ಬೂದುಬಾಳು ಗ್ರಾಮದಲ್ಲಿ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುವ ಕಾರ್ಯಕ್ಕೆ ಶಾಸಕ ಎಂ.ಆರ್ ಮಂಜುನಾಥ್ ಚಾಲನೆ ನೀಡಿದರು. ಶ್ರೀನಿವಾಸ್, ಸಿದ್ದರಾಜು, ಮಹದೇವ ಇತರರಿದ್ದರು.
ಹನೂರು : ತಾಲೂಕಿನಲ್ಲಿ ತೀವ್ರವಾಗಿ ನೀರಿನ ಸಮಸ್ಯೆ ತಲೆದೂರಿರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕಾವೇರಿ ಕುಡಿಯುವ ನೀರು ಪೂರೈಸುವ ಕಾರ್ಯಕ್ಕೆ ಭಾನುವಾರ ಸಂಜೆ ಶಾಸಕ ಎಂ.ಆರ್ ಮಂಜುನಾಥ್ ಬೂದುಬಾಳು ಗ್ರಾಮದಲ್ಲಿ ಚಾಲನೆ ನೀಡಿದರು.
ಈ ವೇಳೆ ಅವರು ಮಾತನಾಡಿ, ತಾಲೂಕಿನಲ್ಲಿ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಜನರು ತೊಂದರೆ ಪಡುತ್ತಿದ್ದಾರೆ. ಕುಡಿಯುವ ನೀರನ್ನು ಒದಗಿಸುವುದು ನಮ್ಮ ಆದ್ಯ ಕರ್ತವ್ಯ. ಹಾಗಾಗಿ ಬೂದುಬಾಳು ಗ್ರಾಮದ ನೀರು ಸರಬರಾಜು ಘಟಕದಿಂದ ಟ್ಯಾಂಕರ್ ಮೂಲಕ ಕಾವೇರಿ ನೀರು ಪೂರೈಸಲು ತುರ್ತು ಕ್ರಮ ಕೈಗೊಳ್ಳಲಾಗಿದೆ ಎಂದರು.
ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿರುವ ರಾಮಾಪುರ, ಕೌದಳ್ಳಿ, ಅಜ್ಜೀಪುರ, ಎಲ್ಲೇಮಾಳ, ಪಿ.ಜಿ ಪಾಳ್ಯ ಹಾಗೂ ಹುತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಪೂರೈಸಲು ಚಾಲನೆ ನೀಡಲಾಗಿದೆ. ಅಂತರ್ಜಲ ಮಟ್ಟ ಕುಸಿತ ಪರಿಣಾಮ ನೀರಿನ ಸಮಸ್ಯೆ ತಲೆದೂರಿರುವುದರಿಂದ ಗ್ರಾಮಗಳಿಗೆ ಸದ್ಯ ಟ್ಯಾಂಕರ್ ಮೂಲಕ ತಾತ್ಕಲಿಕವಾಗಿ ನೀರು ಪೂರೈಕೆ ಮಾಡಲಾಗುತ್ತಿದೆ. ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶ್ರೀನಿವಾಸ್, ಸಿದ್ದರಾಜು. ಮಹದೇವ, ರಾಜೇಶ್ ಹಾಗೂ ಇನ್ನಿತರರಿದ್ದರು.