ಹನೂರು ತಾಲೂಕಿನ ಶಾಗ್ಯ ಸಮೀಪದ ಕಳ್ಳಿದೊಡ್ಡಿ ಗ್ರಾಮದಲ್ಲಿ ಮೇವಿಗಾಗಿ ತೆರಳುತ್ತಿರುವ ಜಾನುವಾರುಗಳು.
- ದಿನೇ ದಿನೇ ಹೆಚ್ಚಾಗುತ್ತಿರುವ ತಾಪಮಾನ
- ಜಿಲ್ಲಾಡಳಿತ ಮುನ್ನೆಚ್ಚರಿಕೆವಹಿಸುವಂತೆ ಆಗ್ರಹ
- ಜಾನುವಾರುಗಳಿಗೆ ನೀರಿನ ಸಮಸ್ಯೆ
ಚಾಮರಾಜನಗರ: ಜಿಲ್ಲೆಯಲ್ಲಿ ಬೇಸಿಗೆ ಪ್ರಾರಂಭವಾಗುತ್ತಲೇ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಕುಡಿಯುವ ನೀರು ಸಮಸ್ಯೆ ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗುವ ಸಾಧ್ಯತೆ ಇದೆ.
ಜಿಲ್ಲೆಯ ಚಾಮರಾಜನಗರ, ಹನೂರು, ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಯಳಂದೂರು ತಾಲೂಕಿನ ವ್ಯಾಪ್ತಿಯಲ್ಲಿ ಬಿಸಿಲಿನ ತಾಪಮಾನಕ್ಕೆ ಜನ-ಜಾನುವಾರುಗಳು ತತ್ತರಿಸುವಂತಾಗಿದೆ. ಮುಂದಿನ ದಿನಗಳಲ್ಲಿ ಕೆರೆ, ಕಾಲುವೆಗಳಲ್ಲಿ ನೀರಿನ ಅಭಾವ ಸೃಷ್ಟಿಯಾಗುವ ಸಾಧ್ಯತೆ ಇದ್ದು, ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿನ ಕೊರತೆ ಉಂಟಾಗುವ ಪರಿಸ್ಥಿತಿ ಎದುರಾಗಲಿದೆ ಎಂಬ ಆತಂಕ ಮನೆಮಾಡಿದೆ. ಈಗಾಗಲೇ ಜಿಲ್ಲೆಯ ವ್ಯಾಪ್ತಿಯಲ್ಲಿ ಬೆಳೆದ ಮೇವುಗಳನ್ನು ಹೊರ ಜಿಲ್ಲೆ ಮತ್ತು ರಾಜ್ಯಗಳಿಗೆ ಪೂರೈಕೆ ಮಾಡಲಾಗಿದೆ ಎಂದು ರೈತಾಪಿವರ್ಗ ಆರೋಪಿಸಿದೆ. ಕಾಡಂಚಿನ ಗ್ರಾಮಗಳಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ತಲೆದೂರಿದ್ದು, ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ ಎಂದು ಹೇಳಲಾಗುತ್ತಿದೆ. ಕಳೆದ ವರ್ಷದಲ್ಲಿ ಉತ್ತಮ ಮಳೆಯಾಗದೇ ಕೆರೆ-ಕಟ್ಟೆಗಳಲ್ಲಿ ನೀರಿಲ್ಲದಂತಾಗಿದೆ. ಪರಿಣಾಮ ಅಂತರ್ಜಲ ಕುಸಿತದಿಂದ ಬೋರ್‌ವೆಲ್‌ಗಳಲ್ಲಿ ಸಮರ್ಪಕವಾಗಿ ನೀರು ಪೂರೈಕೆಯಾಗದೇ ಕೃಷಿ ಚಟುವಟಿಕೆಗಳಿಗೆ ಸಮಸ್ಯೆಯಾಗಿದೆ. ಈ ಬಾರಿಯ ಬೇಸಿಗೆ ಮತ್ತಷ್ಟು ಸಮಸ್ಯೆಗಳನ್ನು ತಂದೊಡ್ಡುವ ಆತಂಕ ಎದುರಾಗಿದ್ದು, ಕುಡಿಯುವ ನೀರು ಹಾಗೂ ಮೇವಿನ ಕೊರತೆ ಕಾಡದಿರುವಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಬೇಕಿದೆ. ಈ ವಾರದ ಲೌಡ್‌ಸ್ಪೀಕರ್‌ಗಳಲ್ಲಿ ಸಾರ್ವಜನಿಕರು ಹಾಗೂ ಅಧಿಕಾರಿಗಳಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ.
