ತಾಲೂಕಿನ ಮಲ್ಲದೇವನಹಳ್ಳಿಯಿಂದ ಕುನ್ನಗಾಟದ ಕೆರೆಗೆ ನಾಲೆ ಮೂಲಕ ನೀರು ಹರಿಯಲು ಬಿಟ್ಟಿರುವುದು
- ಮಲ್ಲದೇವನಹಳ್ಳಿ ಎಲ್ಲೆಯ ರೈತರಿಗೆ ಸಮಾಧಾನ
- ಬೆಳೆ ಹಾನಿ ಮಾಡುತ್ತಿದ್ದ ಜಮೀನುಗಳಿಗೆ ನುಗ್ಗುತ್ತಿದ್ದ ನೀರು
ಚಾಮರಾಜನಗರ: ತಾಲೂಕಿನ ಮಲ್ಲದೇವನಹಳ್ಳಿ ಎಲ್ಲೆಯಲ್ಲಿ ಕೃಷಿ ಜಮೀನುಗಳಿಗೆ ನುಗ್ಗುತ್ತಿದ್ದ ನೀರನ್ನು ಬಂದ್ ಮಾಡಿ ನಾಲೆಗೆ ಹರಿಸಲಾಗಿದೆ.
ಕೆರೆ ತುಂಬಿಸುವ ಯೋಜನೆಯಡಿ ಸುತ್ತೂರು- ಕೋಡಿಮೋಳೆ- ಮಲ್ಲೇದೇವನಹಳ್ಳಿ- ಕುನ್ನಗಾಟ(ಪುಟ್ಟನಪುರ)- ನಾಗವಳ್ಳಿ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಮಲ್ಲದೇವನಹಳ್ಳಿಯಿಂದ ಕುನ್ನಗಾಟದ ಕೆರೆಗೆ ನೀರು ಹರಿಸುವ ಮಧ್ಯೆ ಸಿಗುವ ಜಮೀನುಗಳಿಗೆ ನೀರು ನುಗ್ಗಿ ಬೆಳೆಗಳು ಹಾಳಾಗುತ್ತಿದ್ದವು.
ಈ ಕುರಿತು ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿಯಲ್ಲಿ ಜೂ.29ರಂದು ‘ಜಮೀನುಗಳಿಗೆ ನುಗ್ಗಿದ ನಾಲೆ ನೀರು’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಜಮೀನುಗಳಿಗೆ ನುಗ್ಗಿದ್ದ ನೀರನ್ನು ಮಲ್ಲದೇವನಹಳ್ಳಿಯ ನಾಲೆ ಮೂಲಕ ಹರಿಸಿದ್ದಾರೆ. ಈ ಮೊದಲು ರೈತರ ಮನವಿ ಮೇರೆಗೆ ನಾಲೆಯಲ್ಲಿ ಹರಿಯುತ್ತಿದ್ದ ನೀರನ್ನು ಕೃಷಿಭೂಮಿಗಳ ಮಾರ್ಗದ ಹಳ್ಳಕ್ಕೆ ಬಿಡಲಾಗಿತ್ತು. ಹಳ್ಳದಲ್ಲಿ ಗಿಡಗಂಟಿ ಬೆಳೆದಿರುವುದರಿಂದ ನೀರು ಸರಾಗವಾಗಿ ಹರಿಯದೆ ಕೃಷಿಭೂಮಿಗಳಿಗೆ ನುಗ್ಗುತ್ತಿತ್ತು.
ಇದರಿಂದ ರೈತರಿಗೆ ಸಮಸ್ಯೆಯಾಗುತ್ತಿರುವುದಾಗಿ ತಿಳಿದ ಸುವರ್ಣಾವತಿ ಜಲಾಶಯದ ಎಇಇ ಮಹೇಶ್ ಮರಳಿ ನಾಲೆ ಮಾರ್ಗದಲ್ಲಿ ನೀರು ಹರಿಸಲು ಸೂಚನೆ ನೀಡಿದ್ದಾರೆ. ಅನ್ನದಾತರ ಪರವಾಗಿ ಅಧಿಕಾರಿ ತೋರಿದ ಕಾಳಜಿಗೆ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದರಿಂದಾಗಿ ಜಮೀನುಗಳಲ್ಲಿ ನುಗ್ಗುತ್ತಿದ್ದ ನೀರು ನಿಂತಿದೆ. ಈ ಭಾಗದ ಜಮೀನುಗಳಲ್ಲಿ ಕಬ್ಬು, ಅರಿಶಿಣ ಬೆಳೆಯಲಾಗಿದೆ. ಕೃಷಿ ಭೂಮಿಯೊಳಗೆ ನಿಂತಿರುವ ನೀರು ತಗ್ಗಿದ ಮೇಲೆ ರೈತರು ಕಬ್ಬು ಕಟಾವು ಮಾಡಲಿದ್ದಾರೆ.
ಮಲ್ಲದೇವನಹಳ್ಳಿ ಎಲ್ಲೆಯ ಜಮೀನುಗಳ ಮೇಲೆ ಹರಿದು ಕುನ್ನಗಾಟ ಕೆರೆಗೆ ಸೇರುತ್ತಿದ್ದ ನೀರನ್ನು ಮಂಗಳವಾರದಿಂದ ನಾಲೆ ಮಾರ್ಗಕ್ಕೆ ಬಿಡಲಾಗಿದೆ. ನೀರು ಹರಿಯುತ್ತಿದ್ದರಿಂದ ಕೃಷಿಭೂಮಿಯಲ್ಲಿ ಅಧಿಕ ಪ್ರಮಾಣದ ಜಲ ತುಂಬಿಕೊಂಡು ವ್ಯವಸಾಯ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಈಗ ನೀರು ಬರುವುದು ಸ್ಥಗಿತೊಂಡಿರುವುದರಿಂದ ಕಬ್ಬು ಕಟಾವು ಮಾಡಲು ಅನುಕೂಲವಾಗಿದೆ.
ಆನಂದ ರಾಜು, ನಾಗವಳ್ಳಿ ರೈತ, ಚಾಮರಾಜನಗರ