ಕೊಪ್ಪ ಗ್ರಾಮದಲ್ಲಿ ಜಾನುವಾರುಗಳ ತೊಟ್ಟಿಗೆ ನೀರು ಪೂರೈಕೆಯಾಗುತ್ತಿರುವುದು.
ಹನೂರು: ತಾಲೂಕಿನ ಕೊಪ್ಪ ಗ್ರಾಮದಲ್ಲಿನ ಜಾನುವಾರುಗಳ ತೊಟ್ಟಿಗೆ ಗ್ರಾಮ ಪಂಚಾಯಿತಿ ವತಿಯಿಂದ ಟ್ಯಾಂಕರ್ ಮೂಲಕ ಗುರುವಾರ ಕುಡಿಯುವ ನೀರು ಪೂರೈಕೆ ಮಾಡಲಾಯಿತು.
ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದನ, ಕರುಗಳಿದ್ದು, ಕುಡಿವ ನೀರಿಗಾಗಿ 3 ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಆದರೆ ನೀರು ಪೂರೈಕೆ ಮಾಡಿರಲಿಲ್ಲ. ಇದೀಗ ಬೇಸಿಗೆ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಕುಡಿವ ನೀರಿನ ಸಮಸ್ಯೆ ತಲೆದೋರಿತ್ತು. ತೊಟ್ಟಿಗಳಿಗೆ ನೀರು ಪೂರೈಸುವಂತೆ ಗ್ರಾಪಂ ಪಿಡಿಒ ಗಂಗಾಧರ್ ಅವರಿಗೆ ರೈತರು ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮವಾಗಿರಲಿಲ್ಲ. ಬಳಿಕ ಮಾ.28ರಂದು ತಾಲೂಕು ಪಂಚಾಯಿತಿ ಇಒ ಉಮೇಶ್ ಅವರಿಗೆ ಮನವಿ ಸಲ್ಲಿಸಲಾಗಿತ್ತು.
ಬಳಿಕ ಗ್ರಾಮಕ್ಕೆ ಆಗಮಿಸಿದ್ದ ಇಒ ಉಮೇಶ್ ಪರಿಶೀಲನೆ ನಡೆಸಿ ರೈತರಿಂದ ಮಾಹಿತಿ ಪಡೆದು ಒಂದು ತೊಟ್ಟಿಗೆ ನೀರು ತುಂಬಿಸಿದ್ದರು. ಇನ್ನೆರಡು ತೊಟ್ಟಿಗಳಿಗೆ ನೀರು ತುಂಬಿಸುವಂತೆ ಪಿಡಿಒಗೆ ಸೂಚಿಸಿದ್ದರೂ ನಿರ್ಲಕ್ಷ್ಯ ವಹಿಸಲಾಗಿತ್ತು. ಗ್ರಾಮದಲ್ಲಿ ಜಾನುವಾರುಗಳು ಕುಡಿಯುವ ನೀರಿಗಾಗಿ ಪರಿತಪಿಸುತ್ತಿರುವ ದೃಶ್ಯವನ್ನು ರೈತರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಜಿಪಂ ಸಿಇಒ ಅವರ ಗಮನಕ್ಕೂ ತಂದಿದ್ದರು. ಜತೆಗೆ ಬುಧವಾರ ಹನೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತರು ತಾಪಂ ಇಒ ಉಮೇಶ್ ಅವರಿಗೆ ನೀರು ತುಂಬಿಸುವಂತೆ ತೀವ್ರವಾಗಿ ಒತ್ತಾಯಿಸಿದ್ದರು.
ಈ ಬಗ್ಗೆ ಅಗತ್ಯ ಕ್ರಮವಹಿಸಿದ ಇಒ, ಗ್ರಾಪಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇದರ ಪರಿಣಾಮ ಗುರುವಾರ ಟ್ಯಾಂಕರ್‌ಗಳ ಮೂಲಕ ತೊಟ್ಟಿಗಳಿಗೆ ನೀರು ಪೂರೈಕೆ ಮಾಡಲಾಯಿತು. ರೈತರು ಕೊಂಚ ನಿಟ್ಟುಸಿರು ಬಿಟ್ಟಂತಾಗಿದ್ದು, ಜಾನುವಾರುಗಳಿಗೆ ಕುಡಿವ ನೀರಿಗೆ ಸಮಸ್ಯೆಯಾಗದಂತೆ ನಿರಂತರವಾಗಿ ನೀರು ಪೂರೈಸುವಂತೆ ಒತ್ತಾಯಿಸಿದ್ದಾರೆ.