪ್ಪ ಒಂದು ಸೀರೆ ಮತ್ತು ಒಂದು ಸೈಕಲ್ ಬಿಟ್ಟರೆ ಬೇರೆ ಏನನ್ನೂ ಕೊಡಲಿಲ್ಲ. ಬೆಲೆ ಏರಿಕೆಯಿಂದ ಬಸವಳಿದಿದ್ದ ಮಹಿಳೆಯರಿಗೆ ಕಾಂಗ್ರೆಸ್‌ನ 5 ಗ್ಯಾರಂಟಿ ಯೋಜನೆಗಳಿಂದ ಶಕ್ತಿ ಬಂದಿದೆ. ಇಲ್ಲಿನ ಮಾದರಿಯನ್ನು ವಿರೋಧಪಕ್ಷಗಳು ಬೇರೆ ಬೇರೆ ರಾಜ್ಯಗಳಲ್ಲಿ ಘೋಷಿಸುವಂತಾಗಿದೆ. ಸದ್ಯ ನಾವು 6 ನೇ ಗ್ಯಾರಂಟಿಯಲ್ಲಿ ಭೂರಹಿತರಿಗೆ ಜಮೀನು ಹಾಗೂ 7 ನೇ ಗ್ಯಾರಂಟಿಯಲ್ಲಿ ನೀರು ಕೊಡುವುದು ಹಾಗೂ ಕೆರೆಗಳನ್ನು ತುಂಬಿಸುವುದಾಗಿದೆ. ಮೇಕೆದಾಟು ಯೋಜನೆಗೆ ನ್ಯಾಯಾಲದಿಂದ ನ್ಯಾಯ ಸಿಕ್ಕಿದ್ದು ಕೇಂದ್ರ ಸರ್ಕಾರದ ಅನುಮತಿ ಮಾತ್ರ ಬೇಕಾಗಿದೆ. ಎಚ್.ಡಿ.ಕುಮಾರಸ್ವಾಮಿ ಕೇವಲ ಟೀಕೆ ಮಾಡುವುದು ಬಿಟ್ಟು ಪರ್ಮಿಷನ್ ಕೊಡಿಸಲಿ ಅಷ್ಟೇ ಎಂದರು.
ಜಿಲ್ಲೆಯ ಅಭಿವೃದ್ಧಿಗೆ ಮಿಡಿಯುತ್ತಿದ್ದ ದಿ.ಮಹದೇವಪ್ರಸಾದ್ ಕ್ಷೇತ್ರದ ಜನತೆಯ ಹೃದಯ ಗೆದ್ದಿದ್ದರು. ಅವರ ನಿಧನದ ನಂತರ ನಡೆದ ಉಪ ಚುನಾವಣೆಯಲ್ಲಿ ಅವರ ಪತ್ನಿ, ನಂತರ ಅವರ ಮಗ ಗಣೇಶ್ ಪ್ರಸಾದ್ ಅವರನ್ನು ಗೆಲ್ಲಿಸಿದ್ದೀರಿ. ಮಹದೇವಪ್ರಸಾದ್ ಸ್ಥಾನ ತುಂಬುವ ಶಕ್ತಿಯಿರುವ ಗಣೇಶ್ ಪ್ರಸಾದ್ ಕೇಳಿದ ಕೂಡಲೇ 110 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 475 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ. ಗಣೇಶ್ ಪ್ರಸಾದ್ ನಿಮ್ಮ ಆಸ್ತಿಯಾಗಿದ್ದು 2028ಕ್ಕೂ ಗೆಲ್ಲಿಸುವ ಮೂಲಕ ನಿಮ್ಮದೇ ಸರ್ಕಾರ ರಚಿಸಿ ಎಂದು ಹೇಳಿದರು.