ಯಳಂದೂರು ಪಟ್ಟಣದ ಗೌರೇಶ್ವರ ದೇಗುಲ ಹಾಗೂ ಬಳೇಮಂಟಪದ ಪಕ್ಕದಲ್ಲಿ ಕಸವನ್ನು ಬಿಸಾಡಿರುವುದು. 
ಚಾಮರಾಜನಗರ

ಯಳಂದೂರಲ್ಲಿ ತ್ಯಾಜ್ಯದಿಂದ ಅನೈರ್ಮಲ್ಯ ಸೃಷ್ಟಿ

ಪ್ರಮುಖ ಮುಖ್ಯಾಂಶಗಳು

  • ಪ್ರಾಚೀನ ಐತಿಹಾಸಿಕ ಬಳೇಮಂಟಪ
  • ಗೌರೇಶ್ವರ ದೇಗುಲ, ದಿವಾನ್ ಪೂರ್ಣಯ್ಯ ವಸ್ತು ಸಂಗ್ರಹಾಲಯದ ಕಟ್ಟಡ ಸಮುಚ್ಚಯ ಮುಂಭಾಗ
ಯಳಂದೂರು: ಪಟ್ಟಣದಲ್ಲಿನ ಪ್ರಾಚೀನ ಐತಿಹಾಸಿಕ ಬಳೇಮಂಟಪ, ಗೌರೇಶ್ವರ ದೇಗುಲ, ದಿವಾನ್ ಪೂರ್ಣಯ್ಯ ವಸ್ತು ಸಂಗ್ರಹಾಲಯದ ಕಟ್ಟಡ ಸಮುಚ್ಚಯ ಮುಂಭಾಗ ಹಾಗೂ ಅಕ್ಕಪಕ್ಕ ಕಸದ ರಾಶಿ ಹೆಚ್ಚಾಗಿದ್ದು, ದೇಗುಲಕ್ಕೆ ಬರುವ ಭಕ್ತರು, ಪ್ರವಾಸಿಗರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ.
ದಿವಾನ್ ಪೂರ್ಣಯ್ಯ ವಸ್ತು ಸಂಗ್ರಹಾಲಯದ ಮುಂಭಾಗದಲ್ಲಿರುವ ಖಾಲಿ ಜಾಗದಲ್ಲಿ ಪಾನಿಪೂರಿ, ಮೀನು, ಚಿಕನ್ ಕಬಾಬ್ ಸೆಂಟರ್, ಎಗ್‌ರೈಸ್, ಬೋಂಡ ಬಜ್ಜಿ, ಮಾರಾಟ ಮಾಡುವ ಹತ್ತಾರು ತಳ್ಳುಗಾಡಿಗಳು ಸಂಜೆಯಾದರೆ ಇಲ್ಲಿ ಬಂದು ನಿಲ್ಲುತ್ತವೆ. ಹೀಗಾಗಿ ಈ ಜಾಗ ರಾತ್ರಿ ವೇಳೆ ಚಾಟ್ ಸ್ಪಾಟ್ ಆಗಿ ಮಾರ್ಪಡುತ್ತದೆ. ಇದರ ಪಕ್ಕದಲ್ಲೇ ಐತಿಹಾಸಿಕ ಬಳೇಮಂಟಪ ಹಾಗೂ ಗೌರೇಶ್ವರ ದೇಗುಲವಿದ್ದು, ಇದರ ಸುತ್ತುಗೋಡೆ ಸುತ್ತಲೂ ಪೇಪರ್, ತಿಂಡಿ-ತಿನಿಸುಗಳ ತ್ಯಾಜ್ಯ, ಕೈ ತೊಳೆಯುವ ನೀರು ಸಂಗ್ರಹವಾಗುತ್ತದೆ. ಇದರ ಪರಿಣಾಮ ಈ ಜಾಗದಲ್ಲಿ ನಿತ್ಯ ಕಸ ಸಂಗ್ರಹವಾಗುತ್ತದೆ.
ವಿದ್ಯಾರ್ಥಿಗಳಿಗೂ ತೊಂದರೆ: ದಿವಾನ್ ಪೂರ್ಣಯ್ಯ ವಸ್ತು ಸಂಗ್ರಹಾಲಯ ಪಕ್ಕದಲ್ಲಿರುವ ಖಾಲಿ ಜಾಗ ಮೂತ್ರ ವಿಸರ್ಜಿಸುವ ಸ್ಥಳವಾಗಿ ಮಾರ್ಪಟ್ಟಿದ್ದು, ಗಬ್ಬು ನಾರುವ ಮೂಲಕ ಅನೈರ್ಮಲ್ಯ ಹೆಚ್ಚಾಗಿದೆ. ಇಲ್ಲೂ ಕೂಡ ಕಸದ ರಾಶಿ ಸಂಗ್ರಹವಾಗುತ್ತದೆ. ಇದರ ಪಕ್ಕದಲ್ಲೇ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಿದ್ದು ಇಲ್ಲಿನ ವಿದ್ಯಾರ್ಥಿಗಳಿಗೂ ತೊಂದರೆಯಾಗುತ್ತಿದೆ. ನಿತ್ಯ ಶಾಲೆಗೆ ಬರುವ ಮಕ್ಕಳು ಮೂಗು ಮುಚ್ಚಿ ಪಾಠ ಕೇಳುವ ಪರಿಸ್ಥಿತಿ ಇದೆ.
