ಗುಂಡ್ಲುಪೇಟೆ ತಾಲೂಕಿನ ಕಲಿಗೌಡನಹಳ್ಳಿ ಗ್ರಾಮದಲ್ಲಿ ಜೆಜೆಎಂ ಯೋಜನೆಯ ನೀರು ಪೋಲಾಗುತ್ತಿದೆ. 
ಚಾಮರಾಜನಗರ

ಪೋಲಾಗುತ್ತಿದೆ ಜಲಜೀವನ ಮಿಷನ್ ಯೋಜನೆ ನೀರು

ಗುಂಡ್ಲುಪೇಟೆ:

ಗ್ರಾಮಾಂತರ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವ ಜಲಜೀವನ ಮಿಷನ್ ಯೋಜನೆಯ ನೀರು ಪೋಲಾಗುತ್ತಿದ್ದರೂ ಸಂಬಂಧಿಸಿದರು ಯಾವುದೇ ಕ್ರಮಕೈಗೊಳ್ಳದ ಬಗ್ಗೆ ತಾಲೂಕಿನ ಕಲಿಗೌಡನಹಳ್ಳಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಾರಿ ಮಳೆ ಬೀಳದೆ ಕೆರೆಗಳಿಗೆ ನೀರು ತುಂಬಿಸದ ಪರಿಣಾಮ ಕುಡಿಯುವ ನೀರಿಗೆ ಹಾಹಾಕಾರವುಂಟಾಗುತ್ತಿದೆ. ಅಂತರ್ಜಲ ಮಟ್ಟ ಕುಸಿತದಿಂದ ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್ ಮೊರೆ ಹೋಗಿದ್ದಾರೆ. ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಪರದಾಡುತ್ತಿದ್ದಾರೆ.
ಆದರೆ ಕಳೆದ ನಾಲ್ಕು ದಿನಗಳಿಂದ ಕಲಿಗೌಡನಹಳ್ಳಿ ಗ್ರಾಮದಲ್ಲಿ ಪ್ರತಿ ಮನೆಗಳಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಜಲಜೀವನ ಮಿಷನ್ ಯೋಜನೆಯ ಪಂಪ್‌ಹೌಸ್‌ನಿಂದ ಭಾರಿ ಪ್ರಮಾಣದ ನೀರು ಪೋಲಾಗುತ್ತಿದೆ. ಗ್ರಾಮದ ಮನೆಗಳಿಗೆ ಪೂರೈಕೆ ಆಗಬೇಕಾದ ನೀರು ತಗ್ಗು ಪ್ರದೇಶಗಳಲ್ಲಿ ಹರಿದುಹೋಗುತ್ತಿದೆ.
ಈ ಬಗ್ಗೆ ಹಲವಾರು ಬಾರಿ ಮಾಹಿತಿ ನೀಡಿದರೂ ನೀರು ಪೋಲಾಗುವುದನ್ನು ನಿಲ್ಲಿಸಿಲ್ಲ. ಆದ್ದರಿಂದ ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ವ್ಯರ್ಥವಾಗಿ ಹರಿಯುವ ನೀರನ್ನು ಸಮರ್ಪಕವಾಗಿ ಬಳಕೆ ಮಾಡಲು ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರಾದ ಕುಮಾರ್ ಒತ್ತಾಯಿಸಿದ್ದಾರೆ.