ಜಾಗೇರಿ ವ್ಯಾಪ್ತಿಗೆ ಬರುವ ಪಾಸ್ಕಲ್ ನಗರ, ಸಿ.ಆರ್.ನಗರ, ಶಿಲುವೈಪುರ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಬಹಳ ಕುಸಿದಿದೆ. ಬೇಸಿಗೆ ಕಾಲದಲ್ಲಿ ಪ್ರತಿ ವರ್ಷವೂ ಕುಡಿಯುವ ನೀರಿಗೆ ಸಮಸ್ಯೆಯಾಗುತ್ತದೆ. ಜನರು ಕುಡಿಯುವ ನೀರಿಗೆ ಕೃಷಿ ಜಮೀನುಗಳ ಬೋರನ್ನು ಅವಲಂಬಿಸಿರುತ್ತಾರೆ. ಇನ್ನು 15 ದಿನ ಕಳೆದರೆ ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಮೇವಿಗೂ ಅಭಾವ ಉಂಟಾಗಲಿದ್ದು, ಹೆಚ್ಚಿನ ಬೆಲೆಕೊಟ್ಟು ಜಾನುವಾರುಗಳಿಗೆ ಮೇವು ಖರೀದಿ ಮಾಡಬೇಕಾಗುತ್ತದೆ.
ಚಾರ್ಲಿ, ಉಪಾಧ್ಯಕ್ಷ, ರೈತ ಸಂಘ, ಕೊಳ್ಳೇಗಾಲ
*ಹೊರರಾಜ್ಯಕ್ಕೆ ಮೇವು ಸಾಗಾಣೆ
ತಾಲೂಕಿನ ಜಕ್ಕಳ್ಳಿ, ಜಾಗೇರಿ ಹಾಗೂ ಚಿಕ್ಕಲ್ಲೂರು ಭಾಗದ ವಿವಿಧ ಗ್ರಾಮಗಳಲ್ಲಿ ಹೆಚ್ಚಾಗಿ ನೀರು ಹಾಗೂ ಮೇವಿನ ಅಭಾವ ಉಂಟಾಗುತ್ತದೆ. ತಾಲೂಕಿನ ರೈತರು ಸಾಕಷ್ಟು ಬಾರಿ ದೂರಿದರೂ, ಈಗಾಗಲೇ ಮೇವನ್ನು ಹೊರ ರಾಜ್ಯಕ್ಕೆ ಸಾಗಿಸಲಾಗಿದೆ. ನೀರು ಹಾಗೂ ಮೇವು ಸಮಸ್ಯೆ ಆದ ಬಳಿಕ ಕ್ರಮವಹಿಸುವ ಬದಲು, ಜಿಲ್ಲಾಡಳಿತ ನೀರು ಹಾಗೂ ಮೇವಿನ ಕೊರತೆ ಆಗದಂತೆ ಮುನ್ನೆಚ್ಚರಿಕೆ ಕ್ರಮವಹಿಸಬೇ ಕು.
ಶೈಲೇಂದ್ರ, ಕಾರ್ಯಾಧ್ಯಕ್ಷ, ಜಿಲ್ಲಾ ರೈತ ಸಂಘ, ಕೊಳ್ಳೇಗಾಲ
*ಜಾನುವಾರುಗಳಿಗೆ ನೀರಿನ ಸಮಸ್ಯೆ
ರಾಮಾಪುರ ಭಾಗದ ಪಳನಿಮೇಡು ಸೇರಿದಂತೆ ಚಂಗಧಾರಹಳ್ಳಿ, ಕೆಂಪಯ್ಯನಹಟ್ಟಿ, ಮಾಮರದೊಡ್ಡಿ ಹಾಗೂ ಇನ್ನಿತರೆ ಗ್ರಾಮಗಳಲ್ಲಿ ಬೇಸಿಗೆ ಮುನ್ನವೇ ಜಾನುವಾರುಗಳಿಗೆ ನೀರು ಹಾಗೂ ಮೇವಿನ ಸಮಸ್ಯೆ ತಲೆದೂರಿದೆ. ರೈತರು ತುಂಬಾ ಸಮಸ್ಯೆ ಎದುರಿಸುವಂತಾಗಿದೆ. ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಲಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಜಾನುವಾರುಗಳಿಗೆ ನೀರು ಹಾಗೂ ಮೇವನ್ನು ಒದಗಿಸಲು ಮುಂದಾಗಬೇಕಿದೆ.