ಮಕ್ಕಳು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಇಲ್ಲಿ ನಿಲ್ಲುವ ತಿಂಡಿ-ತಿನಿಸು ಮಾರುವ ಅಂಗಡಿಗಳನ್ನು ಬೇರೆಡೆ ಸ್ಥಳಾಂತರ ಮಾಡಬೇಕು. ಈ ಜಾಗವು ಪ್ರಾಚೀನ ಸ್ಮಾರಕಗಳ ತಾಣವಾಗಿದ್ದು, ಇಲ್ಲಿ ಸ್ವಚ್ಛತೆ ಕಾಪಾಡಬೇಕು ಎಂಬ ಕೂಗಿಗೆ ಯಾರೂ ತಲೆಕೆಡಿಸಿಕೊಂಡಿಲ್ಲ ಎಂಬುದು ಸ್ಥಳೀಯರ ಆರೋಪ.
ಇನ್ನು ಈ ಜಾಗದಲ್ಲಿ ನಿತ್ಯ ಸಂಗ್ರಹವಾಗುವ ಕಸವನ್ನು ವಿಲೇವಾರಿ ಮಾಡುತ್ತಿಲ್ಲ. ಜನರು ತಿಂದು ಬಿಸಾಡಿದ ಆಹಾರ ಪದಾರ್ಥಗಳ ತ್ಯಾಜ್ಯವೇ ಹೆಚ್ಚಾಗಿರುವ ಕಾರಣ ಇದು ಇಲ್ಲೇ ಕೊಳೆತು ದುರ್ವಾಸನೆ ಬೀರುತ್ತಿದೆ. ಅಲ್ಲದೆ ಇಲ್ಲಿರುವ ಕಾಂಪೌಂಡ್‌ನ ಅಕ್ಕಪಕ್ಕದಲ್ಲಿ ಗಿಡಗಂಟಿ ಬೆಳೆದಿದ್ದು ಇದನ್ನೂ ಕೂಡ ತೆರವುಗೊಳಿಸಿಲ್ಲ. ಪರಿಣಾಮ ಕೆಟ್ಟ ವಾಸನೆ ಬೀರುತ್ತಿದೆ. ಅಲ್ಲದೆ, ಈ ಜಾಗದಲ್ಲಿ ಮೀನು, ಚಿಕನ್‌ನ ತುಂಡುಗಳು ಬೀಳುವುದರಿಂದ ಬೀದಿ ನಾಯಿಗಳ ಸಂಖ್ಯೆಯೂ ಹೆಚ್ಚಾಗಿದೆ. ಶಾಲೆಗೆ ಬರುವ ವಿದ್ಯಾರ್ಥಿನಿಯರು ಸೇರಿದಂತೆ ಮಕ್ಕಳು, ವಯೋವೃದ್ಧರು ನಾಯಿ ದಾಳಿ ನಡೆಸಬಹುದೆಂಬ ಭಯದೊಂದಿಗೆ ಹೋಗುವ ಪರಿಸ್ಥಿತಿ ಇದೆ. ಹಲವು ಬಾರಿ ಬೀದಿ ನಾಯಿಗಳು ಹಲವರ ಮೇಲೆ ಇಲ್ಲಿ ದಾಳಿ ಮಾಡಿದ ಉದಾಹರಣೆಯೂ ಇದೆ.
ಅವಘಡ ಸಂಭವಿಸುವ ಮುನ್ನ ಸಂಬಂಧಪಟ್ಟವರು ಇನ್ನಾದರೂ ಎಚ್ಚೆತ್ತು ಅಗತ್ಯ ಕ್ರಮ ವಹಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂಬುದು ಸ್ಥಳೀಯರ ಆಗ್ರಹ.
ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಲ್ಲುವ ಪಾನೀಪುರಿ, ಗೋಬಿ ಮಂಚೂರಿ, ಚಿಕ್ಕನ್ ಕಬಾಬ್, ಹಣ್ಣು, ತಿಂಡಿ ಸೇರಿದಂತೆ ತಳ್ಳುಗಾಡಿಯವರು ಪಂಚಾಯಿತಿಗೆ ಸುಂಕ ಪಾವತಿ ಮಾಡುತ್ತಾರೆ. ಇಲ್ಲಿ ಕಸವನ್ನು ಬಿಸಾಡಬಾರದು. ಬದಲಾಗಿ ಅದನ್ನು ಸಂಗ್ರಹಿಸಿ ಪಂಚಾಯಿತಿಯಿಂದ ಬರುವ ಕಸದ ವಾಹನಕ್ಕೆ ನೀಡಬೇಕು ಎಂದು ಸೂಚನೆ ನೀಡಲಾಗಿದೆ. ಆದರೂ ಕಸವನ್ನು ಬಿಸಾಡಲಾಗುತ್ತಿದೆ ಎಂಬ ದೂರು ಇದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಸೂಚನೆ ನೀಡಿ ಕಸವನ್ನು ಬಿಸಾಡದಂತೆ ತಿಳಿ ಹೇಳಲಾಗುವುದು. ಅಲ್ಲದೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ವಹಿಸಲಾಗುವುದು.
ರಾಘವೇಂದ್ರ ಆರೋಗ್ಯ ನಿರೀಕ್ಷಕ, ಪಟ್ಟಣ ಪಂಚಾಯಿತಿ, ಯಳಂದೂರು