ಕಾಂಗ್ರೆಸ್ ಎಸ್ಸಿ ಘಟಕದ ತಾಲೂಕು ಅಧ್ಯಕ್ಷ ರಾಮಲಿಂಗಂ
- ಬಜೆಟ್‌ನಲ್ಲಿ 490 ಕೋಟಿ ರೂ.ವೆಚ್ಚ
- ಕಾಂಗ್ರೆಸ್ ಎಸ್ಸಿ ಘಟಕದ ತಾಲೂಕು ಅಧ್ಯಕ್ಷ ರಾಮಲಿಂಗಂ
ಹನೂರು: ಈ ಬಾರಿಯ ಬಜೆಟ್‌ನಲ್ಲಿ 490 ಕೋಟಿ ರೂ.ವೆಚ್ಚದಲ್ಲಿ ಉಡುತೊರೆಹಳ್ಳ ಜಲಾಶಯದ ನೀರಾವರಿ ಯೋಜನೆಗೆ ಅನುಮೋದನೆ ದೊರೆತಿರುವುದು ಸಂತಸದ ಸಂಗತಿ ಎಂದು ಕಾಂಗ್ರೆಸ್ ಎಸ್ಸಿ ಘಟಕದ ತಾಲೂಕು ಅಧ್ಯಕ್ಷ ರಾಮಲಿಂಗಂ ತಿಳಿಸಿದರು.
ತಾಲೂಕಿನ ಉಡುತೊರೆಹಳ್ಳ ಜಲಾಶಯದಿಂದ ಮಾರ್ಟಳ್ಳಿ ಭಾಗದ ಕೆರೆ-ಕಟ್ಟೆಗಳಿಗೆ ಕಾವೇರಿ ನದಿ ಮೂದಿಂದ ನೀರು ತುಂಬಿಸಬೇಕೆಂಬುದು ರೈತರ ಹಲವು ವರ್ಷಗಳ ಬೇಡಿಕೆ. ಹಾಗಾಗಿ 2021ರಲ್ಲಿ ಅಂದಿನ ಶಾಸಕ ಆರ್.ನರೇಂದ್ರ ಅವರು 185 ಕೋಟಿ ರೂ. ವೆಚ್ಚದಲ್ಲಿ ಉಡುತೊರೆಹಳ್ಳ ನೀರಾವರಿ ಯೋಜನೆಗೆ ಡಿಪಿಆರ್ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದರು. ಆದರೆ ಅನುದಾನ ದೊರಕದ ಪರಿಣಾಮ ಈ ಕಾರ್ಯ ನನೆಗುದಿಗೆ ಬಿದ್ದಿತ್ತು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಚುವಾಣೆಯ ವೇಳೆ ಈ ಭಾಗಕ್ಕೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಸುನೀಲ್ ಬೋಸ್ ಆಗಮಿಸಿದ್ದ ವೇಳೆ ಕುಡಿಯುವ ನೀರು, ರಸ್ತೆ, ವಿದ್ಯುತ್ ಸೇರಿದಂತೆ ಇತರ ಅಗತ್ಯ ಮೂಲ ಸೌಕರ್ಯ ಒದಗಿಸುವಂತೆ ಜನತೆ ಮನವಿ ಮಾಡಿದ್ದರು. ಇದಕ್ಕೆ ಮಹದೇವಪ್ಪ ಅವರು ಮ.ಬೆಟ್ಟದಲ್ಲಿ ಕ್ಯಾಬಿನೆಟ್ ಸಭೆ ನಡೆಸಿ ನೀರಾವರಿ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ಇದೀಗ ಹಾಲಿ ಶಾಸಕ ಎಂ.ಆರ್.ಮಂಜುನಾಥ್ ಅವರೂ ಸಹ ನೀರಾವರಿ ಯೋಜನೆಯ ಅನುಷ್ಠಾನಕ್ಕೆ ಸರ್ಕಾರವನ್ನು ಒತ್ತಾಯಿಸಿದ್ದರು. ಮಹದೇವಪ್ಪ ಅವರು ಇನ್ನಿಲ್ಲದ ಶ್ರಮ ವಹಿಸಿದ್ದರು. ಹಾಗಾಗಿ ಮುಖ್ಯಮಂತ್ರಿ ಅವರು ಬಜೆಟ್‌ನಲ್ಲಿ ಉಡುತೊರೆಹಳ್ಳ ನೀರಾವರಿ ಯೋಜನೆಗೆ ಅನುಮೋದನೆ ನೀಡಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಮಾರ್ಟಳ್ಳಿ ಭಾಗದ ಕೀರೆಪಾತಿ ಡ್ಯಾಂ, ಹಾಲೇರಿ ಕೆರೆ ಹಾಗೂ ಈ ಭಾಗದ ಕೆರೆಗಳಿಗೆ ಕಾವೇರಿ ನೀರು ಹರಿದು ಬರಲಿದೆ. ಈ ಯೋಜನೆಯಿಂದ ರೈತರಲ್ಲಿ ಸಂತಸ ಮನೆ ಮಾಡಿದೆ. ಈ ಯೋಜನೆಗೆ ಶ್ರಮಿಸಿದ ಸಚಿವರಾದ ಡಾ.ಎಚ್.ಸಿ ಮಹದೇವಪ್ಪ, ಕೆ.ವೆಂಕಟೇಶ್, ಸಂಸದ ಸುನೀಲ್ ಬೋಸ್, ಶಾಸಕ ಎಂ.ಆರ್ ಮಂಜುನಾಥ್ ಹಾಗೂ ಮಾಜಿ ಶಾಸಕ ಆರ್.ನರೇಂದ್ರ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಕಾಂಗ್ರೆಸ್ ಎಸ್ಸಿ ವಿಭಾಗದ ಉಪಾಧ್ಯಕ್ಷ ಗುರುದೇವ್, ಪಪಂ ಮಾಜಿ ಸದಸ್ಯ ಸಂಪತ್‌ಕುಮಾರ್, ಮುಖಂಡರಾದ ಮುತ್ತುಮಾದ, ಗಣೇಶ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.