ರಾಜಮಣಿ, ರೈತ ಮಹಿಳೆ, ಪಳನಿಮೇಡು, ಹನೂರು
*ಜನ-ಜಾನುವಾರು ಪರಿತಪಿಸುವಂತಾಗಿದೆ
ತಾಲೂಕಿನಲ್ಲಿ ಈ ಬಾರಿ ಸಮರ್ಪಕ ಮಳೆಯಾಗದ ಪರಿಣಾಮ ಕೆಲವು ಗ್ರಾಮಗಳಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ತಲೆದೂರಿದ್ದು, ಜನರು ಪರಿತಪಿಸುತ್ತಿದ್ದಾರೆ. ಕೆಲವು ಗ್ರಾಮಗಳಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಮುಂದಿನ ದಿನಗಳಲ್ಲಿ ಮೇವಿನ ಸಮಸ್ಯೆ ತಲೆದೂರುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ಸಂಬಂಧಪಟ್ಟವರು ಜಾನುವಾರುಗಳಿಗೆ ನೀರು ಹಾಗೂ ಮೇವಿಗೆ ಸಮಸ್ಯೆಯಾಗದಂತೆ ಅಗತ್ಯ ಕ್ರಮವಹಿಸಬೇಕು.
ಸುಚಿತ್ರಾ, ಕಣ್ಣೂರು ನಿವಾಸಿ, ಹನೂರು
ಈಗಾಗಲೇ ಅಧಿಕಾರಿಗಳ ಸಭೆ ನಡೆಸಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಸೂಚನೆ ನೀಡಲಾಗಿದೆ. ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊಳವೆಬಾವಿಗಳಲ್ಲಿ ನೀರಿನ ಕೊರತೆಯಾಗಿದೆ. ಸದ್ಯ ಜಲಜೀವನ್ ಮಿಷನ್ ಯೋಜನೆಯಲ್ಲಿ ಮನೆಮನೆಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಪ್ರತಿ ಪಂಚಾಯತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ತೊಟ್ಟಿ ನಿರ್ಮಿಸಿ ನೀರು ತುಂಬಿಸಲಾಗುತ್ತಿದ್ದು, ಜಾನುವಾರುಗಳಿಗೂ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ.
ಎಂ.ಎಸ್.ತನ್ಮಯಿ, ತಹಸೀಲ್ದಾರ್, ಗುಂಡ್ಲುಪೇಟೆ
ಈಗಾಗಲೇ ಕೊಳವೆಬಾವಿಗಳಲ್ಲಿ ನೀರಿನ ಕೊರತೆಯಾಗುತ್ತಿದ್ದು, ಕುಡಿಯುವ ನೀರಿನ ಸರಬರಾಜು ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕೆರೆಕಟ್ಟೆಗಳಲ್ಲಿ ನೀರು ತುಂಬಿಸದ ಪರಿಣಾಮ ಕೃಷಿಗೆ ತೊಡಕುಂಟಾಗಿದೆ. ರೈತರು ಜಮೀನಿನಲ್ಲಿ ಬೆಳೆದಿರುವ ಬೆಳೆ ಉಳಿಸಿಕೊಳ್ಳಲು ಪರದಾಡುವಂತಾಗಿದೆ.
ಬಿ.ಎಲ್.ಪ್ರಸಾದ್, ಬಲಚವಾಡಿ ನಿವಾಸಿ, ಗುಂಡ್ಲುಪೇಟೆ
ಬೇಸಿಗೆ ಸಮೀಪಸುತ್ತಿದಂತೆ ಗ್ರಾಮೀಣ ಭಾಗದಲ್ಲಿ ಕುಡಿಯಲು ನೀರಿನ ಅಭಾವ ಸೃಷ್ಟಿಯಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತವು ಕಟ್ಟುನಿಟ್ಟಿನ ಕ್ರಮಗಳಾದ ವಿದ್ಯುತ್, ದುರಸ್ತಿ ಕೆಲಸದ ಸಿಬ್ಬಂದಿಗಳ ವರ್ಗ , ಅನುದಾನ ಸೇರಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಅರಣ್ಯ ಪ್ರದೇಶದಲ್ಲಿ ಸಹ ಕೆರೆಗಳಲ್ಲಿ ನೀರು ಸಂಗ್ರಹವಾಗುವಂತೆ ಗಮನ ನೀಡಬೇಕು.
ಮಮತಾ, ಎಂ.ದೇವರಹಳ್ಳಿ ನಿವಾಸಿ, ಯಳಂದೂರು
*ಕೆರೆ-ಕಟ್ಟೆಗಳು ಬರಿದಾಗುತ್ತಿವೆ
ಜಿಲ್ಲೆಯಲ್ಲಿ ಬೇಸಿಗೆ ಪ್ರಾರಂಭವಾಗುತ್ತಿದ್ದು, ಕೆರೆ-ಕಟ್ಟೆಗಳಲ್ಲಿ ನೀರು ತುಂಬಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ನೀರಾವರಿ ಇಲಾಖೆಯ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಇದರಿಂದ ಕೆರೆ-ಕಟ್ಟೆಗಳು ಬೇಸಿಗೆಗೂ ಮುನ್ನ ಬರಿದಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಜಾನುವಾರುಗಳಿಗೆ ನೀರು ಪೂರೈಕೆ ಮಾಡಲು ನಿರ್ಮಾಣವಾಗಿರುವ ತೊಟ್ಟಿಗಳಲ್ಲಿ ನೀರು ಹರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು.
ನಂಜುಂಡಸ್ವಾಮಿ, ಮಾಂಬಳ್ಳಿ ನಿವಾಸಿ, ಯಳಂದೂರು
ಈಗಾಗಲೇ ಜಿಲ್ಲೆಯಿಂದ ಹೊರ ರಾಜ್ಯಗಳಿಗೆ ಮೇವನ್ನು ಮಾರಾಟ ಮಾಡಲಾಗಿರುವುದರಿಂದ ಬೇಸಿಗೆ ಸಮಯದಲ್ಲಿ ಮೇವಿನ ಕೊರತೆಯಾಗಲಿದೆ. ಈ ಸಂಬಂಧ ಜಿಲ್ಲಾಡಳಿತದ ಗಮನಕ್ಕೂ ತಂದಿದ್ದೇವೆ. ಒಂದು ವೇಳೆ ಮೇವಿಗೆ ಕೊರತೆ ಉಂಟಾದರೆ, ಜಿಲ್ಲಾಡಳಿತವೇ ನೇರ ಹೊಣೆಯಾಗಲಿದೆ. ಗುಂಡ್ಲುಪೇಟೆ, ಸಂತೇಮರಹಳ್ಳಿ, ಕೊಳ್ಳೇಗಾಲ ಮತ್ತು ಹನೂರು ಭಾಗದಲ್ಲಿ ಅಂತರ್ಜಲ ಕುಸಿತ ಕಂಡಿದ್ದು, ಮುಂದಿನ ದಿನಮಾನದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಬಂದೊದಗಲಿದೆ ಎಂಬ ಆತಂಕ ಎದುರಾಗಿದೆ.
ಹೊನ್ನೂರು ಬಸವಣ್ಣ, ರೈತ ಮುಖಂಡ, ಚಾಮರಾಜನಗರ
*22 ವಾರಗಳಿಗೆ ಮೇವು ಲಭ್ಯವಿದೆ
ಒಂದು ಅಂದಾಜಿನಂತೆ ದಿನಕ್ಕೆ ಒಂದು ಜಾನುವಾರಿಗೆ 6 ಕೆ.ಜಿ ಮೇವು ಬೇಕಾಗುತ್ತದೆ. ಅದರಂತೆ ನೋಡಿದರೆ ಜಿಲ್ಲೆಯಲ್ಲಿ ಸುಮಾರು 22 ವಾರಗಳಿಗೆ ಆಗುವಷ್ಟು ಮೇವು ಲಭ್ಯವಿದೆ. 100 ರಾಸುಗಳಲ್ಲಿ 10 ರಾಸುಗಳಿಗೆ ಮೇವು ಲಭ್ಯವಾಗದೇ ಇದ್ದರೂ ಅದು ಮೇವು ಕೊರತೆ ಆದಂತೆ. ಆಗಾಗಿ ಜಿಲ್ಲೆಯಲ್ಲಿ ಮೇವು ಕೊರತೆ ಉಂಟಾಗುವ ಹಾಗೂ ಬರಪೀಡಿತ ಗ್ರಾಮಗಳನ್ನು ಪಟ್ಟಿಮಾಡಿ ಸಲ್ಲಿಸಲಾಗಿದೆ. ಮುಂದಿನ ಮೂರು ತಿಂಗಳು ಜಾನುವಾರುಗಳಿಗೆ ಮೇವು ಕೊರತೆಯಾಗದಂತೆ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಲಾಗಿದೆ.
ಡಾ.ಮಂಜುನಾಥ್, ಉಪನಿರ್ದೇಶಕ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಚಾಮರಾಜನಗರ